ADVERTISEMENT

ಮಹಾಭಾರತ ನಮ್ಮ ಕಾನೂನುಗಳ ಪ್ರತಿಬಿಂಬ: ನ್ಯಾಯಮೂರ್ತಿ ಕೆ. ರಾಜೇಶ್‌ ರೈ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 16:30 IST
Last Updated 18 ಡಿಸೆಂಬರ್ 2025, 16:30 IST
<div class="paragraphs"><p>‘ಭಗವದ್ಗೀತೆ’ ಅರ್ಥಾತ್‌ ‘ಧರ್ಮರಾಜ್ಯ ಸ್ಥಾಪನೆ’ ನಾಟಕ ಪ್ರದರ್ಶನ ಉದ್ಘಾಟಿಸಿ ನ್ಯಾಯಮೂರ್ತಿ ಕೆ.ರಾಜೇಶ್‌ ರೈ ಮಾತನಾಡಿದರು.&nbsp;</p></div>

‘ಭಗವದ್ಗೀತೆ’ ಅರ್ಥಾತ್‌ ‘ಧರ್ಮರಾಜ್ಯ ಸ್ಥಾಪನೆ’ ನಾಟಕ ಪ್ರದರ್ಶನ ಉದ್ಘಾಟಿಸಿ ನ್ಯಾಯಮೂರ್ತಿ ಕೆ.ರಾಜೇಶ್‌ ರೈ ಮಾತನಾಡಿದರು. 

   

ಬೆಂಗಳೂರು: ‘ಮಹಾಭಾರತದಲ್ಲಿ ನಡೆದಿರುವ ಪ್ರತಿಯೊಂದು ಘಟನೆಗಳು, ಸನ್ನಿವೇಶಗಳು ಹಾಗೂ ಅಪರಾಧಗಳು ನಮ್ಮ ಇಂದಿನ ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳ ಪ್ರತಿಬಿಂಬ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೆ. ರಾಜೇಶ್‌ ರೈ ಬಣ್ಣಿಸಿದರು.

ಕರ್ನಾಟಕ ಹೈಕೋರ್ಟ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ‘ವಕೀಲರ ಕಲಾ ನಾಟಕ ಮಂಡಳಿ’ ವತಿಯಿಂದ ವಕೀಲರೇ ಅಭಿನಯಿಸಿ ಪ್ರಸ್ತುತಪಡಿಸಿದ, ‘ಭಗವದ್ಗೀತೆ’ ಅರ್ಥಾತ್‌ ‘ಧರ್ಮರಾಜ್ಯ ಸ್ಥಾಪನೆ’ ನಾಟಕದ ಶುಭಾರಂಭಕ್ಕೆ ಗುರುವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

ಸ್ವತಃ ಯಕ್ಷಗಾನ ಕಲಾವಿದರೂ ಆದ ರಾಜೇಶ್ ರೈ ಅವರು ಮಹಾಭಾರತದ ಪ್ರಸಂಗಗಳು ಹೇಗೆ ಇಂದಿನ ನಾಗರಿಕ ಸಮಾಜದ ಕಾಯ್ದೆಗಳಿಗೆ ಅನುಗುಣವಾಗಿವೆ ಎಂಬುದನ್ನು ವಿವರಿಸಿ, ‘ನಾಟಕ ಅಭಿನಯಿಸುತ್ತಿರುವ ಕಲಾವಿದರೆಲ್ಲರೂ ವಕೀಲರೇ ಆಗಿದ್ದಾರೆ. ಪ್ರಾಯಶಃ ನಿಜಜೀವನದಲ್ಲಿ ನಾಟಕದ ಮರ್ಮಗಳನ್ನು ಚೆನ್ನಾಗಿ ಕಲಿತವರು ವಕೀಲ ವೃತ್ತಿಯಲ್ಲೂ ನಿಪುಣರಾಗಬಲ್ಲರು’ ಎಂದು ವಿಶ್ಲೇಷಿಸಿದರು.

ನಾಟಕ ಪ್ರದರ್ಶನ ಉದ್ಘಾಟಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ಹಾಗೂ ನಿವೃತ್ತಿ ಹೊಂದುತ್ತಿರುವ ನ್ಯಾಯಮೂರ್ತಿ ಕೆ.ಎಸ್.ಮುದಗಲ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ ಮಾತನಾಡಿ ಶುಭ ಹಾರೈಸಿದರು.

ನ್ಯಾಯಮೂರ್ತಿ ವಿ.ಶ್ರೀಶಾನಂದ, ಅಡ್ವೊಕೇಟ್‌ ಜನರಲ್ ಕೆ.ಶಶಿಕಿರಣ ಶೆಟ್ಟಿ, ಹಿರಿ–ಕಿರಿಯ ವಕೀಲರು ಮತ್ತು ಕಿಕ್ಕಿರಿದು ತುಂಬಿದ್ದ ಸಿಬ್ಬಂದಿ ನಾಟಕ ವೀಕ್ಷಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.