ADVERTISEMENT

ಭಾರಿ ಮಳೆ: ಉಕ್ಕಿ ಹರಿದ ನದಿಗಳು; ಕೆಲವು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಕೊಡಗು: ಮನೆ ಗೋಡೆ ಕುಸಿದು ಮಹಿಳೆ ಸಾವು l ಕೆಲವು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 22:30 IST
Last Updated 26 ಜುಲೈ 2025, 22:30 IST

ಭಾಗಮಂಡಲದ ತ್ರಿವೇಣಿ ಸಂಗಮ ಪ್ರಸಕ್ತ ವರ್ಷ ನಾಲ್ಕನೇ ಬಾರಿ ಜಲಾವೃತಗೊಂಡಿದೆ

ಭಾಗಮಂಡಲದ ತ್ರಿವೇಣಿ ಸಂಗಮ ಪ್ರಸಕ್ತ ವರ್ಷ ನಾಲ್ಕನೇ ಬಾರಿ ಜಲಾವೃತಗೊಂಡಿದೆ

ಮಡಿಕೇರಿ: ನಗರವೂ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ಶನಿವಾರ ಬಿರುಗಾಳಿ ಸಹಿತ ಭಾರಿ ಮಳೆಯಾಯಿತು.

ADVERTISEMENT

ಮನೆಯ ಗೋಡೆ ಕುಸಿದು ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದ ಸುಷ್ಮಾ (35) ಮೃತಪಟ್ಟಿದ್ದಾರೆ. ಇವರ ಮೂವರು ಮಕ್ಕಳು ಹಾಗೂ ಸೋದರ ಅಕ್ಷಯ್ ಗಾಯಗೊಂಡಿದ್ದಾರೆ. ಕಲಬುರಗಿಯ ಅಫಜಲ್‌ಪುರದ ಇವರು ಕೂಲಿ ಕೆಲಸಕ್ಕೆಂದು ಬಂದು ಬಾಡಿಗೆ ಮನೆಯಲ್ಲಿ
ದ್ದರು. ಶನಿವಾರ ಮುಂಜಾನೆ ಮಲಗಿದ್ದ ವೇಳೆ ಗೋಡೆ ಕುಸಿದಿದೆ. ಪತಿ ರವಿ ಕಲಬುರಗಿಗೆ ಹೋಗಿದ್ದರು.

ಭಾಗಮಂಡಲದಲ್ಲಿ ಕಾವೇರಿ ಹಾಗೂ ಕನ್ನಿಕೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಲ್ಲಿನ ‘ತ್ರಿವೇಣಿ ಸಂಗಮ’ ಈ ವರ್ಷ 4ನೇ ಬಾರಿಗೆ ಜಲಾವೃತಗೊಂಡಿದೆ. ಸಮೀಪದ ಉದ್ಯಾನಕ್ಕೂ ನೀರು ನುಗ್ಗಿದೆ.

ಜೋರು ಗಾಳಿಯಿಂದಾಗಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ಇದರಿಂದ ನಗರ ಸೇರಿದಂತೆ ಎಲ್ಲೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಸೋಮವಾರಪೇಟೆ ತಾಲ್ಲೂಕಿನ ಕುಂಬೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಆಟೊರಿಕ್ಷಾ ಮೇಲೆ ಮರ ಬಿದ್ದಿದ್ದು, ಚಾಲಕ ಪ್ರವೀಣ್ ಅಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಸಮೀಪದ ಬಾಳೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದು ಕೆಲಕಾಲ ಸಂಚಾರಕ್ಕೆ ತೊಂದರೆಯಾಯಿತು.

ಸೋಮವಾರಪೇಟೆ ಸಮೀಪದ ಬಿ.ಆರ್.ಅಂಬೇಡ್ಕರ್ ಮೆಟ್ರಿಕ್‌ಪೂರ್ವ ಬಾಲಕರ ಹಾಸ್ಟೆಲ್‌ನಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ಶಾಂತಳ್ಳಿಯಲ್ಲಿ 20 ಸೆಂ.ಮೀ.,ಭಾಗಮಂಡಲದಲ್ಲಿ 17, ಶ್ರೀಮಂಗಲ 11, ಸೋಮವಾರಪೇಟೆ 8, ಶನಿವಾರಸಂತೆ 7, ಹುದಿಕೇರಿ 6, ನಾಪೋಕ್ಲು 5 ಸೆಂ.ಮೀ. ಮಳೆಯಾಗಿದೆ.

