ADVERTISEMENT

‘ಕೆಎಸ್‌ಆರ್‌ಟಿಸಿ ಆರೋಗ್ಯ’ | ಚಿಕಿತ್ಸೆ ನೀಡದಿದ್ದರೆ ಪಟ್ಟಿಯಿಂದ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
<div class="paragraphs"><p>ಕೆಎಸ್‌ಆರ್‌ಟಿಸಿ</p></div>

ಕೆಎಸ್‌ಆರ್‌ಟಿಸಿ

   
‘ಕೆಎಸ್‌ಆರ್‌ಟಿಸಿ ಆರೋಗ್ಯ’ l ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗುತ್ತಿಲ್ಲವೆಂದು ಹರಿದಾಡಿದ ಆಡಿಯೊ

ಬೆಂಗಳೂರು: ‘ಕೆಎಸ್‌ಆರ್‌ಟಿಸಿ ಆರೋಗ್ಯ’ ಯೋಜನೆಯಡಿ ಒಡಂಬಡಿಕೆ ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ
ಒಪ್ಪಂದದಂತೆ ಚಿಕಿತ್ಸೆ ನೀಡದೇ ಇದ್ದರೆ ಅವರನ್ನು ಪಟ್ಟಿಯಿಂದ ಕೈ ಬಿಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ನಗದುರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ‘ಕೆಎಸ್‌ಆರ್‌ಟಿಸಿ ಆರೋಗ್ಯ’ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಚಿಕಿತ್ಸೆ ಉಚಿತವಾಗಿ ಸಿಗುತ್ತಿಲ್ಲ. ಶೇ 20ರಷ್ಟು ರಿಯಾಯಿತಿ ಮಾತ್ರ ಸಿಗುತ್ತಿದೆ ಎಂಬ ಆಡಿಯೊ ಹರಿದಾಡಿದ್ದು, ಈ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಜನವರಿ 6ರಂದು ಈ ಯೋಜನೆ ಜಾರಿಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಕೆಎಸ್‌ಆರ್‌ಟಿಸಿ ನೌಕರರು ಇಲ್ಲವೇ ಅವರ ಅವಲಂಬಿತರು 1200ಕ್ಕೂ ಹೆಚ್ಚು ಜನರು ಚಿಕಿತ್ಸೆ ‍ಪಡೆದಿದ್ದಾರೆ. ಯೋಜನೆಯ ಆರಂಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾಗುವುದು ಸಹಜ’ ಎಂದು ಸ್ಪಷ್ಟಪಡಿಸಿದ್ದಾರೆ.

ಆಡಿಯೊದಲ್ಲೇನಿದೆ?:

‘ಕೆಎಸ್‌ಆರ್‌ಟಿಸಿ ಆರೋಗ್ಯ’ ಯೋಜನೆಯ ಒಡಂಬಡಿಕೆಯಲ್ಲಿರುವ ಮಂಡ್ಯದ ಆಸ್ಪತ್ರೆಯಲ್ಲಿ ಕೆಎಸ್‌ಆರ್‌ಟಿಸಿಯ ನೌಕರರೊಬ್ಬರು ಹೆರಿಗೆಗಾಗಿ ಅವರ ಪತ್ನಿಯನ್ನು ದಾಖಲಿಸಲು ಕರೆದೊಯ್ದಾಗ ಉಚಿತ ಇಲ್ಲ ಎಂದು ಗೊತ್ತಾಗಿ ಆಸ್ಪತ್ರೆಯ ಮೇಲಧಿಕಾರಿಯೊಂದಿಗಿನ ಫೋನ್‌ ಕರೆಯ ಸಂಭಾಷಣೆ ಆಡಿಯೊದಲ್ಲಿದೆ. ‘ಸಹಜ ಹೆರಿಗೆಗೆ ₹8,000, ಸಿಸೇರಿಯನ್‌ಗೆ ₹12,000 ಮಾತ್ರ ಕೆಎಸ್‌ಆರ್‌ಟಿಸಿಯಿಂದ ವಿಮಾ ಮೊತ್ತ ಸಿಗುತ್ತದೆ. ಇದು ಒಟ್ಟು ವೆಚ್ಚದ ಶೇ 20ರಷ್ಟು. ಉಳಿದ ಮೊತ್ತವನ್ನು ನೌಕರರು ಭರಿಸಬೇಕು’ ಎಂಬುದು ಆಡಿಯೊದಲ್ಲಿದೆ.

