ADVERTISEMENT

ಶಿಡ್ಲಘಟ್ಟ ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ: ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 15:47 IST
Last Updated 20 ಜನವರಿ 2026, 15:47 IST

ಹೈಕೋರ್ಟ್‌ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)

ಹೈಕೋರ್ಟ್‌ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)

ADVERTISEMENT

ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತರಾದ ಅಮೃತಾ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಸ್ಥಳೀಯ ಕಾಂಗ್ರೆಸ್‌ ಮುಖಂಡ ಬಿ.ವಿ.ರಾಜೀವ್‌ ಗೌಡ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ‘ನಾಲಗೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಮಹಿಳೆ ಎಂದರೆ ಏನು ಗೌರವವೇ ಇಲ್ಲವೇ? ಎಂದು ಕಿಡಿ ಕಾರಿದೆ.

‘ನನ್ನ ವಿರುದ್ಧ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತೆ ಜಿ.ಅಮೃತಾ ಗೌಡ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಿ.ವಿ.ರಾಜೀವ್‌ ಗೌಡ (46) ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ರಾಜೀವ್‌ ಗೌಡ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ವಿವೇಕ್‌ ರೆಡ್ಡಿ ಅವರು, ‘ಶಿಡ್ಲಘಟ್ಟದ ಸ್ಥಾನೀಯ ವ್ಯಕ್ತಿಯೊಬ್ಬರು ʼಕಲ್ಟ್‌ʼ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಕಲಾವಿದನಿಗೆ ಬೆಂಬಲಿಸಿ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ ಮತ್ತು ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಪೌರಾಯುಕ್ತರು ಬ್ಯಾನರ್‌ ಹಾಕಲು ವಾಟ್ಸ್‌ ಆ್ಯಪ್‌ ಸಂದೇಶದ ಮೂಲಕ ಅನುಮತಿಯನ್ನೂ ನೀಡಿದ್ದರು’ ಎಂದು ವಿವರಿಸಿದರು.

‘ಬ್ಯಾನರ್ ಅಳವಡಿಕೆಗೆ ಕಾನೂನುಬದ್ಧವಾಗಿ ಕಟ್ಟಬೇಕಾದ ಶುಲ್ಕವನ್ನೂ ಪಾವತಿಸಲಾಗಿತ್ತು. ಆದರೆ, ಪೌರಾಯುಕ್ತರು ಏಕಾಏಕಿ ನಮ್ಮ ಅರ್ಜಿದಾರರ ಕಡೆಯವರು ಅಳವಡಿಸಿದ್ದ ಕಟೌಟ್‌ ಮತ್ತು ಬ್ಯಾನರ್‌ಗಳನ್ನು ತೆರವು ಮಾಡಿಸಿದ್ದರು. ಅಂತೆಯೇ, ಅದೇ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಜೆಡಿಎಸ್‌ ಪಕ್ಷದ ಬ್ಯಾನರ್‌ಗಳನ್ನು ಹಾಗೇ ಬಿಡಲಾಗಿತ್ತು. ಇದರಿಂದ ಬೇಸರಗೊಂಡ ರಾಜೀವ್‌ ಗೌಡ ಪೌರಾಯುಕ್ತರ ವಿರುದ್ಧ ಕೆಲವು ಪದಗಳನ್ನು ಬಳಸಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

‘ಈ ವಿಷಯದಲ್ಲಿ ಅರ್ಜಿದಾರರನ್ನು ಗುರಿ ಮಾಡಲಾಗಿದೆ. ಅವರು ಯಾವುದೇ ತೆರನಾದ ಕ್ರಿಮಿನಲ್‌ ಪದಗಳನ್ನು ಬಳಕೆ ಮಾಡಿಲ್ಲ. ರಾಜೀವ್‌ ಗೌಡ ಅಮೃತಾ ಅವರಿಗೆ ಈಗಾಗಲೇ ಕ್ಷಮೆ ಕೋರಿದ್ದಾರೆ. ನ್ಯಾಯಾಲಯ ರಕ್ಷಣೆ ಒದಗಿಸಿದರೆ ತಕ್ಷಣವೇ ಬಹಿರಂಗವಾಗಿ ಸಾರ್ವಜನಿಕ ಕ್ಷಮೆ ಕೋರಲು ಸಿದ್ಧರಿದ್ದಾರೆ’ ಎಂದು ಅರುಹಿದರು.

ಇದಕ್ಕೆ ವ್ಯಗ್ರರಾದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ಕಟೌಟ್‌ ಹಾಕಲು ನೀವೇನು ನಟರಾ? ನಿರ್ಮಾಪಕರಾ? ಅಧಿಕಾರಿ ಮಹಿಳೆ ಬಗ್ಗೆ ಒಂದಿನಿತೂ ಗೌರವವೇ ಇಲ್ಲದಂತೆ ಬಾಯಿಗೆ ಬಂದಂತೆ ಮಾತನಾಡಿದ್ದೀರಲ್ಲಾ’ ಎಂದು ಕೆಂಡ ಕಾರಿದರು. ‘ನಿಮ್ಮ ಅರ್ಜಿದಾರರ ಪಕ್ಷವೇ ಆಡಳಿತ ನಡೆಸುತ್ತಿದೆಯಲ್ಲಾ, ಆದರೂ, ರಾಜೀವ್‌ ಗೌಡ ಎಲ್ಲಿ ಅಡಗಿ ಕುಳಿತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ವಿವೇಕ್‌ ರೆಡ್ಡಿ, ‘ಈಗಾಗಲೇ ರಾಜೀವ್‌ ಗೌಡ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ. ಪೊಲೀಸರು ಬಂಧಿಸಲು ಕಾದು ಕುಳಿತಿದ್ದಾರೆ. ರಕ್ಷಣೆ ಒದಗಿಸಿದರೆ ತನಿಖೆಗೆ ಸಹಕರಿಸುತ್ತಾರೆ ಮತ್ತು ಸಾರ್ವಜನಿಕವಾಗಿ ಕ್ಷಮೆ ಕೋರಿ ತನಿಖೆಯಲ್ಲಿ ಭಾಗಿಯಾಗುತ್ತಾರೆ’ ಎಂದರು. ಅಂತಿಮವಾಗಿ ಆದೇಶ ಕಾಯ್ದಿರಿಸಿದ ನ್ಯಾಯಪೀಠ ಬುಧವಾರ (ಜ.21) ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.

