
ದಿನೇಶ್ ಗುಂಡೂರಾವ್
ಸುವರ್ಣ ವಿಧಾನಸೌಧ (ಬೆಳಗಾವಿ): ‘ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ಕರ್ತವ್ಯ ವೈದ್ಯಾಧಿಕಾರಿಗಳು, ನರ್ಸ್‍ಗಳು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳನ್ನು ಒಂದು ತಿಂಗಳೊಳಗೆ ಭರ್ತಿ ಮಾಡಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನಸಭೆಯಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಾಲಿ ಇರುವ 337 ತಜ್ಞ ವೈದ್ಯರು, 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ. ಸರ್ಕಾರಿ ಕೋಟಾದಡಿ ವ್ಯಾಸಂಗ ಪೂರೈಸಿದ ವೈದ್ಯರು, ತಜ್ಞ ವೈದ್ಯರು ಒಂದು ವರ್ಷ ಕಡ್ಡಾಯ ಸರ್ಕಾರಿ ಸೇವೆ ಕೈಗೊಳ್ಳುವ ಕಾರ್ಯಕ್ರಮದಡಿ 1,500 ವೈದ್ಯರನ್ನು ನೇಮಿಸಲಾಗುತ್ತದೆ’ ಎಂದರು.
‘ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ 120 ತಜ್ಞ ವೈದ್ಯರು ಮತ್ತು 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಈ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ತಜ್ಞ ವೈದ್ಯರ ನೇಮಕಾತಿ ಕುರಿತಂತೆ ಹೈಕೋರ್ಟ್‍ನಲ್ಲಿದ್ದ ಪ್ರಕರಣ ಶೀಘ್ರ ಇತ್ಯರ್ಥಗೊಳ್ಳುವ ನಿರೀಕ್ಷಯಿದೆ. 600 ಶುಶ್ರೂಷಾಧಿಕಾರಿಗಳು, 400 ಕಿರಿಯ ಪ್ರಯೋಗಶಾಲಾ ತಂತ್ರಜ್ಞರು ಹಾಗೂ 400 ಫಾರ್ಮಾಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ’ ಎಂದರು.
‘ವಿವಿಧ ಇಲಾಖೆಗಳಿಗೆ ನಿಯೋಜನೆ ಮೇಲೆ ತೆರಳಿದ್ದ ವೈದ್ಯರು, ಆಹಾರ ಗುಣಮಟ್ಟ ಸುರಕ್ಷತಾ ಅಧಿಕಾರಿಗಳ ನಿಯೋಜನೆ ರದ್ದುಗೊಳಿಸಿ, ಇಲಾಖೆಗೆ ವಾಪಸ್ ಕರೆಸಿಕೊಂಡು ಇಲಾಖೆಗೆ ಅಗತ್ಯ ಇರುವ ಕಡೆಗಳಲ್ಲಿ ನೇಮಕ ಮಾಡಲಾಗುವುದು’ ಎಂದೂ ತಿಳಿಸಿದರು.
ಹೊಸ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಸಮಿತಿ: ‘ಎಲ್ಲೆಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬ ಬಗ್ಗೆ ರಾಷ್ಟ್ರೀಯ ಆರೋಗ್ಯ ನೀತಿ ಮಾನದಂಡಗಳ ಅನ್ವಯ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಡಾ. ಹಿಮಾಂಶು ಭೂಷಣ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬಿಜೆಪಿಯ ಡಾ. ಚಂದ್ರು ಲಮಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಸಮಿತಿಯ ಶಿಫಾರಸಿನಂತೆ ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ವಿಭಾಗದಲ್ಲಿ ಆಸ್ಪತ್ರೆಗಳನ್ನು ಮಂಜೂರು ಮಾಡಲು ಅಥವಾ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.