
ಹೈಕೋರ್ಟ್
ಬೆಂಗಳೂರು: ‘ಮಗುವು ತಂದೆಯ ಉಪನಾಮವನ್ನು ಹೊಂದಿರಬೇಕು ಎಂಬುದು ಸಾಂವಿಧಾನಿಕ ಆದೇಶವಲ್ಲ, ಬದಲಿಗೆ ಅದೊಂದು ಸಾಮಾಜಿಕ ಸಂಪ್ರದಾಯ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ನಗರದ 30 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು (ಡಬ್ಲ್ಯು.ಪಿ.ಸಂಖ್ಯೆ:33465/2025) ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, 'ಅರ್ಜಿದಾರ ಮಹಿಳೆಯ ಮಗಳ ಹೆಸರನ್ನು ಆಕೆಯ ತಂದೆಯ ಬದಲಿಗೆ ತಾಯಿಯ ಕುಟುಂಬದ ಹೆಸರನ್ನು ಪ್ರತಿಬಿಂಬಿಸುವಂತೆ ಬದಲಾಯಿಸಬೇಕು ಮತ್ತು ಜನನ ಪ್ರಮಾಣ ಪತ್ರದಲ್ಲಿ ಜೈವಿಕ ತಂದೆಯ ಹೆಸರನ್ನು ಉಳಿಸಿಕೊಳ್ಳಬೇಕು’ ಎಂದು ಬೆಂಗಳೂರಿನ ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳಿಗೆ ನಿರ್ದೇಶಿಸಿದೆ.
‘ತಾಯಿಯೇ ಏಕೈಕ ಆರೈಕೆದಾರಳಾಗಿ ಮತ್ತು ನೈಸರ್ಗಿಕ ಪೋಷಕಿ ಎನಿಸಿದ್ದರೆ, ತಾಯಿಯ ವಂಶಾವಳಿಯನ್ನು ಮಗುವಿನ ಉಪನಾಮದ ಗುರುತು ಎಂದು ನಮೂದಿಸಲು ಯಾವುದೇ ಸಾಂವಿಧಾನಿಕ ಅಡಚಣೆಯಿಲ್ಲ. ತಾಯಿಯ ಗುರುತನ್ನು ನಮೂದಿಸುವುದು ತಂದೆಯ ಸ್ಥಾನಮಾನವನ್ನು ಕಡಿಮೆ ಮಾಡುವುದಿಲ್ಲ; ಇದು ಸಮಾನತೆಯನ್ನು ದೃಢಪಡಿಸುತ್ತದೆ. ಕುಟುಂಬ, ಪೋಷಕತ್ವ ಮತ್ತು ಗುರುತಿಗೆ ಸಂಬಂಧಿಸಿದ ವಿಷಯಗಳಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನ ಸ್ಥಾನಮಾನವನ್ನು ಅನುಭವಿಸುತ್ತಾರೆ ಎಂಬ ಸಾಂವಿಧಾನಿಕ ತತ್ವವನ್ನು ಮನಗಾಣಬೇಕು’ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣವೇನು?: ನೇಪಾಳ ಮೂಲದ ದಂಪತಿ ಸಹ ಜೀವನ (ಲಿವ್-ಇನ್) ನಡೆಸುತ್ತಿದ್ದರು. ಈ ದಂಪತಿಗೆ 2017ರ ಫೆಬ್ರುವರಿಯಲ್ಲಿ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಈ ಮಗುವಿಗೆ ಆಸ್ಪತ್ರೆಯಿಂದ ನೀಡಲಾದ ಜನನ ಪ್ರಮಾಣ ಪತ್ರದಲ್ಲಿ ತಂದೆಯ ಉಪನಾಮವನ್ನು ನಮೂದಿಸಲಾಗಿತ್ತು.
ಮಗು ಜನಿಸಿದ ನಂತರ ತಂದೆಗೆ ದಾಂಪತ್ಯ ಸಂಬಂಧ ಮುಂದುವರಿಸಲು ಇಷ್ಟವಿಲ್ಲದೆ, ಪತ್ನಿ ಮತ್ತು ಮಗು ಇಬ್ಬರನ್ನೂ ತ್ಯಜಿಸಿ ನೇಪಾಳದ ತಮ್ಮ ಊರಿಗೆ ತೆರಳಿದ್ದರು. ಅಂದಿನಿಂದ ತಾಯಿಯೇ ಮಗುವಿನ ಆರೈಕೆ ಮಾಡುತ್ತಿದ್ದಾರೆ. ತಮ್ಮ ತಾಯಿಯ ಕುಟುಂಬದ ಬೆಂಬಲದೊಂದಿಗೆ ಮಗುವನ್ನು ಬೆಳೆಸುತ್ತಿದ್ದಾರೆ.
ಏತನ್ಮಧ್ಯೆ, ಅರ್ಜಿದಾರ ತಾಯಿ, ‘ನನ್ನ ಎಂಟು ವರ್ಷದ ಮಗಳ ಉಪನಾಮವನ್ನು ಜನನ ಪ್ರಮಾಣ ಪತ್ರದಲ್ಲಿ ಬದಲಾಯಿಸಿ ಕೊಡಿ’ ಎಂದು ಕೋರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಈ ಅರ್ಜಿಯನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.