ADVERTISEMENT

ಒಪಿಎಸ್‌ ಮರು ಜಾರಿ: 1 ತಿಂಗಳಲ್ಲಿ ವರದಿ

ಐಎಎಸ್‌ ಅಧಿಕಾರಿಗಳ ಸಮಿತಿ ಭರವಸೆ: ಷಡಾಕ್ಷರಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 15:56 IST
Last Updated 22 ಡಿಸೆಂಬರ್ 2025, 15:56 IST
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳ ಸಮಿತಿ ಅಧ್ಯಕ್ಷೆ ಉಮಾ ಮಹಾದೇವನ್ ಅವರನ್ನು ಭೇಟಿ ಮಾಡಿ ಪೂರಕ ಮಾಹಿತಿಯನ್ನು ಒಳಗೊಂಡ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳ ಸಮಿತಿ ಅಧ್ಯಕ್ಷೆ ಉಮಾ ಮಹಾದೇವನ್ ಅವರನ್ನು ಭೇಟಿ ಮಾಡಿ ಪೂರಕ ಮಾಹಿತಿಯನ್ನು ಒಳಗೊಂಡ ಮನವಿ ಸಲ್ಲಿಸಿದರು.   

ಬೆಂಗಳೂರು: ‘ಎನ್‌ಪಿಎಸ್‌ ಯೋಜನೆ ರದ್ದು ಮಾಡಿ ಹಳೆ ಪಿಂಚಣಿ ಯೋಜನೆಯನ್ನು(ಒಪಿಎಸ್‌) ಮರು ಜಾರಿಗೊಳಿಸುವ ಸಂಬಂಧ ಸಮಗ್ರ ಶಿಫಾರಸು ಒಳಗೊಂಡ ಪರಿಶೀಲನಾ ವರದಿಯನ್ನು ಒಂದು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಐಎಎಸ್‌ ಅಧಿಕಾರಿಗಳ ಸಮಿತಿ ಭರವಸೆ ನೀಡಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ತಿಳಿಸಿದ್ದಾರೆ.

‘ಸಮಿತಿಯ ಅಧ್ಯಕ್ಷೆ ಉಮಾ ಮಹಾದೇವನ್‌ ಮತ್ತು ಆರ್ಥಿಕ ಇಲಾಖೆ ಕಾರ್ಯದರ್ಶಿ ಎಂ.ಟಿ.ರೇಜು ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದರು.

ಸರ್ಕಾರ ಪ್ರತಿ ವರ್ಷ ಪಾವತಿ ಮಾಡುತ್ತಿರುವ ಎನ್‌ಪಿಎಸ್‌ ವಂತಿಕೆ ಮೊತ್ತ ₹3,000 ಕೋಟಿ. 2010 ರಿಂದ 2024 ರವರೆಗೆ ಸುಮಾರು ₹25,000 ಕೋಟಿ ಎನ್‌ಪಿಎಸ್ ವಂತಿಕೆ ಪಾವತಿ ಮಾಡಲಾಗಿದೆ. ರಾಜ್ಯದಲ್ಲಿರುವ ಭರ್ತಿ ಆಗದೇ ಇರುವ ಹುದ್ದೆಗಳ ಕಾರಣದಿಂದ ವರ್ಷಕ್ಕೆ ಅಂದಾಜು ₹1,914.68 ಕೋಟಿ ಎನ್‌ಪಿಎಸ್ ವಂತಿಕೆ ಉಳಿತಾಯವಾಗುತ್ತಿದೆ ಎಂದು ಷಡಾಕ್ಷರಿ ಅವರು ಸಮಿತಿಯ ಗಮನಕ್ಕೆ ತಂದರು.

ADVERTISEMENT

ಅಲ್ಲದೇ, ರಾಜ್ಯದಲ್ಲಿ ಈಗ ಖಾಲಿ ಇರುವ 2,76,386 ಹುದ್ದೆಗಳಿಂದ ಸರ್ಕಾರಕ್ಕೆ ಪ್ರತಿ ತಿಂಗಳ ವೇತನ ಮತ್ತು ಭತ್ಯೆಗಳಿಗೆ ಅಂದಾಜು ₹15,590 ಕೋಟಿ ಉಳಿತಾಯವಾಗಲಿದೆ. ವರ್ಷಕ್ಕೆ ಅಂದಾಜು ₹1,87,080 ಕೋಟಿ ಸರ್ಕಾರಕ್ಕೆ ಉಳಿತಾಯವಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈಗ ಕಾರ್ಯನಿರ್ವಹಿಸುತ್ತಿರುವ ಎನ್‌ಪಿಎಸ್‌ ನೌಕರರಲ್ಲಿ ಬಹುತೇಕರು 15 ರಿಂದ 20 ವರ್ಷಗಳಲ್ಲಿ ನಿವೃತ್ತಿ ಆಗಲಿದ್ದಾರೆ. ಹೀಗಾಗಿ ಹಳೆ ಪಿಂಚಣಿ ಯೋಜನೆಯನ್ನು ಜಾರಿ ತರುವುದರಿಂದ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಆದ್ದರಿಂದ ಒಳ್ಳೆಯ ವರದಿಯನ್ನೇ ನೀಡಬೇಕು. ಎನ್‌ಪಿಎಸ್‌ ರದ್ದು ಮಾಡುವುದರಿಂದ ಉಳಿಯುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

ಛತ್ತೀಸಗಡ, ಹಿಮಾಚಲ ಪ್ರದೇಶ, ಪಂಜಾಬ್‌, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಿವೆ. ರಾಜಸ್ಥಾನ ಮತ್ತು ಜಾರ್ಖಂಡ್‌ ರಾಜ್ಯಗಳು ಹಳೆ ಪಿಂಚಣಿ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿವೆ. ಕೇಂದ್ರ ಸರ್ಕಾರವು ಯುಪಿಎಸ್‌ ಅಥವಾ ಎನ್‌ಪಿಎಸ್‌ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ನೌಕರರಿಗೆ ಅವಕಾಶ ನೀಡಿದೆ. ರಾಜ್ಯದಲ್ಲೂ ಇದೇ ರೀತಿ ಅವಕಾಶ ನೀಡಬಹುದು ಎಂದು ಷಡಾಕ್ಷರಿ ಅವರು ಸಮಿತಿಗೆಯ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

ಕಾಂಗ್ರೆಸ್‌ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿ ತರುವ ಕುರಿತು ಭರವಸೆ ನೀಡಿದೆ. ಒಂದು ವೇಳೆ ಜಾರಿ ಮಾಡದೇ ಇದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ
ಸಿ.ಎಸ್. ಷಡಾಕ್ಷರಿ ಅಧ್ಯಕ್ಷ ಸರ್ಕಾರಿ ನೌಕರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.