ADVERTISEMENT

ಧಾರ್ಮಿಕ ನಂಬಿಕೆ ಅಭಿವೃದ್ಧಿ ಅಳತೆಗೋಲಲ್ಲ...: ಹೈಕೋರ್ಟ್ ನ್ಯಾ.ಎಂ.ಐ.ಅರುಣ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 19:59 IST
Last Updated 5 ಡಿಸೆಂಬರ್ 2025, 19:59 IST
   

ಬೆಂಗಳೂರು: ‘ವಿಜ್ಞಾನ, ತಂತ್ರಜ್ಞಾನ, ತರ್ಕ, ವೈಜ್ಞಾನಿಕ ಮನೋಭಾವಗಳು ದೇಶದ ಅಭಿವೃದ್ಧಿಗೆ ಕಾರಣ ಆಗಿವೆಯೇ ವಿನಃ ಧಾರ್ಮಿಕ ನಂಬಿಕೆಗಳಲ್ಲ’ ಎಂದು ಹೈಕೋರ್ಟ್‌ ಪ್ರಕರಣವೊಂದರ ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನನ್ನ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು‘ ಎಂದು ಕೋರಿ ‘ಆಜ್‌ ತಕ್‌‘ ಹಿಂದಿ ಸುದ್ದಿವಾಹಿನಿ ಮತ್ತು ಅದರ ಮುಖ್ಯ ಸಂಪಾದಕ ಸುಧೀರ್‌ ಚೌಧರಿ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಕರಣದ ಪ್ರತಿವಾದಿಯಾಗಿರುವ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿಯ ಸಹಾಯಕ ಆಡಳಿತಾಧಿಕಾರಿ ಎಸ್.ಶಿವಕುಮಾರ್ ಪರ ಹೈಕೋರ್ಟ್‌ ವಕೀಲ ಎಸ್‌.ಬಾಲನ್‌, ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರ ರೂಪಿಸಿರುವ ನೀತಿಯ ಮೇಲೆ ಚರ್ಚೆಯಾದರೆ ಆಕ್ಷೇಪವಿಲ್ಲ. ಆದರೆ, ಈ ಪ್ರಕರಣದಲ್ಲಿ ಸುದ್ದಿ ವಿಶ್ಲೇಷಣೆಯ ನೆಪದಲ್ಲಿ ಪ್ರಚೋದನೆ ನೀಡಲಾಗಿದೆ. ಒಂದು ಸಮುದಾಯವನ್ನು ರಾಕ್ಷಸೀಕರಿಸಲಾಗಿದ್ದು, ದ್ವೇಷ ಹರಡುವ ಪ್ರಯತ್ನ ಮಾಡಲಾಗಿದೆ’ ಎಂದು ಆಕ್ಷೇಪಿಸಿದರು.

ADVERTISEMENT

‘ಇಡೀ ಕಾರ್ಯಕ್ರಮದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಹೇಗೆ ಬಿಂಬಿಸಲಾಗಿದೆ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು. ವಕ್ಫ್‌ ಮಂಡಳಿ... ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಚೋದನೆ ಒಪ್ಪಿತವೇ? ಒಂದು ಸಮುದಾಯದ ವಿರುದ್ಧ ದ್ವೇಷ ಕಾರಬಹುದೇ’ ಎಂದು ಪ್ರಶ್ನಿಸಿದರು.

ಇದಕ್ಕೆ ನ್ಯಾಯಪೀಠ, ‘ಇಂದು ರಾಜಕೀಯ ಪಕ್ಷಗಳು ಓಲೈಕೆಯ ಧೋರಣೆ ಪ್ರದರ್ಶಿಸುತ್ತಿವೆ. ಸಾಮಾನ್ಯ ಜನರಿಗೆ ಅನ್ನ, ಆಹಾರ, ಬಟ್ಟೆ ಮುಖ್ಯವೇ ವಿನಃ ಧಾರ್ಮಿಕ ಮೂಲಭೂತವಾದವಲ್ಲ’ ಎಂದು ಹೇಳಿತು.

‘ಸಮುದಾಯದ ಆಧಾರದಲ್ಲಿ ತಾರತಮ್ಯ ಮಾಡಬೇಕು ಎಂಬುದೇ ನಮ್ಮ ಮಾನಸಿಕತೆಯಾಗಿದೆ. ಇದೇ ಕಾರಣಕ್ಕೆ, ಬೇರೆಲ್ಲವನ್ನೂ ಬಿಟ್ಟು ರಾಜಕಾರಣದಲ್ಲಿ ಜಾತಿ ನೋಡಿಕೊಂಡು ಸೀಟು ಹಂಚಿಕೆ ಮಾಡಲಾಗುತ್ತದೆ. ಸೀಟು ನೀಡುವಾಗ ಶೇ 50ಕ್ಕೂ ಹೆಚ್ಚಿನ ಪ್ರಮಾಣ ಜಾತಿಯ ಆಧಾರದಲ್ಲೇ ನೀಡಲಾಗುತ್ತದೆ’ ಎಂದು ಹೇಳಿತು.

