
ಬೆಂಗಳೂರು: ‘ವಿಚಾರಣೆ ವೇಳೆ ನಿಮ್ಮ ಮೇಲ್ಮನವಿ ಏನಾದರೂ ಕ್ಷುಲ್ಲಕ ಎಂದು ಕಂಡು ಬಂದಲ್ಲಿ ₹1 ಲಕ್ಷ ದಂಡ ವಿಧಿಸಲಾಗುವುದು’ ಎಂದು ಹೈಕೋರ್ಟ್ ಮೌಖಿಕವಾಗಿ ಎಚ್ಚರಿಸಿದ ಬೆನ್ನಲ್ಲೇ, ಮಹೇಶ ಜೋಶಿ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ತಮ್ಮ ಮೇಲ್ಮನವಿಯನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ಮಾಹಿತಿ ನಿರಾಕರಣೆ ಆರೋಪಕ್ಕೆ ಸಂಬಂಧಿಸಿದಂತೆ ₹25 ಸಾವಿರ ದಂಡ ಪಾವತಿಸುವ ಅನಿವಾರ್ಯ ಅವರಿಗೆ ಎದುರಾಗಿದೆ.
‘ಬೆಂಗಳೂರು ದೂರದರ್ಶನ’ಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿ ಕೋರಿ ಬಿ.ಅಶೋಕ್ ಮತ್ತು ಎನ್.ಕೆ.ಮೋಹನ್ ರಾಂ 2008-09ರ ಅವಧಿಯಲ್ಲಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಅಂದಿನ ದೂರದರ್ಶನ ಮಾಹಿತಿ ಅಧಿಕಾರಿ ಹಾಗೂ ಕೇಂದ್ರದ ನಿರ್ದೇಶಕರಾಗಿದ್ದ ಮಹೇಶ ಜೋಶಿ ಮಾಹಿತಿ ನೀಡಲು ನಿರಾಕರಿಸಿದ್ದರಲ್ಲದೆ, ಮಾಹಿತಿ ಒದಗಿಸಬೇಕಾದರೆ ₹50,160 ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು.
ಇದನ್ನು ಪ್ರಶ್ನಿಸಲಾಗಿದ್ದ ಅರ್ಜಿದಾರರ ಮನವಿಯನ್ನು ಕೇಂದ್ರ ಮಾಹಿತಿ ಹಕ್ಕು ಆಯೋಗ ಪುರಸ್ಕರಿಸಿತ್ತು. ‘ಮಾಹಿತಿ ನೀಡದ ಮಹೇಶ ಜೋಶಿ ಕ್ರಮ ಸರಿಯಲ್ಲ ಹಾಗೂ ಮಾಹಿತಿ ನಿರಾಕರಿಸುವ ಮೂಲಕ ಅವರು ದಂಡಕ್ಕೆ ಅರ್ಹರು’ ಎಂದು ತೀರ್ಮಾನಿಸಿ ₹25 ಸಾವಿರ ದಂಡ ವಿಧಿಸಿ, ಅದನ್ನು ಅವರ ಸಂಬಳದಿಂದಲೇ ವಸೂಲು ಮಾಡುವಂತೆ ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಜೋಶಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜೋಶಿ ಮನವಿಯನ್ನು ವಜಾಗೊಳಿಸಿತ್ತು. ‘ಜೋಶಿಯವರ ಧೋರಣೆ ಒಬ್ಬ ಸರ್ಕಾರಿ ಅಧಿಕಾರಿಯ ಗುಣವಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ನೀಡಿರುವ ಆದೇಶ ಸಮಂಜಸವಾಗಿಯೇ ಇದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಆಯೋಗ ವಿಧಿಸಿದ್ದ ₹25 ಸಾವಿರ ದಂಡದ ಆದೇಶವನ್ನು ಎತ್ತಿ ಹಿಡಿದಿತ್ತು.
ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಜೋಶಿ ವಿಭಾಗೀಯ ನ್ಯಾಯಪೀಠದಲ್ಲಿ ರಿಟ್ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ನ್ಯಾಯಪೀಠ ವಿಚಾರಣೆ ಸೋಮವಾರ (ಫೆ.16) ನಡೆಸಿತು.
ವಿಚಾರಣೆ ವೇಳೆ ನ್ಯಾಯಪೀಠ, ‘ನಿಮ್ಮ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಹಿಂಪಡೆಯಲು ಅವಕಾಶ ನೀಡುತ್ತಿದ್ದೇವೆ. ವಾದ ಮುಂದುವರೆಸಲು ಅವಕಾಶ ನೀಡುತ್ತೇವಾದರೂ, ಮೇಲ್ಮನವಿ ಕ್ಷುಲ್ಲಕ ಎಂದು ಕಂಡುಬಂದಲ್ಲಿ ₹1 ಲಕ್ಷ ದಂಡ ವಿಧಿಸಲಾಗುವುದು’ ಎಂಬ ಮೌಖಿಕ ಎಚ್ಚರಿಕೆ ನೀಡಿತು. ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹೇಶ ಜೋಶಿ ಮಂಗಳವಾರ ನ್ಯಾಯಪೀಠಕ್ಕೆ ಮೆಮೊ ಸಲ್ಲಿಸುವ ಮೂಲಕ ತಮ್ಮ ಮೇಲ್ಮನವಿ ಹಿಂಪಡೆದಿದ್ದಾರೆ.
ಮೇಲ್ಮನವಿಯಲ್ಲಿ ನವದೆಹಲಿಯ ಕೇಂದ್ರ ಮಾಹಿತಿ ಆಯೋಗದ ರಿಜಿಸ್ಟ್ರಾರ್, ಬಿ.ಅಶೋಕ್, ಎನ್.ಕೆ.ಮೋಹನ್ ರಾಂ ಮತ್ತು ಬೆಂಗಳೂರಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿತ್ತು. ಅಶೋಕ್ ಮತ್ತು ಮೋಹನ್ ರಾಂ ಪರ ಹೈಕೋರ್ಟ್ ವಕೀಲ ಮಂಜುನಾಥ್ ಖಾಂಡೇಕರ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.