ADVERTISEMENT

ನಾಳೆ ಸಚಿವಾಲಯ ಬಂದ್‌ಗೆ ಕರೆ ಕೊಟ್ಟ ನೌಕರರು

​ಪ್ರಜಾವಾಣಿ ವಾರ್ತೆ
Published 25 ಮೇ 2022, 20:09 IST
Last Updated 25 ಮೇ 2022, 20:09 IST

ಬೆಂಗಳೂರು: ಸಚಿವಾಲಯದ 542 ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ 27ರಂದು ಸಚಿವಾಲಯ ಬಂದ್ ಮಾಡಲು ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘ ನಿರ್ಧರಿಸಿದೆ.

'ಆಡಳಿತ ಸುಧಾರಣೆಯ ನೆಪದಲ್ಲಿ ಸಚಿವಾಲಯದ ಹಲವು ಶಾಖೆಗಳನ್ನು ವಿಲೀನ ಅಥವಾ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಅಲ್ಲದೆ, ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿ ಕೆಲವು ಕ್ರಮಗಳನ್ನು ಅನುಸರಿಸುತ್ತಿರುವ ಸರ್ಕಾರದ ನೌಕರ ವಿರೋಧಿ ಧೋರಣೆಯನ್ನು ವಿರೋಧಿಸಿ ಶುಕ್ರವಾರದಂದು ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಸಚಿವಾಲಯ ಬಂದ್ ಮಾಡಲು ನಿರ್ಧರಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ತಿಳಿಸಿದರು.

'ನಿವೃತ್ತಿಯಾದ ಅಧಿಕಾರಿ, ನೌಕರರ ಮರು ನೇಮಕಾತಿ ರದ್ದು ಮಾಡಬೇಕು, ಸಚಿವಾಲಯ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರೆ ಇಲಾಖೆಗೆ ಹೋಗುವ ಅವಕಾಶ ಮರುಸ್ಥಾಪಿಸಬೇಕು, ಯಾವುದೇ ಇಲಾಖೆಯಲ್ಲಿ ಹುದ್ದೆಗಳ ಕಡಿತ ಪ್ರಸ್ತಾವನ ಕೈಬಿಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ನಾವು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ, ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ‘ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.