ADVERTISEMENT

ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆ ಪರಿಗಣಿಸಲು ಕೋರಿದ್ದ ಪಿಐಎಲ್‌ ವಜಾ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 23:39 IST
Last Updated 12 ಆಗಸ್ಟ್ 2025, 23:39 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆ’ ಜಾರಿಗೆ ತರುವ ನಿಟ್ಟಿನಲ್ಲಿ 34 ಇಲಾಖೆಗಳ ಮಂತ್ರಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಶೇಷ ಕಾರ್ಯದರ್ಶಿಗಳ  ಜೊತೆ ಚರ್ಚಿಸಲು ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿದೆ.

ಈ ಸಂಬಂಧ ಬೆಂಗಳೂರಿನ ಮುರುಳಿಕೃಷ್ಣ ಬೃಹ್ಮಾನಂದಂ (69) ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಮುರುಳಿಕೃಷ್ಣ ಅವರು, ‘ನಾನು ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆಯನ್ನು ರೂಪಿಸಿದ್ದೇನೆ. ಮಸೂದೆಯ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವಂತೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಬೇಕು. ಈ ದಿಸೆಯಲ್ಲಿ ಒತ್ತಾಯಿಸಲು ತಮ್ಮ ಪಕ್ಷದ ಶಾಸಕರು ಮತ್ತು ಸಂಸದರಿಗೆ ಸೂಚಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರಿಗೆ ನಿರ್ದೇಶಿಸಬೇಕು. ಅಧಿವೇಶನದಲ್ಲಿ ಚರ್ಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸಂವಿಧಾನದಲ್ಲಿ ನ್ಯಾಯಾಂಗವು ರಾಜ್ಯವಲ್ಲ. ನ್ಯಾಯಾಂಗ ಸರ್ಕಾರದ ಭಾಗವಲ್ಲ. ನಿಮ್ಮ ಅರ್ಜಿಯು ತಪ್ಪು ಗ್ರಹಿಕೆಯಿಂದ ಕೂಡಿದೆ. ಹಾಗಾಗಿ, ದಂಡ ವಿಧಿಸಲಾಗುತ್ತಿದೆ’ ಎಂದು ಎಚ್ಚರಿಸಿತು.

ಇದಕ್ಕೆ ಅರ್ಜಿದಾರರು, ‘ದಯಮಾಡಿ ದಂಡ ವಿಧಿಸಬಾರದು. ಇದು ನನ್ನ ಮೊದಲ ಮತ್ತು ಕೊನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ’ ಎಂದು ಮನವಿ ಮಾಡಿದರಾದರೂ ಇದನ್ನು ಒಪ್ಪದ ನ್ಯಾಯಪೀಠ, ‘ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತತ್ವವಾಗಿದೆ. ಪ್ರಕರಣಕ್ಕೆ ಮೌಲ್ಯ ತರದಿದ್ದರೆ ಅದು ಸಾರ್ವಜನಿಕ ಹಿತಾಸಕ್ತಿ ಎನಿಸುವುದಿಲ್ಲ. ಇಂತಹ ಅರ್ಜಿಗಳಿಂದ ಕೋರ್ಟ್‌ನ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಇದರಿಂದ ಇತರೆ ದಾವೆದಾರರೂ ಕಾಯುವಂತಾಗಿದೆ’ ಎಂದು ದಂಡವನ್ನು ದೃಢಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.