ADVERTISEMENT

ಬಿಜೆಪಿಯ ಸುಳ್ಳಿನಿಂದ ವಕ್ಫ್‌ ಗೊಂದಲ; ವಿಧಾನಸಭೆಯಲ್ಲಿ ಸರ್ಕಾರದ ಉತ್ತರ

ಸಭಾತ್ಯಾಗ ಮಾಡಿ ಪ್ರತಿಭಟಿಸಿದ ಬಿಜೆಪಿ ಸದಸ್ಯರು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 22:57 IST
Last Updated 18 ಡಿಸೆಂಬರ್ 2024, 22:57 IST
<div class="paragraphs"><p>ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನ ಸಭೆಯಲ್ಲಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಮಾತನಾಡಿದರು</p></div>

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನ ಸಭೆಯಲ್ಲಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಮಾತನಾಡಿದರು

   

ಸುವರ್ಣ ವಿಧಾನಸೌಧ (ಬೆಳಗಾವಿ): ‘ರೈತರು, ಮಠ–ಮಂದಿರ, ಶಾಲೆಗಳ ಆಸ್ತಿಯನ್ನು ವಕ್ಫ್‌ ಮಂಡಳಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಯಾವ ಪ್ರಯತ್ನವೂ ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿಲ್ಲ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಸೃಷ್ಟಿಸಿದ ಸುಳ್ಳಿನಿಂದ ವಕ್ಫ್‌ ಆಸ್ತಿಯ ಗೊಂದಲ ಸೃಷ್ಟಿಯಾಗಿ, ಅನುಮಾನಕ್ಕೆ ಕಾರಣವಾಯಿತು’ ಎಂದು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ವಿರೋಧ ಪಕ್ಷ ಬಿಜೆಪಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿತು.

ವಕ್ಫ್‌ ಆಸ್ತಿಗೆ ಸಂಬಂಧಿಸಿದ ಗೊಂದಲ ಕುರಿತು ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಸರ್ಕಾರ ಉತ್ತರ ನೀಡಿತು. ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರೇ ಉತ್ತರ ನೀಡಬೇಕೆಂದು ಆಗ್ರಹಿಸಿದ ಬಿಜೆಪಿ, ಭಾರಿ ಗದ್ದಲ ನಡೆಸಿತು. ಸರ್ಕಾರ ಅದಕ್ಕೆ ಮಣಿಯದೇ ಇದ್ದಾಗ, ಉತ್ತರ ಸರಿಯಿಲ್ಲ ಎಂದು ದೂಷಿಸಿದ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರು. 

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್‌ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮೂವರು ಸರ್ಕಾರದ ಪರವಾಗಿ ಉತ್ತರ ನೀಡಿದರು. ಬಿಜೆಪಿ ಸದಸ್ಯರು ಆರೋಪ ಮಾಡುವಾಗ ಪ್ರಸ್ತಾಪಿಸಿದ್ದ ಪ್ರತಿ ಪ್ರಕರಣಕ್ಕೂ ಸಂಬಂಧಿಸಿದ ದಾಖಲೆಗಳನ್ನು ಸದನದಲ್ಲಿ ಮಂಡಿಸಿ, ತಿರುಗೇಟು ನೀಡಿದರು.

‘ವಕ್ಫ್‌ ಮಂಡಳಿಗೆ ಸೇರಿದ ಆಸ್ತಿಗಳ ರಕ್ಷಣೆ ಹಾಗೂ ಗೊಂದಲ ನಿವಾರಣೆಗೆ ನಾನು ವಕ್ಫ್‌ ಅದಾಲತ್‌ ನಡೆಸಿದ್ದೆ. ಅದನ್ನೇ ಬಿಜೆಪಿಯವರು ತಪ್ಪಾಗಿ ಬಿಂಬಿಸಿದರು. ಕೇಂದ್ರ ಸರ್ಕಾರ ರೂಪಿಸಿರುವ ಕಾಯ್ದೆಯಂತೆ ವಕ್ಫ್‌ ಆಸ್ತಿಗಳ ರಕ್ಷಣೆಯ ಕೆಲಸ ನಡೆದಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳ ಅವಧಿಯಲ್ಲೂ ವಕ್ಫ್‌ ಆಸ್ತಿಗಳ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗಲೇ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗಲೇ 2010, 2020 ಮತ್ತು 2021ರಲ್ಲಿ ನಾಲ್ಕು ಆದೇಶಗಳನ್ನೂ ಹೊರಡಿಸಲಾಗಿದೆ’ ಎಂದು ಜಮೀರ್ ಅಹಮ್ಮದ್ ದಾಖಲೆಗಳನ್ನು ಪ್ರದರ್ಶಿಸಿದರು.

