ADVERTISEMENT

ಕಾಮಗಾರಿಗಳಲ್ಲಿ ಅಕ್ರಮ: ಗುತ್ತಿಗೆದಾರ ಉಪ್ಪಾರ್‌ಗೆ ‘ಕ್ಲೀನ್ ಚಿಟ್’ ಕೊಟ್ಟ ಸರ್ಕಾರ

ರಾಜೇಶ್ ರೈ ಚಟ್ಲ
Published 9 ಅಕ್ಟೋಬರ್ 2021, 2:17 IST
Last Updated 9 ಅಕ್ಟೋಬರ್ 2021, 2:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯ ನಾಲ್ಕೂ ನೀರಾವರಿ ನಿಗಮಗಳಡಿ 2015ರಿಂದ 2019ರ ಮಧ್ಯೆ ಡಿ.ವೈ.ಉಪ್ಪಾರ್‌ ಸಹಭಾಗಿತ್ವದ ‘ಎಡಿಯು ಇನ್ಪ್ರಾ ’ ಎಂಬ ಕಂಪನಿ ಗುತ್ತಿಗೆ ಪ‍ಡೆದ ₹ 17,685.52 ಕೋಟಿ ಮೊತ್ತದ ಎಂಟು ಬೃಹತ್‌ ಕಾಮಗಾರಿಗಳಲ್ಲಿ ನೂರಾರು ಕೋಟಿ ಮೊತ್ತದ ಅಕ್ರಮ ನಡೆದಿದೆ ಎಂಬ ದೂರಿನ ಮೇಲೆ ವಿಚಾರಣೆ ನಡೆಸಿರುವ ಸತ್ಯಶೋಧನಾ ತಂಡ, ‘ಕ್ಲೀನ್‌ ಚಿಟ್‌’ ನೀಡಿದೆ.

ಇಲಾಖೆಯ ನಿವೃತ್ತ ಕಾರ್ಯದರ್ಶಿ ಎಸ್‌.ಜೆ. ಚನ್ನಬಸಪ್ಪ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ತಾಂತ್ರಿಕ ಸಲಹೆಗಾರರಾಗಿದ್ದ ಎಂ.ಕೆ. ವೆಂಕಟರಾಮ್‌ ಅವರನ್ನೊಳಗೊಂಡ ಸತ್ಯಶೋಧನಾ ತಂಡವನ್ನು ರಾಜ್ಯ ಸರ್ಕಾರ 2020ರ ನ. 25ರಂದು ರಚಿಸಿತ್ತು. ಕೇವಲ ಮೂರು ತಿಂಗಳಲ್ಲಿ ವಿಚಾರಣೆ ನಡೆಸಿ ಮಾರ್ಚ್‌ 1ರಂದು ತಂಡ ವರದಿ ಸಲ್ಲಿಸಿದೆ. ವರದಿಯನ್ನು ಯಥಾವತ್‌ ಒಪ್ಪಿ ಈ ವರ್ಷದ ಜುಲೈ 5 ರಂದು ಆದೇಶ ಹೊರಡಿಸಿರುವ ಸರ್ಕಾರ, ಹೆಚ್ಚುವರಿಯಾಗಿ ಪಾವತಿಯಾಗಿರುವ ₹ 52 ಕೋಟಿಯನ್ನು ಗುತ್ತಿಗೆದಾರರ ಬಿಲ್‌ಗಳಲ್ಲಿ ಸರಿ ಹೊಂದಿಸಬೇಕೆಂಬ ಶಿಫಾರಸು ಒಪ್ಪಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಸತ್ಯ ಶೋಧನಾ ತಂಡ ಸಲ್ಲಿಸಿರುವ 365 ಪುಟಗಳ ವರದಿ ‘ಪ್ರಜಾವಾಣಿ‘ಗೆ ಲಭ್ಯವಾಗಿದೆ. ತೆರಿಗೆ ವಂಚನೆ, ಅಕ್ರಮ ಹಣದ ವಹಿವಾಟು ಆರೋಪದ ಮೇಲೆ ಗುತ್ತಿಗೆದಾರ ಡಿ.ವೈ. ಉಪ್ಪಾರ್‌ ಮನೆ, ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೆ, ಈ ಎಂಟು ಬೃಹತ್‌ ಯೋಜನೆಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ವರದಿ ಬಗ್ಗೆಯೂ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳ ವಲಯದಲ್ಲಿ ಚರ್ಚೆ ನಡೆದಿದೆ.

