ADVERTISEMENT

ಕ್ಷುಲ್ಲಕ ಪಿಐಎಲ್‌ಗಳಿಗೆ ಕಾದಿದೆ ದಂಡ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 19:31 IST
Last Updated 8 ಜುಲೈ 2022, 19:31 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ (ಪಿಐಎಲ್) ಕ್ಷುಲ್ಲಕ ಅಥವಾ ವೈಯುಕ್ತಿಕ ಹಿತಾಸಕ್ತಿಗಳೇನಾದರೂ ಅಡಗಿರುವುದು ಮೇಲ್ನೋಟಕ್ಕೆ ಋಜುವಾತು ಆದರೆ, ಅರ್ಜಿದಾರರಿಗೆ ಕನಿಷ್ಠ ₹ 50 ಸಾವಿರ ದಂಡ ವಿಧಿಸಲಾಗುವುದು‘ ಎಂದು ಹೈಕೋರ್ಟ್ ಮೌಖಿಕ ಎಚ್ಚರಿಕೆ ನೀಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಾಪಸ್ ಪಡೆಯಲು ಸಲ್ಲಿಸಲಾಗಿದ್ದ ಮೆಮೊಗಳನ್ನು (ಜ್ಞಾಪನಾ ಪತ್ರ) ಗಮನಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಜುಜುಬಿ ಅರ್ಜಿಗಳಿಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಇದೇ 11ರಿಂದ ಜಾರಿಗೆ ತರಲಾಗುವುದು‘ ಎಂದು ತಿಳಿಸಿದೆ.

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಮೇಡಮಾರನಹಳ್ಳಿ ಕೆರೆ ಜಾಗ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ನ್ಯಾಯದ ಹಿತದೃಷ್ಟಿಯಿಂದ ಅರ್ಜಿ ವಾಪಸ್ ಪಡೆದುಕೊಳ್ಳಲು ಅನುಮತಿ ನೀಡಬೇಕು’ ಎಂದು ಮೆಮೊ ಸಲ್ಲಿಸಿರುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ವಕೀಲರನ್ನು ತರಾಟೆಗೆ ತೆಗೆದುಕೊಂಡು, ಅರ್ಜಿದಾರರಿಗೆ ₹ 25 ಸಾವಿರ ದಂಡ ವಿಧಿಸಿತು. ‘ನ್ಯಾಯದ ಹಿತದೃಷ್ಟಿಯಿಂದಲೇ ದಂಡದ ಮೊತ್ತವನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಿ, ಒಂದಿಷ್ಟು ಜನರಿಗೆ ಅನುಕೂಲವಾಗುತ್ತದೆ’ ಎಂದು ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.