ADVERTISEMENT

ಆಸ್ಪತ್ರೆಗೆ ಹೋಗಲು ಮೂರು ಕಾರು ಬದಲಿಸಿದ ರಾಜ್ಯಪಾಲ ವಜುಭಾಯಿ ವಾಲಾ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 8:48 IST
Last Updated 28 ನವೆಂಬರ್ 2019, 8:48 IST
ರಾಜ್ಯಪಾಲ ವಜುಭಾಯಿ ವಾಲಾ
ರಾಜ್ಯಪಾಲ ವಜುಭಾಯಿ ವಾಲಾ   

ಬೆಂಗಳೂರು: ಹೃದ್ರೋಗದಿಂದ ಬಳಲುತ್ತಿದ್ದ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಾಧ್ಯಮದವರ ಕಣ್ಣುತಪ್ಪಿಸಿ 10 ಕಿ.ಮೀ ದೂರದ ಆಸ್ಪತ್ರೆಗೆ ತೆರಳಲು ಮೂರು ಕಾರುಗಳನ್ನು ಬದಲಾಯಿಸಿದ ನಾಟಕೀಯ ಘಟನೆ ನಡೆದಿದೆ.

ಮಂಗಳವಾರ ಸಂಜೆ ರಾಜಭವನದಿಂದ ಸರ್ಕಾರದ ಅಧಿಕೃತ ಕಾರಿನಲ್ಲಿ ಅವರು ಹೊರಟಿದ್ದು, ಅಪಾರ್ಟ್‌ಮೆಂಟ್‌ ಒಂದರಲ್ಲಿ ಕೆಲ ಹೊತ್ತು ತಂಗಿದ್ದಾರೆ. ಅಲ್ಲಿಂದ ಸರ್ಕಾರಿ ಕಾರು ವಾಪಸ್ ಕಳುಹಿಸಿದ್ದು, ನಂತರ ಖಾಸಗಿ ಕಾರಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಮತ್ತೆ ಇನ್ನೊಂದು ಮನೆಗೆ ಹೋಗಿದ್ದು, ಅಲ್ಲಿಂದಲೂ ಮತ್ತೊಂದು ಕಾರಿನಲ್ಲಿಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆತೆರಳಿದರು ಎಂದು ಮೂಲಗಳು ತಿಳಿಸಿವೆ.

‘ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾದರೆ ರಾಜ್ಯಪಾಲರಿಗೆ ತೀವ್ರವಾಗಿ ಅನಾರೋಗ್ಯ ಕಾಡುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಅವರನ್ನು ಭೇಟಿಮಾಡಲು ರಾಜಕೀಯ ಮುಖಂಡರು ಸೇರಿದಂತೆ ಸಾಕಷ್ಟು ಮಂದಿ ಆಸ್ಪತ್ರೆಗೆ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಹೀಗೆ ಮಾಡಿದ್ದಾರೆ’ ಎನ್ನಲಾಗಿದೆ.

ADVERTISEMENT
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲ ವಜುಭಾಯಿ ವಾಲಾ ಅವರ ಆರೋಗ್ಯ ವಿಚಾರಿಸಿದರು.

ಫೋರ್ಟಿಸ್ ಆಸ್ಪತ್ರೆಯಲ್ಲಿ ವಾಲಾ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನವೆಂಬರ್ ಆರಂಭದಲ್ಲಿ ಆಂಜಿಯೋ ಪ್ಲಾಸ್ಟಿ ಮಾಡಲಾಗಿದ್ದು, ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡುಬಂದಿತ್ತು. ಇತ್ತೀಚೆಗೆ ಮತ್ತೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಭೇಟಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ರಾಜ್ಯಪಾಲರ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.