
ಬೆಂಗಳೂರು: ‘ಭಾರತದಿಂದ ಯಾವುದೇ ವಿದೇಶಿಯರನ್ನು ಹೊರಹಾಕಲು ಸೂಕ್ತ ಆದೇಶ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ’ ಎಂದು ಪ್ರಕರಣವೊಂದರಲ್ಲಿ ಉಲ್ಲೇಖಿಸಿರುವ ಕರ್ನಾಟಕ ಹೈಕೋರ್ಟ್, ‘ಭಾರತದಲ್ಲಿರುವ ವಿದೇಶಿಯರು ತಮ್ಮ ವೀಸಾ ಅಥವಾ ವೀಸಾ ನವೀಕರಣಕ್ಕೆ ಒತ್ತಾಯ ಮಾಡುವ ಹಕ್ಕನ್ನು ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ತಮ್ಮನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿರುವ ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ಸದ್ಯ ಯಲಹಂಕ ವಿಳಾಸ ಹೊಂದಿರುವ ವಿದೇಶಿಯರಾದ ಒಬಿನ್ನಾ ಜೆರೆಮಿಯಾ ಒಕಾಫೋರ್ ಮತ್ತು ಜಾನ್ ಅಡೆಕ್ವಾಘ್ ವ್ಯಾಂಡೆಫ್ಯಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿ ಈ ಕುರಿತಂತೆ ಆದೇಶಿಸಿದೆ.
‘ಮೇಲ್ಮನವಿದಾರರ ಮೊಬೈಲ್ ಫೋನ್ ವಿವರಗಳನ್ನು ಪರಿಶೀಲಿಸಿದಾಗ ಅವು ಮಾದಕ ದ್ರವ್ಯಗಳ ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿವೆ’ ಎಂಬ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ವಿರೋಧಿ ಘಟಕದ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠ, ‘ಭಾರತದ ಸಂವಿಧಾನದ 19 (1)(ಡಿ) ಮತ್ತು 19(1)(ಇ) ವಿಧಿಗಳ ಅಡಿಯಲ್ಲಿ ಭಾರತದಾದ್ಯಂತ ಮುಕ್ತವಾಗಿ ಚಲಿಸುವ ಹಕ್ಕು ಮತ್ತು ದೇಶದ ಯಾವುದೇ ಭಾಗದಲ್ಲಿ ವಾಸಿಸುವ ಹಾಗೂ ನೆಲೆಸುವ ಹಕ್ಕು ಭಾರತದ ನಾಗರಿಕರಿಗೆ ಮಾತ್ರ ಲಭ್ಯವಿದೆ, ವಿದೇಶಿಯರಿಗೆ ಅಲ್ಲ’ ಎಂದು ವಿಶದಪಡಿಸಿದೆ.
‘ಅಧಿಕಾರಿಗಳು ತೆಗೆದುಕೊಂಡ ಕ್ರಮವು ಭಾರತದ ಸಂವಿಧಾನದ 14 ಮತ್ತು 21ನೇ ವಿಧಿಗಳ ಉಲ್ಲಂಘನೆಯಾಗಿದೆ’ ಎಂದು ಮೇಲ್ಮನವಿದಾರರ ಪರ ವಕೀಲರ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ‘ವಿದೇಶಿಯರಿಗೆ ವೀಸಾ ಅಥವಾ ಅದರ ನವೀಕರಣವನ್ನು ಒತ್ತಾಯಿಸುವ ಹಕ್ಕಿಲ್ಲ. ವೀಸಾ ಮಂಜೂರು ಅಥವಾ ವಿಸ್ತರಣೆಯನ್ನು ನಿರಾಕರಿಸುವ ಹಕ್ಕು ಸ್ಪಷ್ಟವಾಗಿ ಅನಿಯಂತ್ರಿತ ಸಾರ್ವಭೌಮದ ಹಕ್ಕು. ಅಂತೆಯೇ, ವೀಸಾ ನಿರಾಕರಿಸಲು ರಾಜ್ಯವು ಯಾವುದೇ ವಿವರಣೆಯನ್ನು ನೀಡುವ ಅಗತ್ಯವೂ ಇಲ್ಲ’ ಎಂದು ನ್ಯಾಯಪೀಠ ಹೇಳಿದೆ.
‘ನಮ್ಮ ಬಂಧನ ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿದೆ’ ಎಂದು ಆಕ್ಷೇಪಿಸಿರುವ ಇಬ್ಬರು ವಿದೇಶಿಯರ ಅರ್ಜಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಹೈಕೋರ್ಟ್ ‘ಇವರಿಬ್ಬರೂ ಯಾವ ಉದ್ಯೋಗ ವೀಸಾದಡಿ ಭಾರತಕ್ಕೆ ಬಂದಿದ್ದು ಇವರ ಕಸುಬಿನ ವಿವರಗಳೇನು ಎಂಬುದನ್ನು ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ಅರ್ಜಿದಾರರ ಪರ ವಕೀಲರಿಗೆ ತಾಕೀತು ಮಾಡಿದೆ.
‘ನಮ್ಮನ್ನು ಬಂಧಿಸುವ ಮನ್ನ ಬಂಧನ ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿದೆ ಮತ್ತು ಬಂಧನದ ವೇಳೆ ಕಾರಣಗಳನ್ನು ನಮಗೆ ಅರ್ಥವಾಗುವ ಭಾಷೆಯಲ್ಲಿ ಒದಗಿಸಿಲ್ಲ’ ಎಂದು ಆಕ್ಷೇಪಿಸಿ ನೈಜೀರಿಯಾ ಪ್ರಜೆಗಳಾದ ಎಮೆಕಾ ಜೇಮ್ಸ್ ಇವೊಬಾ ಅಲಿಯಾಸ್ ಆಸ್ಟಿನ್ ನೊಸೊ ಇವೊಬಾ ಮತ್ತು ಯುಡೆರಿಕ್ ಫಿಡೆಲಿಸ್ (ಸದ್ಯ ಕೋಗಿಲು ನಿವಾಸಿಗಳು) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ‘ಇವರ ಬಳಿ ಎಂಡಿಎಂಎ ಮತ್ತು ಕೊಕೇನ್ ವಶಪಡಿಸಿಕೊಳ್ಳಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಈ ಮಾತಿಗೆ ಕನಲಿ ಹೋದ ನ್ಯಾಯಪೀಠ ‘ಇವರ ಉದ್ಯೋಗ ವೀಸಾದ ವಿವರಗಳೇನು ಇವರು ಇಲ್ಲಿ ಏನು ಕಸುಬು ಮಾಡಿಕೊಂಡಿದ್ದಾರೆ. ಎಲ್ಲಾ ವಿವರಗಳನ್ನು ನ್ಯಾಯಾಲಯಕ್ಕೆ ಒದಗಿಸಿ’ ಎಂದು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿತು. ಅಂತೆಯೇ ‘ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನೂ ಪಕ್ಷಗಾರನನ್ನಾಗಿ ಮಾಡಿ’ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.