ADVERTISEMENT

ಅಕ್ರಮ ಗಣಿಗಾರಿಕೆ: ಸರ್ಕಾರಕ್ಕೆ ಹೈಕೋರ್ಟ್‌ನಿಂದ ನೋಟಿಸ್

ಬರಗೇನಹಳ್ಳಿ ವ್ಯಾಪ್ತಿಯಲ್ಲಿ ಬಂಡೆಗಳ ಸ್ಫೋಟ–ಕ್ರಷರ್‌ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 20:59 IST
Last Updated 7 ಆಗಸ್ಟ್ 2025, 20:59 IST
ಹೈಕೋರ್ಟ್‌ 
ಹೈಕೋರ್ಟ್‌    

ಬೆಂಗಳೂರು: ‘ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿ, ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ವ್ಯಾಪ್ತಿಗೆ ಒಳಪಟ್ಟ ಬರಗೇನಹಳ್ಳಿ ಸುತ್ತಮುತ್ತಲ ಕಂದಾಯ ಭೂಮಿಯಲ್ಲಿ ನಡೆಯುತ್ತಿರುವ ಕಾನೂನುಬಾಹಿರ, ಬಂಡೆಗಳ ಸ್ಫೋಟ ಮತ್ತು ಕ್ರಷರ್‌ ಚಟವಟಿಕೆಗಳನ್ನು ಸ್ಥಗಿತಗೊಳಿಸಲು ಆದೇಶಿಸಬೇಕು’ ಎಂಬ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬರಗೇನಹಳ್ಳಿಯ ಕಾಯಂ ನಿವಾಸಿಗಳು ಮತ್ತು ಕೃಷಿಕರೂ ಆದ ರವಿಕುಮಾರ್, ಕುಮಾರಸ್ವಾಮಿ, ಪಿ.ಶಶಾಂಕ, ಬಿ.ಎಚ್‌.ಸತೀಶ್‌ ಮತ್ತು ಜಯಣ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಶಿವಪ್ರಕಾಶ್‌, ‘ಬರಗೇನಹಳ್ಳಿ ವ್ಯಾಪ್ತಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಲಯದಲ್ಲಿ ಹೊರೈಝನ್‌ ಇಂಡಸ್ಟ್ರಿಯಲ್‌ ಹೈ ಪಾರ್ಕ್‌ ಮತ್ತು ಎಂಬೆಸಿ ಇಂಡಸ್ಟ್ರಿಯಲ್‌ ಹೈ ಪಾರ್ಕ್‌ ಕಂಪನಿ ವತಿಯಿಂದ ಕಾನೂನು ಬಾಹಿರವಾಗಿ ಬಂಡೆಗಳ ಬ್ಲಾಸ್ಟಿಂಗ್‌ (ಸ್ಫೋಟ), ಡ್ರಿಲ್ಲಿಂಗ್‌ (ಕೊರೆಯುವುದು) ಮತ್ತು ಕ್ರಷರ್‌ (ಕಲ್ಲು ಪುಡಿ ಮಾಡುವುದು) ಕಾಮಗಾರಿ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಈ ಚಟುವಟಿಕೆ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶಕ್ಕೆ ಒಳಪಡುವ ಸ್ಥಳೀಯ ಪರಿಸರ, ಗ್ರಾಮಸ್ಥರು ಮತ್ತು ಸಕಲ ಜೀವಸಂಕುಲಕ್ಕೆ ಅಪಾಯ ತಂದೊಡ್ಡಿದೆ. ಗೋಮಾಳ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಕಾಮಗಾರಿಯ ಬಗ್ಗೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಈ ಕಾನೂನುಬಾಹಿರ ಚಟುವಟಿಕೆಗಳನ್ನು ಕೂಡಲೇ ಸ್ಥಗಿತಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ–ಜಂಟಿ ನಿರ್ದೇಶಕ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಕೆಐಎಡಿಬಿ ಕಾರ್ಯಕಾರಿ ಸದಸ್ಯ, ನೆಲಮಂಗಲ ತಹಶೀಲ್ದಾರ್‌, ಮುಂಬೈನ ದಿ ಹೊರೈಝನ್‌ ಇಂಡಸ್ಟ್ರಿಯಲ್‌ ಹೈ ಪಾರ್ಕ್‌ (ಟಿಎನ್‌) ಪ್ರೈವೇಟ್‌ ಲಿಮಿಟೆಡ್‌ ಕಂಪನಿ, ಮೆಸರ್ಸ್‌ ಎಂಬೆಸಿ ಇಂಡಸ್ಟ್ರಿಯಲ್‌ ಪಾರ್ಕ್‌ ಹೊಸೂರು (ಟಿಎನ್‌) ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಮತ್ತು ನೆಲಮಂಗಲ ತಾಲ್ಲೂಕಿನ ಡಾಬಸ್‌ಪೇಟೆ ಪೊಲೀಸ್‌ ಠಾಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಲಾಗಿದೆ.

