ADVERTISEMENT

ಲಂಚ ಪ್ರಕರಣ: ಸೀಮಂತ್‌ ಕುಮಾರ್‌ ಆತ್ಮಸಾಕ್ಷಿ ಪ್ರಶ್ನಿಸಿಕೊಳ್ಳಲಿ ಎಂದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 18:49 IST
Last Updated 7 ಜುಲೈ 2022, 18:49 IST
ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ‘ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಗಿದ್ದ ಸೀಮಂತ್‌ ಕುಮಾರ್ ಸಿಂಗ್‌ ಮನೆ ಮೇಲೆಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ನಡೆದಿದ್ದ ಸಿಬಿಐ ದಾಳಿ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ತನಿಖಾ ವರದಿಯನ್ನು ಸಲ್ಲಿಸಿ’ ಎಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ)ಹೈಕೋರ್ಟ್‌ ಆದೇಶಿಸಿದೆ.

₹ 5 ಲಕ್ಷ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರ ಮುಂದುವರಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಎಸಿಬಿಯ ಎಡಿಜಿಪಿ ಸೀಮಂತ್‌ಕುಮಾರ್‌ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಎಸಿಬಿ ಪರ ಹಾಜರಾಗಿದ್ದ ವಕೀಲ ಪಿ.ಎನ್‌.ಮನಮೋಹನ್‌, ಈ ಹಿಂದೆ ನ್ಯಾಯಪೀಠ ನೀಡಿದ್ದ ನಿರ್ದೇಶನದ ಅನುಸಾರ 2016ರಿಂದ 2019ರವರೆಗೆ ಎಸಿಬಿ ಹಾಕಿರುವ ‘ಬಿ‘ ರಿಪೋರ್ಟ್‌ಗಳ ಅಂಕಿ ಅಂಶವನ್ನು ನ್ಯಾಯಪೀಠಕ್ಕೆ ನೀಡಿದರು. ವಿವರಗಳನ್ನು ಪರಿಶೀಲಿಸಿದ ನ್ಯಾಯಪೀಠ, ‘ಈ ದಸ್ತಾವೇಜು ಅಧಿಕೃತವಾಗಿಲ್ಲ ಮತ್ತು ಇದರಲ್ಲಿ ಅಧಿಕಾರಿಗಳ ಸಹಿಯೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ADVERTISEMENT

‘ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ (2013ರ ಏಪ್ರಿಲ್‌ 5) ಆಗಿನ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ, ಈಗಿನ ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಅಧೀನ ಅಧಿಕಾರಿಗಳ ಮೂಲಕ ಗಣಿ ಕಂಪೆನಿ ಮಾಲೀಕರಿಂದ ಸಿಂಗ್‌ ಮಾಮೂಲು ವಸೂಲಿ ಮಾಡಿಸುತ್ತಿದ್ದರು. ಸ್ವಸ್ತಿಕ್ ನಾಗರಾಜ್ ಅವರಿಂದ ₹ 3 ಲಕ್ಷ ಪಡೆದಿದ್ದರು ಎಂಬ ಆರೋಪವಿದೆ. ಈ ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿದೆ. ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಸಿಬಿಐ ಯಾವುದೇ ಕ್ರಮವನ್ನೂ ಸೂಚಿಸಿಲ್ಲ. ಈ ಕುರಿತ ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿ’ ಎಂದು ಸಿಬಿಐ ವಕೀಲ ಪಿ.ಪ್ರಸನ್ನ ಕುಮಾರ್‌ ಅವರಿಗೆ ನಿರ್ದೇಶಿಸಿತು.

ಜಟಾಪಟಿ:‘ಈ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಯೊಬ್ಬರುಜಿಲ್ಲಾಧಿಕಾರಿಯ ಆಪ್ತ ಸಹಾಯಕನಾಗಿರಲು ಅವಕಾಶ ಕೊಟ್ಟಿದ್ದು ಯಾರು?, ಆತನಿಗೆ ಕರ್ತವ್ಯ ನಿರ್ವಹಿಸಲು ಆದೇಶ ಎಲ್ಲಿದೆ?, ಈ ಕುರಿತ ಮಾಹಿತಿಗಳನ್ನೂ ಮುಚ್ಚಿಡುತ್ತಿದ್ದೀರಿ, ಸಂಸ್ಥೆಯ ರಕ್ಷಣೆ ಮಾಡುವುದನ್ನು ಬಿಟ್ಟು ಆರೋಪಿಯನ್ನು ರಕ್ಷಿಸುತ್ತಿದ್ದೀರಿ’ ಎಂದು ಎಸಿಬಿ ವಿರುದ್ಧ ಸಂದೇಶ್‌ ಮತ್ತೊಮ್ಮೆ ಹರಿಹಾಯ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮನಮೋಹನ್‌, ‘ತಾವು ಅರ್ಜಿ ವಿಚಾರಣೆ ವ್ಯಾಪ್ತಿಯಿಂದ ಆಚೆಗೆ ಹೋಗುತ್ತಿದ್ದೀರಿ. ಅರ್ಜಿದಾರರು, ಪ್ರತಿವಾದಿಗಳನ್ನು ಹೊರತುಪಡಿಸಿದ ಪ್ರಕರಣಕ್ಕೆ ಸಂಬಂಧವಿಲ್ಲದ ಅಧಿಕಾರಿಗಳ ವಿವರ ಮತ್ತು ದಾಖಲೆಗಳನ್ನು ಕಾನೂನು ಪ್ರಕಾರವೇ ಕೋರ್ಟ್‌ ತರಿಸಿಕೊಳ್ಳಬೇಕಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ನ ಪೂರ್ವ ನಿದರ್ಶನಗಳನ್ನು ಮಂಡಿಸಿದರು.