ಜಮೀರ್‌ ಅಹಮ್ಮದ್ ಅವರ ಬಳಿಕ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಿದರು. ಅದಾದ ಬಳಿಕ ಕೃಷ್ಣ ಬೈರೇಗೌಡ ಉತ್ತರ ಮುಂದುವರಿಸಲು ಎದ್ದು ನಿಂತರು. ಕಂದಾಯ ಸಚಿವರು ಉತ್ತರ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಗದ್ದಲ ನಡೆಸಿದರು. ‘ಕಂದಾಯ ಸಚಿವರಿಗೆ ಉತ್ತರ ನೀಡುವ ಅಧಿಕಾರವಿದೆ’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್‌ ತಿಳಿಸಿದರು.

ಬಳಿಕ, ವಕ್ಫ್‌ ಆಸ್ತಿಗಳ ಪಟ್ಟಿಯನ್ನು ಪ್ರಕಟಿಸಿದ್ದ 1974ರ ಗೆಜೆಟ್ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಬಿಜೆಪಿ ಸದಸ್ಯರು ಪಟ್ಟುಹಿಡಿದರು. ‘ಗೆಜೆಟ್‌ ಅಧಿಸೂಚನೆ ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು. ಸರ್ಕಾರದ ನಿಲುವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್‌ ಸದಸ್ಯರು ಸದನದಲ್ಲೇ ಉಳಿದರು. ನಂತರ ಉತ್ತರ ಮುಂದುವರಿಸಿದ ಕೃಷ್ಣ ಬೈರೇಗೌಡ, ಬಿಜೆಪಿ ಪ್ರಸ್ತಾಪಿಸಿದ್ದ ಪ್ರಕರಣವಾರು ಮಾಹಿತಿ ನೀಡಿದರು.

ಸರ್ಕಾರ ನೀಡಿದ ಪ್ರಕರಣವಾರು ಉತ್ತರ

  • ಆಳಂದ ತಾಲ್ಲೂಕಿನ ಬೀರದೇವರ ಗುಡಿ ಜಮೀನಿನ ಖಾತೆಯನ್ನು 2020ರಲ್ಲಿ ಬಿಜೆಪಿ ಸರ್ಕಾರ ವಕ್ಫ್‌ ಹೆಸರಿಗೆ ವರ್ಗಾಯಿಸಿತ್ತು. 2024ರ ಸೆಪ್ಟೆಂಬರ್‌ 9ರಂದು ಬೀರದೇವರಗುಡಿ ಹೆಸರಿಗೆ ಸ್ಥಿರೀಕರಿಸಲಾಗಿದೆ

  • ಶಿರಸಿ ಇಳಸೂರಿನಲ್ಲಿ 50 ಎಕರೆ ವಕ್ಫ್‌ ಆಸ್ತಿ ಇದೆ ಎಂಬುದು ಸುಳ್ಳು. ಅಲ್ಲಿರುವುದು 7 ಎಕರೆ 22 ಗುಂಟೆ ಮಾತ್ರ

  • ಮುದ್ದೇನಹಳ್ಳಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಓದಿದ ಸರ್ಕಾರಿ ಶಾಲೆಯ ಜಮೀನು ದರ್ಗಾ ಹೆಸರಿನಲ್ಲಿತ್ತು. 1.04 ಗುಂಟೆ ದರ್ಗಾಕ್ಕೆ ನೀಡಿ, 17.12 ಗುಂಟೆ ಶಾಲೆಗೆ ನೀಡಲಾಗಿದೆ

  • ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮುನೇಶ್ವರನಗರದಲ್ಲಿ ವಕ್ಫ್‌ ಮಂಡಳಿಗೆ 13 ಎಕರೆ 04 ಗುಂಟೆ ಜಮೀನಿದೆ. 1 ಎಕರೆ 32 ಗುಂಟೆ ಜಮೀನಿನಲ್ಲಿ ಅನಧಿಕೃತವಾಗಿ 100 ಮನೆಗಳನ್ನು ನಿರ್ಮಿಸಲಾಗಿದೆ. ವಕ್ಫ್‌ ಮಂಡಳಿ ಯಾವುದೇ ಹಕ್ಕು ಕೋರಿಲ್ಲ. ಆದರೆ, ಸ್ಥಳೀಯ ಹಿಂದೂ ಧರ್ಮದ ವ್ಯಕ್ತಿಯೊಬ್ಬರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ನೋಟಿಸ್ ನೀಡಲಾಗಿದೆ

  • ಶ್ರೀರಂಗಪಟ್ಟಣದಲ್ಲಿ ಕಣ್ತಪ್ಪಿನಿಂದ ಚಿಕ್ಕಮ್ಮನಗುಡಿ ಜಮೀನಿನಲ್ಲಿ ವಕ್ಫ್‌ ಹೆಸರು ಬಂದಿತ್ತು, ಸರಿಪಡಿಸಲಾಗಿದೆ

  • ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಗ್ರಾಮದ ಸರ್ವೆ ನಂಬರ್‌ 220ರಲ್ಲಿ ವಕ್ಫ್‌ ಮಂಡಳಿಗೆ 2 ಎಕರೆ ಜಮೀನಿದೆ. ಅದಕ್ಕೂ ಸೋಮೇಶ್ವರ ದೇವಸ್ಥಾನಕ್ಕೂ ಸಂಬಂಧವಿಲ್ಲ

