ADVERTISEMENT

ಲಲಿತಕಲಾ ಅಕಾಡೆಮಿ: ಮೂವರಿಗೆ ಗೌರವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 11:48 IST
Last Updated 6 ಏಪ್ರಿಲ್ 2021, 11:48 IST
ಬಿ. ಮಾರುತಿ, ಗಣೇಶ ಸೋಮಯಾಜಿ ಹಾಗೂ ಮೀರಾ ಕುಮಾರ್‌
ಬಿ. ಮಾರುತಿ, ಗಣೇಶ ಸೋಮಯಾಜಿ ಹಾಗೂ ಮೀರಾ ಕುಮಾರ್‌   

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ಮೂವರು ಶ್ರೇಷ್ಠ ಕಲಾವಿದರನ್ನು 2020ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

‘ಚಿತ್ರಕಲಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ ಬೆಂಗಳೂರಿನ ಮೀರಾ ಕುಮಾರ್‌, ಮಂಗಳೂರಿನ ಗಣೇಶ ಸೋಮಯಾಜಿ ಹಾಗೂ ಧಾರವಾಡದ ಬಿ. ಮಾರುತಿ ಅವರಿಗೆ2020ನೇ ಸಾಲಿನ ಗೌರವ ಪ್ರಶಸ್ತಿ ಸಂದಿದೆ. ಇವರಿಗೆ ತಲಾ ₹50 ಸಾವಿರ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ. ಸಾಂಪ್ರದಾಯಿಕ ಶೈಲಿಯಲ್ಲಿ ಸಾಧನೆ ಮಾಡಿರುವ ಮಹಿಳೆಯೊಬ್ಬರನ್ನು ಈ ಬಾರಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ’ ಎಂದು ಅಕಾಡೆಮಿಯ ಅಧ್ಯಕ್ಷ ಡಿ.ಮಹೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭರತ್ ಕಂದಕೂರ, ಅಂಗವಿಕಲ ಕಿರಣ್ ಶೇರ್‌ ಖಾನೆ ಸೇರಿದಂತೆ 10 ಮಂದಿ ಕಲಾವಿದರನ್ನು 49ನೇ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಒಟ್ಟು 89 ಕಲಾಕೃತಿಗಳ ಪೈಕಿ ಉತ್ತಮವಾದ 10 ಕಲಾಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಲ್ಲರಿಗೂ ತಲಾ ₹25 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಲಾಗುತ್ತದೆ’ ಎಂದು ಹೇಳಲಾಗಿದೆ.

ADVERTISEMENT

ಕಲಾ ಪ್ರದರ್ಶನ ಬಹುಮಾನಕ್ಕೆ ಆಯ್ಕೆಯಾದವರು: ಭರತ್ ಕಂದಕೂರ (ಕೊಪ್ಪಳ), ಚಂದ್ರಶೇಖರ್ ಜಿ. ಪಾಟೀಲ್ (ಕಲಬುರ್ಗಿ), ವೈ. ಮೈನು (ಬೆಂಗಳೂರು), ವಿ.ಎಂ. ಉಮೇಶ್ (ದಕ್ಷಿಣ ಕನ್ನಡ), ಬಿ. ಮಂಜುನಾಥ (ಶಿವಮೊಗ್ಗ), ಅಲ್ಕಾ ಚಂದ್ವಾನಿ (ಬೆಂಗಳೂರು), ಕಿರಣ್ ಶೇರ್‌ ಖಾನೆ (ಹುಬ್ಬಳ್ಳಿ), ರೇಣುಕಾ ಕೆಸರಮಡು (ತುಮಕೂರು), ಸಂತೋಷ್ ರಾಥೋಡ್ (ಕಲಬುರ್ಗಿ) ಹಾಗೂ ದಸ್ತಗಿರಿ ಮಸ್ತಾನಸಾಬ್ (ಕಲಬುರ್ಗಿ).

ಖುಷಿ ತಂದಿದೆ: ಕಿರಣ್

ಕರ್ನಾಟಕ ಲಲಿತಾ ಅಕಾಡೆಮಿಯ 49ನೇ ವಾರ್ಷಿಕ ಕಲಾಬಹುಮಾನ ಹುಬ್ಬಳ್ಳಿಯ ಚಿತ್ರಕಲಾವಿದ ಕಿರಣ್‌ ಶೇರಖಾನೆ ಅವರಿಗೆ ಸಂದಿದೆ. ₹25 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಎಂಟು ವರ್ಷಗಳಿಂದ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದೇನೆ. ದೆಹಲಿ, ಪುಣೆ, ಧಾರವಾಡ, ಹುಬ್ಬಳ್ಳಿ ಮುಂತಾದೆಡೆ ಏಕವ್ಯಕ್ತಿ ಕಲಾ ಪ್ರದರ್ಶನ ಮಾಡಿದ್ದೇನೆ. ಪರಿಶ್ರಮಕ್ಕೆ ಫಲ ದೊರೆತಿದೆ ಎಂದು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.