ಮಲೆನಾಡಿನಲ್ಲಿ ಮುಂದುವರೆದ ಮಳೆ

ಶಿವಮೊಗ್ಗ: ಜಿಲ್ಲೆಯ ಕೆಲವೆಡೆ ಶನಿವಾರ ಮಳೆಯ ಆರ್ಭಟ ತುಸು ಕಡಿಮೆ ಯಾಗಿದ್ದು, ಮಲೆನಾಡು ಭಾಗದಲ್ಲಿ ಮುಂದುವರೆದಿದೆ.

ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ಹೊಸನಗರ ತಾಲ್ಲೂಕಿನ ಮಾಣಿಯಲ್ಲಿ 23.7 ಸೆಂ.ಮೀ, ಆಗುಂಬೆಯಲ್ಲಿ 16.4 ಸೆಂ.ಮೀ, ಮೇಗರವಳ್ಳಿಯಲ್ಲಿ 14 ಸೆಂ.ಮೀ ಮಳೆ ದಾಖಲಾಗಿದೆ.

ತೀರ್ಥಹಳ್ಳಿಯಲ್ಲಿ ತುಂಗಾನದಿಯ ರಾಮಮಂಟಪ ಭರ್ತಿಗೆ ಇನ್ನೆರಡು ಅಡಿ ಬಾಕಿ ಉಳಿದಿದೆ. ಶಿವಮೊಗ್ಗ ನಗರದ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ದಡದಲ್ಲಿನ ಕೋರ್ಪಾಲಯ್ಯನ ಛತ್ರದ ಮಂಟಪದ ಸನಿಹಕ್ಕೆ ನೀರು ಹರಿಯುತ್ತಿದೆ.

ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೋಣಂದೂರು, ಸೊರಬ, ಭದ್ರಾವತಿಯಲ್ಲಿ ಭಾರಿ ಮಳೆ ಸುರಿದಿದೆ. ಹೊಸನಗರದ ವಾರಾಹಿ ಯೋಜನಾ ಪ್ರದೇಶದ ಯಡೂರು ಹಾಗೂ ಮಾಸ್ತಿಕಟ್ಟೆಯಲ್ಲೂ ಉತ್ತಮ ಮಳೆಯಾಗಿದೆ.

ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಬೆಂಗಳೂರು: ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ನಿರಂತರ ಗಾಳಿಯೊಂದಿಗೆ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.

ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಭಾನುವಾರದಂದು ‘ಆರೆಂಜ್ ಅಲರ್ಟ್’ ಘೋಷಿಸಿದರೆ, ಉಳಿದ ಎಲ್ಲ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಕರಾವಳಿಯ ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆಯಾಗುವ ಸಂಭವವಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಬೆಳಗಾವಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಗಂಟೆಗೆ 45ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ತಿಳಿಸಿದೆ.

ಶೃಂಗೇರಿ: ಸ್ನಾನ ಘಟ್ಟ ಮುಳುಗಡೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ತುಂಗಾನದಿ ಉಕ್ಕಿ ಹರಿದು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ ಅವರ ಸ್ನಾನ ಘಟ್ಟ, ಸಂಧ್ಯಾ ವಂದನೆ ಮಂಟಪ ಮುಳುಗಿದೆ. ನೆಮ್ಮಾರ್, ಕೆರೆಕಟ್ಟೆ, ಕುರುಬಕೇರಿ, ಭಾರತೀತೀರ್ಥ ರಸ್ತೆ, ಗಾಂಧಿ ಮೈದಾನ, ವಿದ್ಯಾರಣ್ಯಪುರ ರಸ್ತೆ, ಕಿಕ್ರೆ ಹಳ್ಳ ಸೇತುವೆ ಮೇಲೆ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಜೋರುಗಾಳಿಯೊಂದಿಗೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ಗು, ಭಾರಿ ಅಲೆಗಳು ಏಳುತ್ತಿವೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ದೇವಿಮನೆ ಘಟ್ಟದಲ್ಲಿ
ಭೂ ಕುಸಿತ

ಹುಬ್ಬಳ್ಳಿ: ಧಾರವಾಡ, ಗದಗ ಜಿಲ್ಲೆಯಲ್ಲಿ ಶನಿವಾರ ಜಿಟಿಜಿಟಿ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಅಬ್ಬರ ಮುಂದುವರಿದಿದೆ. ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟದಲ್ಲಿ ಪುನಃ ಭೂ ಕುಸಿತ ಸಂಭವಿಸಿದೆ.

