ವಿಧಾನಸಭೆ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ವಿಧಾನಸಭೆಯಲ್ಲಿ ಸೋಮವಾರ ಆರ್‌ಎಸ್‌ಎಸ್ ವಿಷಯದಲ್ಲಿ ನಡೆಯುತ್ತಿದ್ದ ಗದ್ದಲವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಂಗತಿ ಬಿಜೆಪಿ–ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಕಾಂಗ್ರೆಸ್‌ನ ನರೇಂದ್ರಸ್ವಾಮಿ ಅವರು, ‘ಬಿಜೆಪಿ ಸದಸ್ಯರೊಬ್ಬರು ಗದ್ದಲವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದಾರೆ‘ ಎಂದು ಆರೋಪಿಸಿ, ‘ಮೊಬೈಲ್ ವಶಕ್ಕೆ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಸಭಾಧ್ಯಕ್ಷ ಪೀಠದಲ್ಲಿದ್ದ ಕೆ.ಎಂ.ಶಿವಲಿಂಗೇಗೌಡ ಅವರು, ‘ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದರೆ. ಅದು ತಪ್ಪು, ಅದನ್ನು ಪರಿಶೀಲಿಸಬೇಕಾಗುತ್ತದೆ’ ಎಂದರು. ಇದಕ್ಕೆ ಧ್ವನಿಗೂಡಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಇದು ಅತ್ಯಂತ ಗಂಭೀರ ವಿಚಾರ. ಚಿತ್ರೀಕರಣ ಮಾಡಿದ್ದರು ಯಾರು ಎಂಬುದನ್ನು ಹೆಸರಿಸಬೇಕು ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು. ‘ನಮ್ಮ ಕಡೆಯಲ್ಲಿ ಯಾರೂ ವಿಡಿಯೊ ಚಿತ್ರೀಕರಣ ಮಾಡಿಲ್ಲ’ ಎಂದು ಆರ್.ಅಶೋಕ ಸಮಜಾಯಿಷಿ ನೀಡಿದರು.
ಆಗ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ‘ಸದನ ಒಳಗೆ ಕೆಲವರು ರಾಷ್ಟ್ರಧ್ವಜವನ್ನು ಬೇಕಾಬಿಟ್ಟಿ ಪ್ರದರ್ಶಿಸಿ ಅಗೌರವ ತೋರಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು. ನಿಮ್ಮ ಕಣ್ಣ ಮುಂದೆಯೇ ಅಗೌರವ ತೋರಿಸಿರುವುದನ್ನು ನೋಡಿಕೊಂಡು ಸುಮ್ಮನೆ ಏಕೆ ಕುಳಿತಿದ್ದೀರಿ’ ಎಂದು ಶಿವಲಿಂಗೇಗೌಡ ಅವರನ್ನು ಪ್ರಶ್ನಿಸಿದರು.
‘ರಾಷ್ಟ್ರಧ್ವಜ ಸದನದ ಒಳಗೆ ತರುವುದು ಸರಿಯೋ ತಪ್ಪೋ ಎಂಬುದನ್ನು ಇನ್ನರ್ಧ ಗಂಟೆಯೊಳಗೆ ಪರಾಮರ್ಶೆ ನಡೆಸಿ ರೂಲಿಂಗ್ ನೀಡುತ್ತೇನೆ’ ಎಂದು ಶಿವಲಿಂಗೇಗೌಡ ಹೇಳಿದ್ದನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.