ADVERTISEMENT

ಸರ್ಕಾರ ಸುಭದ್ರವಾಗಿದೆ, ರಮೇಶ ಜಾರಕಿಹೊಳಿ ಮಾತಿಗೆ ಕಿಮ್ಮತ್ತಿಲ್ಲ: ಸಿದ್ದರಾಮಯ್ಯ

ಪಿಟಿಐ
Published 31 ಅಕ್ಟೋಬರ್ 2023, 10:52 IST
Last Updated 31 ಅಕ್ಟೋಬರ್ 2023, 10:52 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯದಲ್ಲಿ ನಮ್ಮ ಸರ್ಕಾರ ಸುಭದ್ರವಾಗಿದೆ, ಸರ್ಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾದ ರೀತಿಯಲ್ಲೇ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಪತನವಾಗಲಿದೆ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಸರ್ಕಾರ ಸುಭದ್ರವಾಗಿದ್ದು, ಬಿಜೆಪಿ ನಾಯಕರೊಬ್ಬರು ಹೇಳಿದ ಮಾತ್ರಕ್ಕೆ ಸರ್ಕಾರ ಪತನವಾಗುವುದಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ADVERTISEMENT

ರಮೇಶ ಜಾರಕಿಹೊಳಿ ಹೇಳಿದ್ದೇನು?

‘ಕಾಂಗ್ರೆಸ್‌ ಸರ್ಕಾರ ಬೀಳಿಸುವ ಉದ್ದೇಶ ನಮಗಿಲ್ಲ. ಒಂದು ವೇಳೆ ಬಿದ್ದರೆ, ಅದಕ್ಕೆ ಬೆಳಗಾವಿ ರಾಜಕಾರಣವೇ ಕಾರಣವಾಗುತ್ತದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದರು.

‘ಬಿಜೆಪಿ ಆ‍ಪರೇಷನ್‌ ಕಮಲ ಮಾಡಿ ಸರ್ಕಾರ ಬೀಳಿಸಲು ಯತ್ನಿಸುತ್ತಿದೆ ಎಂಬುದು ಸುಳ್ಳು. ‘ಗ್ಯಾರಂಟಿ’ಗಳನ್ನು ನೀಗಿಸಲು ಆಗದ ಕಾಂಗ್ರೆಸ್‌ನವರು ಬಿಜೆಪಿ ಹೆಸರು ಕೆಡಿಸುತ್ತಿದ್ದಾರೆ. ಜನರ ಚಿತ್ತ ಬೇರೆಡೆ ಸೆಳೆಯುವ ಯತ್ನವಿದು’ ಎಂದು ತಿಳಿಸಿದ್ದರು.

‘ಸರ್ಕಾರ ಬೀಳಬಾರದು, ಬಹಳ ದಿನ ಬಾಳಬೇಕು ಎಂಬ ಆಕಾಂಕ್ಷೆ ನಮ್ಮದು. ಆದರೆ, ಯೋಗ್ಯತೆ ಗೊತ್ತಾಗಿ ಜನರೇ ಇದನ್ನು ಬೀಳಿಸುವರು. ಅದಕ್ಕೂ ಮುನ್ನ ನಾವು ಬೀಳಿಸಿದರೆ ಕಾಂಗ್ರೆಸ್‌ನವರು ಮತ್ತೆ ಅನುಕಂಪ ಪಡೆದು ಗೆಲ್ಲುತ್ತಾರೆ’ ಎಂದಿದ್ದರು.

‘2019ರಲ್ಲಿ ಸರ್ಕಾರ ಬೀಳಿಸಿದ್ದು ರಮೇಶ ಜಾರಕಿಹೊಳಿ ಮತ್ತು ತಂಡ ಹೊರತು ಬಿಜೆಪಿ ಅಲ್ಲ. ಆಗ ಡಿ.ಕೆ.ಶಿವಕುಮಾರ್‌ ಉಪಟಳ ಹೆಚ್ಚಿದ್ದ ಕಾರಣ, ಬುದ್ಧಿ ಕಲಿಸಲು ಸರ್ಕಾರ ಬೀಳಿಸಿದೆ. ಈಗ ಅಂಥ ಕೆಲಸಕ್ಕೆ ನಾನು ಕೈಹಾಕಲ್ಲ’ ಎಂದು ತಿಳಿಸಿದ್ದರು.

