ADVERTISEMENT

ಅನುಕಂಪದ ಆಧಾರ | ಹುದ್ದೆ ಇಲ್ಲ ಎನ್ನುವಂತಿಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 0:01 IST
Last Updated 13 ಆಗಸ್ಟ್ 2025, 0:01 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಹುದ್ದೆ ಖಾಲಿಯಿಲ್ಲ ಎಂಬ ಕಾರಣಕ್ಕಾಗಿ ಅನುಕಂಪದ ಆಧಾರದಡಿ ಹುದ್ದೆ ಪಡೆಯಲು ಸಲ್ಲಿಸಲಾಗುವ ಮನವಿಗಳನ್ನು ತಿರಸ್ಕರಿಸುವುದು ಸಲ್ಲ. ಅನುಕಂಪದ ಆಧಾರವನ್ನು ಪರಿಗಣಿಸುವ ಸಂದರ್ಭದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಬದ್ಧರಾಗಿರಬೇಕು. ಹುದ್ದೆ ಖಾಲಿ ಇಲ್ಲ ಎಂದು ಅರ್ಜಿ ತಿರಸ್ಕರಿಸುವುದು ನಿಯಮಗಳಿಗೆ ವಿರುದ್ಧ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ತನ್ನ ತಂದೆ ಮೃತಪಟ್ಟ ಬಳಿಕ ಅನುಕಂಪದ ಉದ್ಯೋಗಕ್ಕಾಗಿ ಸಲ್ಲಿಸಿದ್ದ ಮನವಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ತಿರಸ್ಕರಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಬಾಗಲಕೋಟೆಯ ಸಂತೋಷ್ ಯಮನಪ್ಪ ವಡಕರ್ (34) ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಮೃತರು ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲ ಎಂದಾದಲ್ಲಿ, ರಾಜ್ಯ ಪದವಿ ಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ, ಅನುದಾನ-ಸಹಾಯ ಇತ್ಯಾದಿ) ತಿದ್ದುಪಡಿ ನಿಯಮಗಳು–2010ರ ಷರತ್ತು 1(ಎ) ಮತ್ತು (ಬಿ) ಅನುಸಾರ ಶಿಕ್ಷಣ ಇಲಾಖೆಯ ನಿರ್ದೇಶಕರು ಖಾಲಿ ಹುದ್ದೆಯನ್ನು ಗುರುತಿಸಬೇಕು. ಒಂದು ವೇಳೆ ಖಾಲಿ ಹುದ್ದೆ ಲಭ್ಯವಾಗದೇ ಇದ್ದಲ್ಲಿ ಇಲಾಖೆಯ ಅಧೀನದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಹುದ್ದೆ ಹುಡುಕಿ ಹಂಚಿಕೆ ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.