ಯೋಜನೆ ಪರ ವಿಡಿಯೊ: ‘ಕೆಎಸ್‌ಆರ್‌ಟಿಸಿ ಆರೋಗ್ಯ’ ಯೋಜನೆಯಿಂದ ಅನುಕೂಲವಾಗಿದೆ ಎಂದು ಹಲವರು ವಿಡಿಯೊ ಮಾಡಿದ್ದಾರೆ. ಶಿವಮೊಗ್ಗ ಡಿಪೊದಲ್ಲಿ ಚಾಲಕರಾಗಿರುವ ಶಿವಕುಮಾರ್‌ ಅವರು ತನ್ನ ಪತ್ನಿಯನ್ನು ಹೆರಿಗೆಗಾಗಿ ಭದ್ರಾವತಿಯ ಆಸ್ಪತ್ರೆಗೆ ದಾಖಲಿಸಿದ್ದರು. ‘ಯಾವುದೇ ಶುಲ್ಕ ಕಟ್ಟಿಸಿಕೊಳ್ಳದೇ ಸಿಸೇರಿಯನ್‌ ಮಾಡಿದ್ದಾರೆ. ಮೊದಲ ಹೆರಿಗೆಗೆ ಇದೇ ಆಸ್ಪತ್ರೆಯಲ್ಲಿ ₹45 ಸಾವಿರ ವೆಚ್ಚವಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.

ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ ನೌಕರರಾಗಿರುವ ಪ್ರಭಾವತಿ ಅವರು ಅಪಘಾತದಲ್ಲಿ ಗಾಯಗೊಂಡಾಗ ಮಲ್ಲೇಶ್ವರದಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಉಚಿತವಾಗಿ ಚಿಕಿತ್ಸೆ ದೊರೆತಿರುವುದನ್ನು ಅವರ ಮಗಳು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಅನಗತ್ಯ ವಿಡಿಯೊ: ರಾಮಲಿಂಗಾರೆಡ್ಡಿ

‘ಕೆಎಸ್‌ಆರ್‌ಟಿಸಿ ಆರೋಗ್ಯ’ದಡಿ 250 ಆಸ್ಪತ್ರೆಗಳೊಂದಿಗೆ ಮೊದಲ ಹಂತದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆನಂತರ 64 ಆಸ್ಪತ್ರೆಗಳು ಸೇರ್ಪಡೆಗೊಂಡಿವೆ. ಅದರಲ್ಲಿ ಮಂಡ್ಯದಲ್ಲಿಯೇ ನಾಲ್ಕು ಆಸ್ಪತ್ರೆಗಳಿವೆ. ಯಾವುದೋ ಒಂದು ಆಸ್ಪತ್ರೆಯಲ್ಲಿ ನಮ್ಮ ಜೊತೆಗೆ ಒಡಂಬಡಿಕೆ ಮಾಡಿಕೊಂಡಂತೆ ನಡೆದುಕೊಂಡಿಲ್ಲ ಎಂದಾದರೆ ಅಧಿಕಾರಿಗಳ ಗಮನಕ್ಕೆ ತರಬೇಕು ಪಕ್ಕದ ಆಸ್ಪತ್ರೆಗೆ ಹೋಗಬೇಕು. ಈ ಆಡಿಯೊ ಕೆಎಸ್‌ಆರ್‌ಟಿಸಿಗೆ ಕೆಟ್ಟ ಹೆಸರು ತರುವುದಕ್ಕಾಗಿಯೇ ವಿಡಿಯೊ ಮಾಡಿದಂತಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.