ADVERTISEMENT

ವಿಚ್ಛೇದನಕ್ಕೆ ಕಲಹ ಮಾತ್ರವೇ ಕಾರಣವಾಗಬಾರದು: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 17:48 IST
Last Updated 27 ಮಾರ್ಚ್ 2022, 17:48 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ದಂಪತಿ ಮಧ್ಯೆಜಗಳವಿದೆ, ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂದ ಮಾತ್ರಕ್ಕೆ ವಿವಾಹ ವಿಚ್ಛೇದನದ ಮನವಿ ಒಪ್ಪಿ ಡಿಕ್ರಿ ನೀಡುವುದು ಸಮಂಜಸವಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಈ ಕುರಿತಂತೆ ಪತಿಯ ವಿವಾಹ ವಿಚ್ಛೇದನಕ್ಕೆ ಡಿಕ್ರಿಯ ಮುದ್ರೆಯೊತ್ತಿದ್ದಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರ ಆದೇಶವನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ಹಾಗೂ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ತಳ್ಳಿ ಹಾಕಿದೆ. ಹಿಂದೂ ವಿವಾಹ ಕಾಯ್ದೆ–1955ರ ಕಲಂ 13 (1)(ಐಎ) ಮತ್ತು (ಐಬಿ) ಅನ್ವಯ ಕೋರಲಾಗಿದ್ದವಿವಾಹ ವಿಚ್ಛೇದನದ ಡಿಕ್ರಿ ರದ್ದುಗೊಳಿಸಿದೆ.

‘ಅರ್ಜಿದಾರ ದಂಪತಿಯ ಮಧ್ಯೆ ಸರಿಪಡಿಸಲಾಗದಂತಹ ಕಂದಕವಿದೆ. ಒಂಬತ್ತು ವರ್ಷಗಳಿಂದ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಹಾಗಾಗಿ ಇದು ವಿವಾಹ ವಿಚ್ಛೇದನಕ್ಕೆ ಅರ್ಹವಾಗಿದೆ ಎಂಬ ಅಭಿಪ್ರಾಯದೊಂದಿಗೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನದ ಡಿಕ್ರಿ ನೀಡಿರುವುದು ಸರಿಯಲ್ಲ. ಪತಿ–ಪತ್ನಿಯರ ಆರೋಪಗಳನ್ನು ಆಯಾ ಸಮಾಜದ ರೀತಿ ರಿವಾಜುಗಳ ನಿರ್ದಿಷ್ಟ ತಳಹದಿಯಲ್ಲಿ ಗಮನಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಪ್ರಕರಣವೇನು?: ‘ಹೆಂಡತಿ ಮದುವೆಯಾದ ತಕ್ಷಣ ಪ್ರತ್ಯೇಕ ಮನೆ ಮಾಡಬೇಕು ಎಂದು ಒತ್ತಾಯಿಸಿ ಪದೇ ಪದೇ ಜಗಳ ತೆಗೆಯುತ್ತಿದ್ದಳು. ಮುನಿಸಿಕೊಂಡು ತವರಿಗೆ ತೆರಳಿದ್ದಳು. ಕರೆದರೂ ಬರಲಿಲ್ಲ. ನನಗೆ ಪತ್ನಿಯಿಂದ ವಿಚ್ಛೇದನ ಬೇಕು’ ಎಂದು ಕೋರಿದ್ದ ಪತಿಯ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿತ್ತು.

ಈ ಮನವಿಯನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.