ADVERTISEMENT

ಒಳ ಮೀಸಲು: ಮಾದಿಗರೇ ಮೇಲುಗೈ

ಹಸಿದವರಿಗೆ ಮೊದಲು ಉಣಲು ಕೊಡಬೇಕು. ಚೆನ್ನಾಗಿ ಉಂಡವರು ಸ್ವಲ್ಪ ತ್ಯಾಗ ಮಾಡಬೇಕು– ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ಆಯೋಗ

ರಾಜೇಶ್ ರೈ ಚಟ್ಲ
Published 8 ಆಗಸ್ಟ್ 2025, 0:15 IST
Last Updated 8 ಆಗಸ್ಟ್ 2025, 0:15 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡುವ ಉದ್ದೇಶದಿಂದ ರಾಜ್ಯದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಮಾದಿಗರು (ಎಡಗೈ) ಅತೀ ಹೆಚ್ಚು 27,73,780 ಜನಸಂಖ್ಯೆ ಹೊಂದಿರುವುದು ಗೊತ್ತಾಗಿದೆ. ಎರಡನೇ ಸ್ಥಾನದಲ್ಲಿ ಹೊಲೆಯ (ಬಲಗೈ) ಉಪ ಜಾತಿಯವರಿದ್ದಾರೆ (24,72,103).

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡಲು ರಾಜ್ಯ ಸರ್ಕಾರದ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ನೇತೃತ್ವದ ಏಕಸದಸ್ಯ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿಯಿದೆ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

‘101 ಜಾತಿಗಳ ಪೈಕಿ, ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಜಾತಿಗಳ ಸಂಖ್ಯೆ 90. ಅವುಗಳಲ್ಲಿ ಬಹುತೇಕ ಜಾತಿಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸ ಮಾಡುತ್ತಿಲ್ಲ. ಬೇರೆ, ಬೇರೆ ಪ್ರದೇಶಗಳಲ್ಲಿ ಹಂಚಿಹೋಗಿದ್ದಾರೆ. ಸಣ್ಣಪುಟ್ಟ ಜಾತಿಗಳು ಜನಸಂಖ್ಯೆ ಕಡಿಮೆ ಇರುವ ಕಾರಣ ರಾಜಕೀಯವಾಗಿ ಬಲ ಕಳೆದುಕೊಂಡಿದ್ದಾರೆ. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಈ ಜಾತಿಗಳ ಸಂಖ್ಯೆ ನಿರ್ಣಾಯಕ ಪಾತ್ರ ವಹಿಸಲು ಸಾಧ್ಯ ಆಗಿಲ್ಲ. ಮೀಸಲಾತಿ ಇದ್ದರೂ ಬಲಿಷ್ಠ ಜಾತಿಗಳ ಜೊತೆ ಸ್ಪರ್ಧೆ ಮಾಡಿ ಗೆಲ್ಲುವ ಸ್ಥಿತಿಯಲ್ಲಿಲ್ಲ. ಜೊತೆಗೆ, ಚುನಾವಣಾ ವ್ಯವಸ್ಥೆಯು ಜಾತಿ ಮತ್ತು ಹಣದ ಪ್ರಭಾವಕ್ಕೆ ಒಳಗಾಗಿರುವ ಕಾರಣ ಸಣ್ಣಪುಟ್ಟ ಜಾತಿಯ ಜನ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ ಆಗಿಲ್ಲ’ ಎಂದು ವರದಿ ಹೇಳಿದೆ.