‘ಚುನಾವಣೆಯಲ್ಲಿ ಸೋಲಾದ ಬಳಿಕ 6 ತಿಂಗಳು ಯಾರೂ, ಏನೂ ಮಾತನಾಡಬಾರದು ಎಂದು ನಿರ್ಧರಿಸಿದ್ದೆವು. ಆದರೆ, ಡಿ.ಕೆ.ಶಿವಕುಮಾರ್‌ ದಿನಕ್ಕೊಂದು ಖಾಲಿಡಬ್ಬ ಬಾರಿಸುತ್ತಿದ್ದು, ಅನಿವಾರ್ಯವಾಗಿ ಬಾಯಿ ಬಿಡಬೇಕಿದೆ’ ಎಂದು ಕಿಡಿಕಾಡಿದ್ದಾರು.

ಡಿ.ಕೆ.ಶಿವಕುಮಾರ್‌ ಮಾಜಿ ಸಚಿವರಾಗುವುದು ಗ್ಯಾರಂಟಿ

‘ಡಿ.ಕೆ.ಶಿವಕುಮಾರ್‌ ಶೀಘ್ರವೇ ಮಾಜಿ ಸಚಿವರಾಗುವರು. ಅವರು ಜೈಲಿಗೆ ಹೋಗುವರೋ ಇಲ್ವೊ ಗೊತ್ತಿಲ್ಲ. ಆದರೆ, ಮಾಜಿ ಆಗುವುದು ಗ್ಯಾರಂಟಿ’ ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದರು.

‘ಡಿ.ಕೆ.ಶಿವಕುಮಾರ್‌ ಸಚಿವರಾಗಿ ಇರುವವರೆಗೆ ಸರ್ಕಾರ ಅಪಾಯದಲ್ಲಿದೆ ಎಂದರ್ಥ. ಶಿವಕುಮಾರ್‌ ಮತ್ತು ಅವರ ಆಪ್ತರು ಯಾವತ್ತೂ ನೇರ ಹೋರಾಡಿ ಗೆದ್ದವರಲ್ಲ. ಬರೀ ಹೊಂದಾಣಿಕೆ, ಹಿಂಬಾಗಿಲಿನ ಗೆಲುವು ಕಂಡಿದ್ದಾರೆ. ಈ ಬಾರಿ ಲಾಟರಿ ಹೊಡೆದಿದ್ದಾರೆ. ಈ ಲಾಟರಿ ಸಚಿವರೆಲ್ಲ ಬಹಳ ದಿನ ನಿಲ್ಲುವುದಿಲ್ಲ’ ಎಂದು ವ್ಯಂಗ್ಯವಾಡಿದ್ದರು.

‘ನೆಲಮಂಗಲ ಮತ್ತು ಕೊಳ್ಳೇಗಾಲದ ಇಬ್ಬರು ಮಾಜಿ ಶಾಸಕರಿಗೆ ಶಿವಕುಮಾರ್‌ ‘ಬ್ಲ್ಯಾಕ್‌ಮೇಲ್‌’ ಮಾಡುತ್ತಿದ್ದು, ಅವರಿಬ್ಬರೂ ಸೇರಿ ನನಗೂ ಕಳುಹಿಸುವುದಾಗಿ ಬೆದರಿಸಿದ್ದಾರೆ ಎಂಬುದು ಗೊತ್ತಾಗಿದೆ. ನನ್ನನ್ನು ಮುಂದಿಟ್ಟುಕೊಂಡು ನೂರು ಸಿ.ಡಿ ಮಾಡಿದರೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ’ ಎಂದು ಲೇವಡಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.