  • ವಿಜಯಪುರ ಜಿಲ್ಲಾಧಿಕಾರಿ, ಎಸ್‌ಪಿ ಬಂಗಲೆಗಳು, ಆಸ್ಪತ್ರೆಗಳು ವಕ್ಫ್‌ ಮಂಡಳಿಗೆ ಸೇರಿವೆ ಎಂಬುದು ಸುಳ್ಳು

‘ಗೊಂದಲದಿಂದ ಸಮಾಜ ಒಡೆದಿದೆ’

‘ವಿರೋಧ ಪಕ್ಷದವರು ರಾಜಕೀಯ ಲಾಭಕ್ಕಾಗಿ ಸೃಷ್ಟಿಸಿದ ವಕ್ಫ್‌ ಆಸ್ತಿ ಗೊಂದಲದಿಂದ ಸಮಾಜ ಒಡೆದುಹೋಗಿದೆ. ರಾಜ್ಯದಲ್ಲಿ ಇರುವುದು 3 ಕೋಟಿ ಎಕರೆ ಕೃಷಿ ಜಮೀನು. ವಕ್ಫ್‌ ಮಂಡಳಿ ಬಳಿ ಇರುವುದು 20 ಸಾವಿರ ಎಕರೆ ಮಾತ್ರ. ಶೇ 0.006ರಷ್ಟು ಜಮೀನನ್ನು ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸಿ ರಾಜ್ಯದ ಜನರ ನೆಮ್ಮದಿ ಕೆಡಿಸುತ್ತಿದ್ದಾರೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.

‘ವಕ್ಫ್‌ ಮಂಡಳಿಗೆ 1.12 ಲಕ್ಷ ಎಕರೆ ಜಮೀನು ಇತ್ತು. ಅದರಲ್ಲಿ 92,000 ಎಕರೆ ಮಂಡಳಿ ಸ್ವಾಧೀನಕ್ಕೆ ಬಂದೇ ಇಲ್ಲ. ಇಷ್ಟು ಗದ್ದಲ ನಡೆಸಿದ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗಲೇ ವಕ್ಫ್‌ ಮಂಡಳಿ ಹೆಸರಿಗೆ 4,500 ಆಸ್ತಿಗಳ ಖಾತೆ ಮಾಡಲಾಗಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆಗಿರುವುದು 600 ಆಸ್ತಿಗಳ ಖಾತೆ ಮಾತ್ರ’ ಎಂದರು.

‘ಮುಸ್ಲಿಮರು ಹಿಂದೂಗಳ ಆಸ್ತಿ ಕಬಳಿಸುತ್ತಿದ್ದಾರೆ ಎಂಬ ಭೀತಿ ಸೃಷ್ಟಿಸುವ ಪ್ರಯತ್ನವೂ ನಡೆದಿದೆ. ವಕ್ಫ್‌ ಆಸ್ತಿಗಳ ಒತ್ತುವರಿಗೆ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ಸರ್ಕಾರ ಸಂಗ್ರಹಿಸಿದೆ. 16,204 ಮಂದಿ ಬಾಧಿತರಿದ್ದಾರೆ. 9,121 ಮಂದಿ ಮುಸ್ಲಿಮರಿದ್ದರೆ, 2,080 ಮಂದಿ ಹಿಂದೂಗಳು’ ಎಂದು ತಿಳಿಸಿದರು.

ಈಗ ಜ್ಞಾನೋದಯ ಆಯ್ತಾ?
‘ನಿಮ್ಮದೇ (ಬಿಜೆಪಿ) ಸರ್ಕಾರ ಇತ್ತು. ಆಗ ನೀವು ಯಾಕೆ ವಕ್ಫ್‌ ಆಸ್ತಿಗೆ ಸಂಬಂಧಿ ಸಿದಂತೆ ಕ್ರಮ ಕೈಗೊಂಡಿಲ್ಲ. ಈಗ ನಿಮಗೆ ಜ್ಞಾನೋದಯ ಆಯ್ತಾ? ವಕ್ಫ್‌ ವಿಚಾರ ಇಟ್ಟುಕೊಂಡು ಉಪ ಚುನಾವಣೆಗೆ ಹೋದ್ರಿ. ಶಿಗ್ಗಾವಿ, ಚನ್ನಪಟ್ಟಣ, ಸಂಡೂರಿನಲ್ಲಿ ಜನರು ನಿಮಗೆ ಮೂರು ನಾಮ ಹಾಕಿ, ಚೊಂಬು ಕೊಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರನ್ನು ಛೇಡಿಸಿದರು. ‘ಅಪಪ್ರಚಾರ ಮಾಡ್ತೀರಾ? ಮಾನ, ಮರ್ಯಾದೆ ಇಲ್ವಾ? ನಿಮಗೆ ನಾಚಿಕೆ ಆಗಬೇಕು. ಈಗ ನೀವು ಸುಳ್ಳು ಹೇಳಿದರೆ ಹೆದರಬೇಕೆ’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.