ADVERTISEMENT

‘ಒಂದೇ ಅಪರಾಧಕ್ಕೆ ಎರಡು ಬಾರಿ ಶಿಕ್ಷೆ ನೀಡಲಾಗದು’: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 16:15 IST
Last Updated 26 ಜುಲೈ 2021, 16:15 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಆ್ಯಸಿಡ್ ದಾಳಿ ಪ್ರಕರಣದ ಆರೋಪಿಗೆ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಶಿಕ್ಷೆ ರದ್ದುಪಡಿಸಿರುವ ಹೈಕೋರ್ಟ್, ಸೆಕ್ಷನ್ 326ಎ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ಖಚಿತಪಡಿಸಿದೆ.

ಶಿಕ್ಷಕಿ ಮತ್ತು ಅವರೊಂದಿಗೆ ಇದ್ದ ವಿದ್ಯಾರ್ಥಿನಿ ಮೇಲೆ 2014ರಲ್ಲಿ ಆ್ಯಸಿಡ್ ದಾಳಿ ನಡೆದಿತ್ತು. ಅಪರಾಧಕ್ಕೆ ಸೆಕ್ಷನ್ 326ಎ ಮತ್ತು ಸೆಕ್ಷನ್ 307ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ಶಿಕ್ಷೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಮಹೇಶ್ ಮೇಲ್ಮನವಿ ಸಲ್ಲಿಸಿದ್ದರು.

ಆ್ಯಸಿಡ್ ದಾಳಿಯಿಂದ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು 2013ರಲ್ಲಿ 326ಎ ಸೆಕ್ಷನ್‌ ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ₹10 ಲಕ್ಷ ದಂಡ, ಅಲ್ಲದೇ, ಕೊಲೆ ಯತ್ನ ಆರೋಪದಲ್ಲಿ ಸೆಕ್ಷನ್ 307ರ ಅಡಿಯಲ್ಲೂ ಜೀವಾವಧಿ ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಲಾಗಿತ್ತು.

ADVERTISEMENT

ವಿಚಾರಣೆ ನಡೆಸಿದ ಬಿ. ವೀರಪ್ಪ ಮತ್ತು ವಿ.ಶ್ರೀಶಾನಂದ ಅವರಿದ್ದ ವಿಭಾಗೀಯ ಪೀಠ, ‘ಈ ರೀತಿಯ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್ 31(2)ರ ನಿಬಂಧನೆ ಕಾರ್ಯರೂಪಕ್ಕೆ ಬರಲಿದೆ. ಒಂದೇ ಅಪರಾಧಕ್ಕೆ ಎರಡು ಬಾರಿ ವಿಚಾರಣೆ ನಡೆಸಲು ಮತ್ತು ಶಿಕ್ಷೆ ವಿಧಿಸಲು ಅವಕಾಶ ಇಲ್ಲ’ ಎಂದು ಹೇಳಿತು.

ಪ್ಲಾಸ್ಟಿಕ್ ಸರ್ಜರಿ ಸೇರಿ ದುಬಾರಿ ಚಿಕಿತ್ಸೆಗೆ ಮಾಡಿರುವ ಖರ್ಚಿನ ಪರಿಹಾರ ಕೋರಿ ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ಪೀಠ ಅನುಮತಿ ನೀಡಿತು. ₹10 ಲಕ್ಷ ದಂಡದಲ್ಲಿ ₹9.75 ಲಕ್ಷವನ್ನು ಸಂತ್ರಸ್ತೆಗೆ ಪಾವತಿಸಬೇಕು ಎಂದು ಪೀಠ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.