ಅರ್ಜಿದಾರರ ಆರೋಪಗಳೇನು? 

‘ಹೊರೈಝನ್‌ ಇಂಡಸ್ಟ್ರಿಯಲ್‌ ಪಾರ್ಕ್‌ ಕಂಪನಿಯು ಬರಗೇನಹಳ್ಳಿಯ ವ್ಯಾಪ್ತಿಯ ಸರಿಸುಮಾರು 125 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದೆ. ಈ ಕಂಪನಿಗೆ ಸಂಬಂಧಿಸಿದಂತೆ ಸುಮಾರು 20 ಎಕರೆಯಲ್ಲಿ ಬೃಹತ್‌ ಆಕಾರದ ಬಂಡೆಗಳು ಇವೆ. ಇಲ್ಲಿನ ಒಂದು ಬೃಹತ್‌ ಬಂಡೆಕಲ್ಲು ಸರ್ಕಾರದ ಸಂಪತ್ತಿಗೆ ಸೇರಿರುತ್ತದೆ. ಆದರೆ ಕಂಪನಿಯವರು ಈ ಬಂಡೆಯ ಬ್ಲಾಸ್ಟಿಂಗ್‌ ಮತ್ತು ಡ್ರಿಲ್ಲಿಂಗ್‌ ನಡೆಸುತ್ತಿದ್ದಾರೆ. ಸಕ್ಷಮ ಪ್ರಾಧಿಕಾರಗಳಿಂದ ಯಾವುದೇ ಅನುಮತಿ ಪಡೆಯದೆ ಮತ್ತು ನಿರಾಕ್ಷೇಪಣೆ ಪತ್ರ ಪಡೆಯದೆ ಮೊಬೈಲ್‌ (ಸಂಚಾರಿ) ಕ್ರಷರ್‌ ಘಟಕವನ್ನು ಸ್ಥಾಪಿಸಲಾಗಿದೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಕೋರಿಕೆ: ‘ಕಂದಾಯ ಭೂಮಿಯ ವಲಯದಲ್ಲಿ ನಡೆಯುತ್ತಿರುವ ಈ ಚಟವಟಿಕೆಗಳಿಂದ ಬರಗೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜಲಧಾರೆ ರಾಜಕಾಲುವೆ ನಾಲೆಗಳು ಹಾಗೂ ಗೋಮಾಳ ಜಮೀನುಗಳ ಫಲವತ್ತತೆ ನಶಿಸಿ ಹೋಗುತ್ತಿದೆ. ಸುತ್ತೆಲ್ಲಾ ತೀವ್ರತಮ ವಾಯು ಮಾಲಿನ್ಯ ಆವರಿಸಿದೆ. ಜಾನುವಾರುಗಳ ಮೇವಿಗೆ ತತ್ವಾರ ಬಂದೊದಗಿದೆ. ಆದ್ದರಿಂದ ಕೂಡಲೇ ಮೆಸರ್ಸ್‌ ಎಂಬೆಸಿ ಇಂಡಸ್ಟ್ರಿಯಲ್‌ ಪಾರ್ಕ್‌ ಹೊಸೂರು (ಟಿಎನ್‌) ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು. ಇಲ್ಲಿನ ಕೃಷಿ ಪ್ರದೇಶ ಜನ–ಜಾನುವಾರುಗಳ ಸಂರಕ್ಷಣೆಗೆ ನಿರ್ದೇಶಿಸಬೇಕು’ ಎಂದು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.