ಘಟ್ಟ ಪ್ರದೇಶದಲ್ಲಿನ ಕ್ಷೇತ್ರಪಾಲ ದೇವಾಲಯದ ಪಕ್ಕದಲ್ಲಿಯೇ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ದೇವಸ್ಥಾನದ ಪಕ್ಕದಲ್ಲಿ ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಇದ್ದ ವೀಕ್ಷಣಾ ಗೋಪುರದ ಮೆಟ್ಟಿಲುಗಳು ಕೊಚ್ಚಿಕೊಂಡು ಹೋಗಿವೆ. ಇದೇ ಸ್ಥಳದ ಸಮೀಪ ತಿಂಗಳ ಹಿಂದೆ ಕುಸಿತ ಉಂಟಾಗಿತ್ತು.

ಭೂ ಕುಸಿತದಿಂದ ಕಾಮಗಾರಿ ಪ್ರಗತಿಯಲ್ಲಿರುವ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ 766–ಇ ಅಂಚು ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಲಘು ವಾಹನಗಳ ಸಂಚಾರ ನಡೆಯುತ್ತಿದೆ. ಕುಮಟಾ, ಹೊನ್ನಾವರದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಉಕ್ಕಿ ಹರಿಯುತ್ತಿದ್ದ ಬಡಗಣಿ, ಅಘನಾಶಿನಿ, ಗುಂಡಬಾಳ ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.

ದೇವಿಮನೆ ಘಟ್ಟದಲ್ಲಿ ಭೂ ಕುಸಿತ

ಹುಬ್ಬಳ್ಳಿ: ಧಾರವಾಡ, ಗದಗ ಜಿಲ್ಲೆಯಲ್ಲಿ ಶನಿವಾರ ಜಿಟಿಜಿಟಿ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಅಬ್ಬರ ಮುಂದುವರಿದಿದೆ. ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟದಲ್ಲಿ ಪುನಃ ಭೂ ಕುಸಿತ ಸಂಭವಿಸಿದೆ.

ಘಟ್ಟ ಪ್ರದೇಶದಲ್ಲಿನ ಕ್ಷೇತ್ರಪಾಲ ದೇವಾಲಯದ ಪಕ್ಕದಲ್ಲಿಯೇ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ದೇವಸ್ಥಾನದ ಪಕ್ಕದಲ್ಲಿ ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಇದ್ದ ವೀಕ್ಷಣಾ ಗೋಪುರದ ಮೆಟ್ಟಿಲುಗಳು ಕೊಚ್ಚಿಕೊಂಡು ಹೋಗಿವೆ. ಇದೇ ಸ್ಥಳದ ಸಮೀಪ ತಿಂಗಳ ಹಿಂದೆ ಕುಸಿತ ಉಂಟಾಗಿತ್ತು.

ಭೂ ಕುಸಿತದಿಂದ ಕಾಮಗಾರಿ ಪ್ರಗತಿಯಲ್ಲಿರುವ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ 766–ಇ ಅಂಚು ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಲಘು ವಾಹನಗಳ ಸಂಚಾರ ನಡೆಯುತ್ತಿದೆ. ಕುಮಟಾ, ಹೊನ್ನಾವರದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಉಕ್ಕಿ ಹರಿಯುತ್ತಿದ್ದ ಬಡಗಣಿ, ಅಘನಾಶಿನಿ, ಗುಂಡಬಾಳ ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.

ಕೊಚ್ಚಿಕೊಂಡು ಹೋದ ಜಾನುವಾರು

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕುದಮೂಡ ಗ್ರಾಮದ ಸೇತುವೆ ಮೇಲೆ ಹಳ್ಳದ ನೀರು ಹರಿದಿದ್ದರಿಂದ ಐದಾರು ಜಾನುವಾರು ಕೊಚ್ಚಿಕೊಂಡು ಹೋಗಿದ್ದವು. ಗ್ರಾಮದ ಮಲ್ಲಿಕಾರ್ಜುನ ಪೂಜಾರಿ ಅವರ ಆಕಳು ಹಾಗೂ ಕರು ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ.

ಹಲವು ಗಂಟೆಗಳವರೆಗೆ ಕುದಮೂಡ ಗ್ರಾಮದ ಸಂಪರ್ಕ ಕಡಿತಗೊಂಡಿತ್ತು. ಅಪಾಯಕಾರಿ ಹಳ್ಳವನ್ನು ದಾಟಲು ಜನರು ಮುಂದಾಗುತ್ತಿರುವುದನ್ನು ಗಮನಿಸಿದ ತಹಶೀಲ್ದಾರ್ ಅವರು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಮತ್ತು ಪೊಲೀಸರನ್ನು ಕಳುಹಿಸಿ ಸೇತುವೆ ದಾಟದಂತೆ ತಡೆದರು. ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಎರಡು ಮನೆಗಳಿಗೆ ಮಳೆಯಿಂದಾಗಿ ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.