ಏನಿದು ಪ್ರಕರಣ?

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಹೃದಯ ಭಾಗದಲ್ಲಿ ‘ಕಲ್ಟ್‌’ ಸಿನಿಮಾದ ಬ್ಯಾನರ್‌ ಮತ್ತು ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಇವುಗಳು ಸಾರ್ವಜನಿಕ ಸಂಚಾರಕ್ಕೆ ತೊಂದರೆ ನೀಡುತ್ತಿವೆ ಎಂಬ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರನ್ನು ಆಧರಿಸಿ ಪೌರಾಯುಕ್ತೆ ಅಮೃತಾ ಗೌಡ ಬ್ಯಾನರ್‌ ಮತ್ತು ಕಟೌಟ್‌ಗಳನ್ನು ತೆರವುಗೊಳಿಸಿದ್ದರು.

ಈ ಹಿನ್ನೆಲೆಯಲ್ಲಿ ಕೋಪೋದ್ರಿಕ್ತ ಬಿ.ವಿ.ರಾಜೀವ್‌ ಗೌಡ, ಅಮೃತಾ ಗೌಡ ಅವರಿಗೆ ಮೊಬೈಲ್‌ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಟ್ಟು ಹಾಕುವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಪೌರಾಯುಕ್ತೆ ಅಮೃತಾ ಅವರು ಇದೇ 14ರಂದು ಶಿಡ್ಲಘಟ್ಟ ಟೌನ್‌ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದಾರೆ.

ದೂರಿನ ಅನ್ವಯ ರಾಜೀವ್‌ ಗೌಡ ವಿರುದ್ಧ, ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್‌) ಕಲಂ 132, 224, 352, 351(3) ಮತ್ತು 56ರ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಈ ಕುರಿತಂತೆ ಶಿಡ್ಲಘಟ್ಟ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ (ಹಿರಿಯ ವಿಭಾಗ) ಮುಂದಿರುವ ನ್ಯಾಯಿಕ ಪ್ರಕ್ರಿಯೆ ಮತ್ತು ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಾಜೀವ್‌ ಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ನಾಲಗೆ ಸರಿಯಾಗಿರಬೇಕು. ಆಡಿದ ಮಾತುಗಳನ್ನು ಹಿಂಪಡೆಯಲಾಗದು. ಎಲ್ಲವನ್ನೂ ಯಾವಾಗಲೂ ನಾಲಗೆಯೇ ನಾಶ ಮಾಡಿದೆ. ನೀವು ಕ್ಷಮೆ ಕೋರಬಹುದು ಆದರೆ, ಬಿರುಕು ಹಾಗೆ ಉಳಿಯಲಿದೆ ಎಂಬುದನ್ನು ನೆನಪಿಡಿ.
–ನ್ಯಾ.ಎಂ.ನಾಗಪ್ರಸನ್ನ

ರಾಜೀವ್‌ಗೌಡ ಶೀಘ್ರ ಬಂಧನ’

ಕೆಜಿಎಫ್ (ಕೋಲಾರ): ‘ಶಿಡ್ಲಘಟ್ಟ ನಗರಸಭೆಯ ಆಯುಕ್ತೆ ಅಮೃತಾ ಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಅವರನ್ನು ಶೀಘ್ರ ಬಂಧಿಸಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜೀವ್ ಗೌಡ ಬಂಧನಕ್ಕೆ ಪ್ರತ್ಯೇಕ ತಂಡ ರಚನೆ ಆಗಿದೆ. ಎಲ್ಲೇ ಇದ್ದರೂ ಹುಡುಕಿ ಕರೆ ತರುತ್ತೇವೆ’ ಎಂದರು.

‘ಎಷ್ಟು ದಿನ ತಪ್ಪಿಸಿಕೊಂಡು ಓಡಾಡಲು ಸಾಧ್ಯ? ಹಿಡಿದು ತರುತ್ತೇವೆ. ಅವರಿಗೆ ಯಾವುದೇ ಸಚಿವರ ಬೆಂಬಲವಿರಲಿ, ಕಾನೂನು ಎಲ್ಲರಿಗೂ ಒಂದೇ ಅಲ್ಲವೇ’ ಎಂದು ಪ್ರಶ್ನಿಸಿದರು.

ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಪುತ್ರ ಝೈದ್ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಬ್ಯಾನರ್‌ ತೆರವುಗೊಳಿಸಿದ ಶಿಡ್ಲಘಟ್ಟ ನಗರಸಭೆ ಆಯಕ್ತೆಗೆ ರಾಜೀವ್‌ ಗೌಡ ದೂರವಾಣಿಯಲ್ಲಿ ಧಮ್ಕಿ ಹಾಕಿದ್ದರು. ಪ್ರಕರಣ ದಾಖಲಾದ ನಂತರ ರಾಜೀವ್‌ ಗೌಡ ತಲೆ ಮರೆಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.