ಆಯೋಗ ಹೇಳಿರುವುದೇನು?:

‘ಹಾಗೆಂದು, ಹೀಗೆ ಹಂಚಿಕೆ ಮಾಡಿರುವ ಒಳ ಮೀಸಲಾತಿಯು ಶಾಶ್ವತವೂ ಅಲ್ಲ ಅಥವಾ ಅಂತಿಮವೂ ಅಲ್ಲ. ಜನಸಂಖ್ಯೆ ಮತ್ತು ಜಾತಿಯ ಗಣತಿ ಅಥವಾ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶವು ನಿಂತ ನೀರಲ್ಲ. ಬದಲಾಗಿ ಅದು ಚಲನಾತ್ಮಕವಾದದ್ದು. ಜನನ, ಮರಣ, ವಲಸೆ, ಆಹಾರ, ಆರೋಗ್ಯ ಇತ್ಯಾದಿಗಳು ಬದಲಾದಂತೆ ಕಾಲಕಾಲಕ್ಕೆ ದತ್ತಾಂಶವೂ ಬದಲಾಗುತ್ತಾ ಹೋಗುತ್ತದೆ. ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಒಳ ಮೀಸಲಾತಿಯನ್ನು ಪರಿಷ್ಕರಿಸಬೇಕಾಗುತ್ತದೆ. 

ಕರ್ನಾಟಕ ಸರ್ಕಾರದ ಜಾತಿವಾರು ಸಮೀಕ್ಷೆ ಹಾಗೂ ಕೇಂದ್ರ ಸರ್ಕಾರವು ರಾಷ್ಟ್ರೀಯ ಜನಗಣತಿಯ ಜತೆಗೆ ಜಾತಿ ಗಣತಿ ನಡೆಸಲು ಪ್ರಕ್ರಿಯೆ ಆರಂಭಿಸಿದೆ. ಇವುಗಳಿಂದ ಲಭ್ಯವಾಗುವ ದತ್ತಾಂಶದಲ್ಲಿ ಏರುಪೇರುಗಳು ಕಂಡುಬಂದರೆ ಒಳ ಮೀಸಲಾತಿಯನ್ನು ಪರಿಷ್ಕರಿಸಬಹುದು.

‘ಮೀಸಲಾತಿ ಸೌಲಭ್ಯ ಪಡೆದುಕೊಂಡಿರುವ ಕೆಲವು ಜಾತಿಗಳಲ್ಲಿ ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಚಲನಶೀಲತೆಯನ್ನು ಕಾಣಬಹುದು. ಈ ಸಮುದಾಯದವರು ಸ್ವಲ್ಪಮಟ್ಟಿಗೆ ಸಬಲೀಕರಣಗೊಂಡಿದ್ದಾರೆ. ಮೀಸಲಾತಿ ಸವಲತ್ತು ತಲುಪಿಯೇ ಇಲ್ಲದ ಕೆಲವು ಜಾತಿಗಳವರ ಜೀವನ ಹೀನಾಯವಾಗಿದೆ. ಇವರ ಮತ್ತು ಇವರ ಮಕ್ಕಳ ಶೈಕ್ಷಣಿಕ ಮಟ್ಟ ಬಹಳ ಕಡಿಮೆ ಇದೆ. ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗವೂ ಇಲ್ಲ. ಇಂತಹ ಜಾತಿಗಳ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಕೂಡಾ ಪರಿಗಣನೆಗೆ ತೆಗೆದುಕೊಂಡು ಮೀಸಲಾತಿ ಪ್ರಮಾಣವನ್ನು ಹಂಚಲಾಗಿದೆ’ ಎಂದು ಆಯೋಗ ಹೇಳಿದೆ.

ಹಸಿದವರಿಗೆ ಮೊದಲು ಉಣಲು ಕೊಡಬೇಕು. ಚೆನ್ನಾಗಿ ಉಂಡವರು ಸ್ವಲ್ಪ ತ್ಯಾಗ ಮಾಡಬೇಕು. ಈ ನೀತಿಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಆದ್ಯತೆಯ ಮೇಲೆ ಹಂಚಿಕೆ ಮಾಡಲಾಗಿದೆ
ಎಚ್‌.ಎನ್‌. ನಾಗಮೋಹನ್‌ದಾಸ್, ನ್ಯಾಯಮೂರ್ತಿ (ವರದಿಯಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.