
ಬೆಂಗಳೂರು: ‘ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯನ್ನು ಪ್ರತಿನಿಧಿಸುವ ವಕೀಲರು ಹಿಂದೆ ಸರಿಯುವಂತೆ ಮಾಡಲು ಅವರ ವಿರುದ್ಧವೇ ಸುಳ್ಳು ದೂರು ನೀಡಿ ಅವರನ್ನೇ ಆರೋಪಿಗಳನ್ನಾಗಿ ಸಿಲುಕಿಸುವ ಅಪಾಯಕಾರಿ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಅಗತ್ಯ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಕೋರಿ ಹೈಕೋರ್ಟ್ ವಕೀಲರೂ ಆದ ಯಾಸ್ಮಿನ್ ಸಾಲೇಹ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಧ್ಯಂತರ ಆದೇಶ ನೀಡಿದೆ.
ಯಾಸ್ಮೀನ್ ವಿರುದ್ಧ, ಭಾರತೀಯ ನ್ಯಾಯ ಸಂಹಿತಾ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿರುವ ನ್ಯಾಯಪೀಠ, ‘ವಕೀಲರ ವಿರುದ್ಧ ಅಪರಾಧ ದಾಖಲಿಸುವ ಮೊದಲು, ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ಆರೋಪ ಮಾಡುತ್ತಿದ್ದಾರೆಯೇ ಎಂಬುದನ್ನು ಪೊಲೀಸರು ತಿಳಿದುಕೊಳ್ಳಬೇಕು. ಆರೋಪಗಳನ್ನು ಮಾಡುತ್ತಿರುವ ದೂರುದಾರರ ಆರೋಪಗಳ ಸ್ವರೂಪದ ಬಗ್ಗೆ ಕೂಲಂಕಶ ವಿಚಾರಣೆ ನಡೆಸಬೇಕು. ತದನಂತರವೇ ಮುಂದಡಿ ಇಡಬೇಕು’ ಎಂದು ಎಚ್ಚರಿಸಿದೆ.
‘ವಿರುದ್ಧ ಪಕ್ಷಗಾರರು ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸಿ ಬೆದರಿಕೆ ಒಡ್ಡಿದರೆ, ಎದುರುದಾರರನ್ನು ಪ್ರತಿನಿಧಿಸಲು ವಕೀಲರು ಹಿಂಜರಿಯುತ್ತಾರೆ ಮತ್ತು ಭಯಪಡುತ್ತಾರೆ. ಈ ರೀತಿಯ ಅನೂಹ್ಯ ಆರೋಪಗಳನ್ನು ಮಾಡುತ್ತಿರುವ ಪ್ರಕರಣಗಳು ಕೋರ್ಟ್ ಗಮನಕ್ಕೆ ಬಂದಿದೆ. ಹೀಗಾಗಿ, ಅಪಾಯಕ್ಕೆ ಸಿಲುಕಿರುವ ವಕೀಲರಿಗೆ ರಕ್ಷಣೆ ನೀಡುವ ಅಗತ್ಯವಿದೆ’ ಎಂದು ನ್ಯಾಯಪೀಠ ಆದೇಶಿಸಿದೆ. ವಿಚಾರಣೆಯನ್ನು ಫೆಬ್ರುವರಿ 19ಕ್ಕೆ ಮುಂದೂಡಲಾಗಿದೆ.
ಆಸ್ತಿ ವಿಭಜನಾ ದಾವೆ ಮತ್ತು ವೈವಾಹಿಕ ವಿಷಯದಲ್ಲಿ ಪಕ್ಷಗಾರರೊಬ್ಬರ ಪತ್ನಿಯನ್ನು ಯಾಸ್ಮೀನ್ ಸಾಲೇಹ ಪ್ರತಿನಿಧಿಸಿದ್ದರು. ಯಾಸ್ಮೀನ್ ಹಿಂದೆ ಸರಿಯುವಂತೆ ಮಾಡಲು ಅವರ ವಿರುದ್ಧ ದೂರುದಾರೆಯ ಪತಿ ಕ್ರಿಮಿನಲ್ ದೂರು ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.