ಈ ಮಾತಿಗೆ ಕೆರಳಿದ ನ್ಯಾ. ಸಂದೇಶ್, ‘ಎಡಿಜಿಪಿ ಬಗ್ಗೆ ಅನುಮಾನ ಬರಲು ಕಾರಣಗಳಿವೆ. ಅವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ಎಸಿಬಿ ಸಂಸ್ಥೆಯ ಹಿತ ಕಾಪಾಡುವ ಉತ್ಸಾಹ ಅವರಲ್ಲಿ ಕಾಣುತ್ತಿಲ್ಲ. ಬೇಕಾದರೆ ಅವರು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ. ಎಡಿಜಿಪಿ ಬಗ್ಗೆ ನನಗೆ ವೈಯುಕ್ತಿಕ ದ್ವೇಷವಿಲ್ಲ. ಇದರಿಂದ ನನಗೆ ಆಗಬೇಕಾದ್ದು ಏನೂ ಇಲ್ಲ. ಸಾರ್ವಜನಿಕರ ಹಿತರಕ್ಷಣೆಗಾಗಿ ಈ ರೀತಿಯ ನಿರ್ದೇಶನ ನೀಡುತ್ತಿದ್ದೇನೆ. ನೀವು ಎಡಿಜಿಪಿ ಪರ ವಹಿಸಿಕೊಂಡು ಮಾತನಾಡುವುದು ಸರಿಯಲ್ಲ’ ಎಂದು ಗುಡುಗಿದರು.

ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಿದರು.

ನ್ಯಾ.ಸಂದೇಶ್‌ ಕ್ರಮ ಪ್ರಶ್ನಿಸಿದ ಎಡಿಜಿಪಿ

‘ಜಾಮೀನು ಅರ್ಜಿ ವಿಚಾರಣೆ ನಡೆಸಬೇಕಾದ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ನನ್ನ ಸೇವಾ ದಾಖಲೆಯನ್ನು ಸಲ್ಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಕಾರ್ಯದರ್ಶಿಗೆ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ನೀಡಿರುವ ನಿರ್ದೇಶನ ರದ್ದುಪಡಿಸಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದ್ದು, ಡಿಪಿಎಆರ್‌ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್‌.ಮಹೇಶ್‌ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

‘ಕಳೆದ ತಿಂಗಳ 29 ಮತ್ತು ಇದೇ 4ರಂದು ನನ್ನ ವಿರುದ್ಧ ತೆರೆದ ನ್ಯಾಯಾಲಯದಲ್ಲಿ ಸಂದೇಶ್‌ ಅವರು ಟೀಕೆ ಮಾಡಿದ್ದಾರೆ. ಹೀಗಾಗಿ ಅವರು,ನನ್ನ ವಿರುದ್ಧ ಮೌಖಿಕವಾಗಿ ಟೀಕೆ ಮಾಡದಂತೆ ನಿರ್ಬಂಧ ಹೇರಬೇಕು’ ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿಯಲ್ಲಿ ಏನಿದೆ?: ‘ಲಂಚ ಪ್ರಕರಣದಲ್ಲಿ ಆರೋಪಿಯೊಬ್ಬರು ಹೈಕೋರ್ಟ್‌ಗೆ ಜಾಮೀನು ಸಲ್ಲಿಸಿದ್ದಾರೆ. ಅದರಲ್ಲಿ ನಾನಾಗಲಿ ಅಥವಾ ಡಿಪಿಎಆರ್ ಕಾರ್ಯದರ್ಶಿಯಾಗಲಿ ಪ್ರತಿವಾದಿಯಾಗಿಲ್ಲ. ನ್ಯಾಯಮೂರ್ತಿಗಳು ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಂತೆ ಪರಿಗಣಿಸಿ ವಿಚಾರಣೆ ನಡೆಸುತ್ತಿದ್ದಾರೆ. ನನ್ನ ಮತ್ತು ನನ್ನ ನೇತೃತ್ವದ ಎಸಿಬಿಯ ಪ್ರಾ‌ಮಾಣಿಕತೆ, ಬದ್ಧತೆ ಬಗ್ಗೆ ಅನಗತ್ಯ ಟೀಕೆ ಮಾಡಿದ್ದಾರೆ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.