ಬೆಂಗಳೂರು: ಮನೆ ಬಾಗಿಲಲ್ಲಿಯೇ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಿ, ಔಷಧ ವಿತರಿಸುವ ‘ಗೃಹ ಆರೋಗ್ಯ’ ಯೋಜನೆಯನ್ನು ಫೆಬ್ರುವರಿಯಿಂದ ರಾಜ್ಯದಾದ್ಯಂತ ವಿಸ್ತರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಇದಕ್ಕಾಗಿ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿ ಒದಗಿಸಿ, ಔಷಧಗಳ ಕಿಟ್‌ಗಳನ್ನು ದಾಸ್ತಾನು ಮಾಡಿಕೊಂಡಿದೆ. ಈ ಯೋಜನೆಗೆ 2024ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಿ, ಪ್ರಾಯೋಗಿಕವಾಗಿ ಕೋಲಾರದಲ್ಲಿ ಪ್ರಾರಂಭಿಸಲಾಗಿತ್ತು.
ಸಮುದಾಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಸುರಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳಿಗೆ ಅಗತ್ಯ ತರಬೇತಿ ಒದಗಿಸಲಾಗಿದೆ. ವೈದ್ಯರನ್ನೊಳಗೊಂಡ ತಂಡವು ಮೊದಲು ಗ್ರಾಮೀಣ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಬಳಿಕ ನಗರದ ಮನೆಗಳಲ್ಲಿ ತಪಾಸಣೆ ನಡೆಸಲಿದೆ.
ಯೋಜನೆಯಡಿ ಪ್ರತಿ ಮನೆಗೂ ತೆರಳಿ, 30 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪಾಸಣೆ ಮಾಡಲಾಗುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನೂ ನೀಡಲಾಗುತ್ತದೆ. ಈ ಔಷಧವನ್ನು ಪ್ರತಿ ತಿಂಗಳು ಪರಿಶೀಲಿಸಿ, ಮುಂದುವರಿಕೆಗೆ ಅಗತ್ಯವಿರುವ ಮಾತ್ರೆಗಳನ್ನು ಒದಗಿಸಲಾಗುತ್ತದೆ. ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಈ ತಪಾಸಣೆ ನಡೆಯಲಿದ್ದು, ದಿನಕ್ಕೆ ತಲಾ 15 ಮನೆಗಳಿಗೆ ತಂಡಗಳು ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿವೆ.
ಚಿಕಿತ್ಸೆಗೆ ವ್ಯವಸ್ಥೆ:
ಗೃಹ ಆರೋಗ್ಯ ಯೋಜನೆಯಡಿ ಅಗತ್ಯ ಇದ್ದವರಿಗೆ ಹೆಚ್ಚಿನ ಚಿಕಿತ್ಸೆಯನ್ನೂ ಒದಗಿಸಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಶಂಕಿತ ಪ್ರಕರಣಗಳನ್ನು ದೃಢಪಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡುತ್ತಾರೆ. ತಾಲ್ಲೂಕು ಆರೋಗ್ಯಾಧಿಕಾರಿಗಳು ಕಾರ್ಯಕ್ರಮದ ಸಂಪೂರ್ಣ ಮೇಲ್ವಿಚಾರಣೆ ಮಾಡುತ್ತಾರೆ. ಪ್ರತಿ ದಿನ ಜಿಲ್ಲಾಮಟ್ಟದಿಂದ ಇಲಾಖೆಯು ವರದಿ ಪಡೆಯಲಿದೆ.
ಬಾಯಿ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆಯೂ ತಪಾಸಣೆ ನಡೆಸಿ, ದೃಢ ಪ್ರಕರಣಗಳನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯಡಿ (ಎಬಿ–ಪಿಎಂಜೆಎವೈ) ತೃತೀಯ ಹಂತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ.
‘ಯೋಜನೆಗೆ ಕೋಲಾರದಲ್ಲಿ ಉತ್ತಮ ಸ್ಪಂದನ ದೊರೆತಿದೆ. ಮಾತ್ರೆಗಳಿಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ವೆಚ್ಚ ಮಾಡುವುದು ತಪ್ಪಿದೆ. ನಿಯಮಿತ ತಪಾಸಣೆ ಮತ್ತು ಮಾತ್ರೆಗಳ ವಿತರಣೆಯಿಂದ ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ ಸಾಧ್ಯವಾಗಲಿದೆ. ಯೋಜನೆ ವಿಸ್ತರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ’ ಎಂದು ಇಲಾಖೆಯ ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪ ನಿರ್ದೇಶಕ ಡಾ.ಜಿ. ಶ್ರೀನಿವಾಸ್ ತಿಳಿಸಿದರು.
ಗೃಹ ಆರೋಗ್ಯ ಯೋಜನೆಗೆ ಕೋಲಾರದಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿರುವುದರಿಂದ ರಾಜ್ಯದಾದ್ಯಂತ ವಿಸ್ತರಣೆ ಮಾಡಲಾಗುವುದು. ಪ್ರತಿ ಮನೆ ಬಾಗಿಲಿಗೂ ಆರೋಗ್ಯ ಸೇವೆ ಕೊಂಡೊಯ್ಯಲಾಗುವುದುದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಶ್ವಾಸಕೋಶ ಸಂಬಂಧಿ ಸಮಸ್ಯೆಯೂ ಪತ್ತೆ
ಪ್ರಾಯೋಗಿಕವಾಗಿ ಜಾರಿಯಾದ ಈ ಯೋಜನೆಯಡಿ ಕೋಲಾರದಲ್ಲಿ ಮಧುಮೇಹ ಅಧಿಕ ರಕ್ತದೊತ್ತಡ ಕ್ಯಾನ್ಸರ್ ಹಾಗೂ ಮಾನಸಿಕ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಲಾಗುತ್ತಿದೆ. ಯೋಜನೆ ರಾಜ್ಯದಾದ್ಯಂತ ವಿಸ್ತರಣೆಯಾದ ಬಳಿಕ ಇವುಗಳ ಜತೆಗೆ ಅಸ್ತಮಾ ಸೇರಿ ಗಂಭೀರ ಶ್ವಾಸಕೋಶ ಕಾಯಿಲೆ ಪತ್ತೆಯನ್ನೂ ಸೇರ್ಪಡೆ ಮಾಡಲಾಗುತ್ತದೆ. ಮೂತ್ರಪಿಂಡ ಸಮಸ್ಯೆಗೆ ಸಂಬಂಧಿಸಿದಂತೆ ನಿಯಮಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಲಾಗುತ್ತಿದೆಯೇ ಎಂಬುದರ ಬಗ್ಗೆಯೂ ವೈದ್ಯಕೀಯ ತಂಡ ಮಾಹಿತಿ ಕಲೆಹಾಕಲಿದೆ. ಇತ್ತೀಚೆಗೆ ಪಾಶ್ಚಾತ್ಯ ಆಹಾರ ಪದ್ಧತಿ ಸೇರಿ ವಿವಿಧ ಕಾರಣಗಳಿಂದ ಹೆಚ್ಚುತ್ತಿರುವ ಫ್ಯಾಟಿ ಲಿವರ್ ಕಾಯಿಲೆಯನ್ನೂ (ಎನ್‌ಎಎಫ್‌ಎಲ್‌ಡಿ) ಯೋಜನೆಯಡಿ ಗುರುತಿಸಿ ಸೂಕ್ತ ಮಾರ್ಗದರ್ಶನ ಮಾಡಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.