‘ರಾಜಕಾರಣಿಗಳು ಭ್ರಷ್ಟರು, ಕ್ರಿಮಿನಲ್‌ಗಳು ಎನ್ನುತ್ತೇವೆ. ಆದರೆ, ಪ್ರಜಾಪ್ರಭುತ್ವದಲ್ಲಿ ನಮಗೆ ತಕ್ಕ ನಾಯಕರು ಸಿಗುತ್ತಾರೆ. ಇಲ್ಲಿ ಯಥಾ ಪ್ರಜಾ, ತಥಾ ರಾಜ. ಈಸ್ಟ್‌ ಇಂಡಿಯಾ ಕಂಪನಿಯ ಕೆಲವೇ ಕೆಲವು ಸಾವಿರದಷ್ಟು ಸಿಬ್ಬಂದಿ ನಮ್ಮನ್ನು ವಸಹಾತುಶಾಹಿ ವ್ಯವಸ್ಥೆಯಲ್ಲಿ ಆಳಿದರು. ಏಕೆಂದರೆ, ನಮಗೆ ಭಾರತೀಯತೆ ಎಂಬುದೇ ತಿಳಿದಿರಲಿಲ್ಲ. ಅದು ನಮ್ಮ ಅರಿವಿಗೆ ಬಂದಕೂಡಲೇ ಬ್ರಿಟಿಷರು ದೇಶದಿಂದ ಕಾಲ್ಕಿತ್ತರು. ಈಗ ನಾವು ಕಂಪನಿ, ಕಾರ್ಪೊರೇಟೀಕರಣದ ಆಧುನಿಕ ವಸಹಾತುಕರಣ ಶತಮಾನದಲ್ಲಿದ್ದೇವೆ. ಆದರೆ, ಪುನಃ ಹಳೆಯ ಹವ್ಯಾಸಗಳಿಗೆ ಮರಳುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿತು.

ನ್ಯಾ.ಎಂ.ಐ.ಅರುಣ್‌

ಏನಿದು ಪ್ರಕರಣ?

ರಾಷ್ಟ್ರೀಯ ಸುದ್ದಿ ವಾಹಿನಿ ‘ಆಜ್ ತಕ್‌‘ನಲ್ಲಿ 2023ರ ಸೆಪ್ಟೆಂಬರ್ 11ರಂದು ರಾತ್ರಿ 9.55ಕ್ಕೆ ಪ್ರಸಾರವಾದ ಸುದ್ದಿಯಲ್ಲಿ ಸುಧೀರ್ ಚೌಧರಿ ‘ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯ ಪ್ರಯೋಜನ ಕೇವಲ ಅಲ್ಪಸಂಖ್ಯಾತರಿಗೆ ಲಭಿಸುತ್ತಿದೆ. ಹಿಂದೂಗಳಿಗೆ ಈ ಯೋಜನೆ ನೀಡಲಾಗುತ್ತಿಲ್ಲ. ಈ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲದ ಬಡ ಹಿಂದೂಗಳಿಗೆ ಅನ್ಯಾಯವಾಗಿದೆ’ ಎಂದು ಹೇಳಿದ್ದರು.

‘ಇದು ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ಮತ್ತು ಸುಳ್ಳು ಸುದ್ದಿ ಪ್ರಕಟಿಸಿದ ಕೃತ್ಯ’ ಎಂಬ ಆರೋಪದಡಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್.ಶಿವಕುಮಾರ್‌ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಸ್ವಾವಲಂಬಿ ಸಾರಥಿ ಯೋಜನೆಯು ಧಾರ್ಮಿಕ ಅಲ್ಪಸಂಖ್ಯಾತರು ₹ 3 ಲಕ್ಷದವರೆಗೆ ವಾಣಿಜ್ಯ ಸಾರಿಗೆ ವಾಹನಗಳನ್ನು ಖರೀದಿಸಲು ಪಡೆದ ಬ್ಯಾಂಕ್ ಸಾಲಗಳ ಮೇಲೆ ಶೇ 50ರಷ್ಟು ಸಬ್ಸಿಡಿ ಒದಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.