ADVERTISEMENT

‘ಈ ಎಂಟೂ ಕಾಮಗಾರಿಗಳ ಅಂದಾಜು ಪಟ್ಟಿಗಳ ತಯಾರಿಕೆಯಲ್ಲಾಗಲಿ ಅಥವಾ ಕಾಮಗಾರಿಗಳ ಅನುಷ್ಠಾನದಲ್ಲಾಗಲಿ ಯಾವುದೇ ಅವ್ಯವಹಾರ ಸಾಬೀತಾಗಿಲ್ಲ. ಈ ಕಾರಣಗಳಿಂದ ಯಾವುದೇ ಅಧಿಕಾರಿಯನ್ನಾಗಲಿ, ಗುತ್ತಿಗೆದಾರನನ್ನಾಗಲಿ ಹೊಣೆಗಾರನಾಗಿ ಮಾಡಲು ಸಾಧ್ಯ ಇಲ್ಲ. ಹೀಗಾಗಿ, ಆಪಾದನೆಗಳೆಲ್ಲ ಆಧಾರರಹಿತ’ ಎಂದು ವರದಿ ಹೇಳಿದೆ. ಅದನ್ನೇ ಉಲ್ಲೇಖಿಸಿ, ‘ಎಡಿಯು ಇನ್ಫ್ರಾ’ ಕಂಪನಿ ಮೇಲಿನ ಆರೋಪಗಳನ್ನು ಸರ್ಕಾರ ಕೈಬಿಟ್ಟಿದೆ. ಆದರೆ, ಸತ್ಯ ಶೋಧನಾ ತಂಡ ಕಾಮಗಾರಿಗಳ ನಡೆದ ಸ್ಥಳ ವೀಕ್ಷಣೆ ಮಾಡದೆ, ಅಧಿಕಾರಿಗಳು ನೀಡಿದ ದಾಖಲೆಗಳನ್ನಷ್ಟೆ ಪರಿಶೀಲಿಸಿ ವರದಿ ನೋಡಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ತಿಳಿಸಿದರು.

‘ಎಡಿಯು ಇನ್ಪ್ರಾ’ ನಿರ್ವಹಿಸಿದ ಕಾಮಗಾರಿಗಳ ಟೆಂಡರ್‌ಗಳಲ್ಲಿ ನೈಜ ದರಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿ ಆಡಳಿತಾತ್ಮಕ ಅನುಮೋದನೆ ಪಡೆದ ಬಳಿಕ, ಸಮರ್ಥನೆ ಇಲ್ಲದೆ ಟೆಂಡರ್‌ ಮೊತ್ತ ಹೆಚ್ಚಿಸಲಾಗಿದೆ. ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಅನುಮಾನವಿದ್ದು,ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಕತ್ರಿಗುಪ್ಪೆಯ ಚಂದ್ರಶೇಖರ್‌ ಎಂಬುವರು ಹಿಂದಿನ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ದಾಖಲೆಗಳ ಸಹಿತ 2020ರ ಆಗಸ್ಟ್‌ 12ರಂದು ದೂರು ನೀಡಿದ್ದರು.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ ಮತ್ತು ಇತರ ಕೆಲವು ಸದಸ್ಯರು, ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ 0 ಕಿ.ಮೀನಿಂದ 95 ಕಿ.ಮೀವರೆಗೆ ಆಧುನೀಕರಣ ಕಾಮಗಾರಿಯ ಅಂದಾಜು ಮೊತ್ತವನ್ನು ಅನಾವಶ್ಯಕವಾಗಿ ಹೆಚ್ಚಿಸಿ, ಟೆಂಡರ್‌ ಮಾಡಿ ಕಳಪೆ ಕಾಮಗಾರಿ ನಿರ್ವಹಿಸಿದ ‘ಎಡಿಯು ಇನ್ಪ್ರಾ’ ವಿರುದ್ಧ ಹಾಗೂ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಸತ್ಯಶೋಧನಾ ತಂಡ ರಚಿಸಲಾಗಿತ್ತು.

‘ಎಡಿಯು ಇನ್ಪ್ರಾ’ ಎಂಬ ಗುತ್ತಿಗೆದಾರರು ನಡೆಸುತ್ತಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸರ್ಕಾರ ಅಂತಿಮ ಷರಾ ಬರೆದಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.