ಹೈಕೋರ್ಟ್ ಆದೇಶ
ಬೆಂಗಳೂರು: ‘ರಾಜ್ಯದಲ್ಲಿ ಜಮೀನುಗಳ ಅಕ್ರಮ ಮಾರಾಟ ಹಾಗೂ ಈ ಸಂಬಂಧದ ವಂಚನೆ ಪ್ರಕರಣಗಳಿಗೆ ಬಲವಾದ ಮೂಗುದಾರ ಹಾಕುವ ಅಗತ್ಯವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್ ‘ರಾಜ್ಯದ ಜಮೀನುಗಳ ಭೌಗೋಳಿಕ ಡಿಜಿಟಲ್ ಪ್ಲಾಟ್‌ಫಾರ್ಮ್ ನಕ್ಷೆ ಸಿದ್ಧಪಡಿಸುವ ದಿಸೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯ ಹೊಂದಿರುವ 51 ಎಕರೆಗೂ ಅಧಿಕ ಅರಣ್ಯ ಭೂಮಿಯ ಅತಿಕ್ರಮಣ ತೆರವುಗೊಳಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿರುವ ಪ್ರಕರಣದಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರು ತಮ್ಮ ತೀರ್ಪಿನಲ್ಲಿ ಈ ಅಂಶವನ್ನೂ ಉಲ್ಲೇಖಿಸಿದ್ದಾರೆ.
‘ಉದ್ದೇಶಿತ ಸಮಿತಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯ ಅಧಿಕಾರಿ ಕಂದಾಯ ಇಲಾಖೆ ಅರಣ್ಯ ಹಾಗೂ ನಗರಾಭಿವೃದ್ದಿ ಅಧಿಕಾರಿಗಳಿರಬೇಕು’ ಎಂದು ನಿರ್ದೇಶಿಸಲಾಗಿದೆ. ‘ರಾಜ್ಯದ ಎಲ್ಲ ಭೂ ಭಾಗಗಳ ಸಂಖ್ಯಾತ್ಮಕ ಗಣನೆಗೆ ಸಂಬಂಧಿಸಿದಂತೆ ಡಿಜಿಟಲ್ ಏಕೀಕೃತ ಮತ್ತು ಅವ್ಯಯ ರೂಪದ ನಕ್ಷೆಯನ್ನು ಹೊಂದಿದ ಭೌಗೋಳಿಕ ನಕ್ಷೆ ಸಿದ್ಧಪಡಿಸಬೇಕು. ಇದಕ್ಕಾಗಿ ಇಸ್ರೊ ಹಾಗೂ ಎಫ್‌ಎಸ್‌ಐ (ಫಾರೆಸ್ಟ್ ಸರ್ವೇ ಆಫ್ ಇಂಡಿಯಾ) ಸೇರಿದಂತೆ ತಜ್ಞ ಸಂಸ್ಥೆಗಳ ನೆರವು ಪಡೆಯಬೇಕು. ಏಕೀಕೃತ ಭೌಗೋಳಿಕ ನಕ್ಷೆಯಲ್ಲಿ ಉಪಗ್ರಹ ಚಿತ್ರಗಳೂ ಒಳಗೊಂಡಿರಬೇಕು. ಇದರಲ್ಲಿ ಸರ್ಕಾರದ ಪ್ರತಿ ಜಮೀನುಗಳ ಹಾಗೂ ನಿವೇಶನಗಳ ವಿವರ ಲಭ್ಯವಿರಬೇಕು’ ಎಂದು ವಿವರಿಸಲಾಗಿದೆ.
‘ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಸಬ್ ರಿಜಿಸ್ಟ್ರಾರ್ ಕಚೇರಿಗೂ ಸಂಪರ್ಕ ಹೊಂದಿರಬೇಕು. ಜನಸಾಮಾನ್ಯರಿಗೂ ಈ ಡಿಜಿಟಲ್ ಫ್ಲಾಟ್‌ಫಾರ್ಮ್ ಬಳಕೆಗೆ ಲಭ್ಯವಿರಬೇಕು. ಈ ಮೂಲಕ ಅಕ್ರಮ ನೋಂದಣಿ ತಡೆಯಬೇಕು’ ಎಂದು ನ್ಯಾಯಪೀಠ ಸೂಚಿಸಿದೆ. ಪ್ರಕರಣದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ.ರೋಣ ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.