ADVERTISEMENT

ಕರ್ನಾಟಕ–ಮಹಾರಾಷ್ಟ್ರದ ಜಗಳ ಬಗೆಹರಿಸಲಾಗಲಿಲ್ಲ: ಗಡ್ಕರಿ ವಿಷಾದ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 11:53 IST
Last Updated 28 ಫೆಬ್ರುವರಿ 2022, 11:53 IST
ಗಡ್ಕರಿ
ಗಡ್ಕರಿ   

ಬೆಳಗಾವಿ: ‘ನಾನು ಕೇಂದ್ರ ಜಲಸಂಪನ್ಮೂಲ ಸಚಿವನಾಗಿದ್ದಾದ ದೇಶದಲ್ಲಿ 20 ಅಂತರರಾಜ್ಯ ವಿವಾದಗಳಿದ್ದವು. ಅವುಗಳಲ್ಲಿ ಹದಿಮೂರನ್ನು ಪರಿಹರಿಸಿದ್ದೆ. ಆದರೆ, ಕರ್ನಾಟಕ– ಮಹಾರಾಷ್ಟ್ರ ನಡುವಿನ ವಿವಾದವನ್ನು ಬಗೆಹರಿಸಲು ನನ್ನಿಂದ ಬಗೆಹರಿಸಲು ಸಾಧ್ಯವಾಗಲಿಲ್ಲ’ ಎಂದು ಕೇಂದ್ರ ಭೂಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಸಹಾಯಕತೆ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ₹ 3,972 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ವಿವಿಧ 5 ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಅಂತರರಾಜ್ಯ ಜಲ ವಿವಾದಗಳ ಸಭೆ ನಡೆಯುವಾಗ ನಾನು ಬಾಗಿಲು ಹಾಕುವುದಕ್ಕೆ ಸೂಚಿಸುತ್ತಿದ್ದೆ. ಚರ್ಚೆ ಸಫಲ ಆಗುವವರೆಗೂ ಬಾಗಿಲು ತೆಗೆಸುತ್ತಿರಲಿಲ್ಲ. ಇದರಿಂದಾಗಿ ಬಹಳಷ್ಟು ವಿವಾದಗಳು ಬಗೆಹರಿದವು. ಕರ್ನಾಟಕ–ಮಹಾರಾಷ್ಟ್ರದ ನಡುವಿನ ಜಗಳ ಪರಿಹರಿಸಲಾಗಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ಕೊಲ್ಹಾಪುರಿ ಭಾಗದಲ್ಲಿ ಪ್ರವಾಹ ಸ್ಥಿತಿ ತಲೆದೋರಿದ ಸಂದರ್ಭದಲ್ಲಿ ಅಲ್ಲಿನ ಜನರು ಆಲಮಟ್ಟಿ ಜಲಾಶಯವನ್ನು ಶಪಿಸುತ್ತಾರೆ. ಜಲಾಶಯದ ಎತ್ತರವನ್ನು ಹೆಚ್ಚಿಸದೆ ಅಲ್ಲಲ್ಲಿ ವಾಟರ್‌ಗ್ರಿಡ್‌ಗಳನ್ನು ಸ್ಥಾಪಿಸುವ ಮೂಲಕ, ಕೆರೆಗಳ ಸಂಖ್ಯೆಯನ್ನು ಜಾಸ್ತಿ ಮಾಡುವುದು ಹಾಗೂ ನಾಲೆಗಳು ಮತ್ತು ನದಿಗಳ ಆಳ–ಅಗಲವನ್ನು ಹೆಚ್ಚಿಸುವ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ’ ಎಂದು ಸಲಹೆ ನೀಡಿದರು.

‘ಹೆದ್ದಾರಿಗಳ ಅಭಿವೃದ್ಧಿ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಮಾಡುವ ಮನಸ್ಸಿರಬೇಕಷ್ಟೆ’ ಎಂದರು.

ಅಂಗಡಿ ಸ್ಮರಣೆ:

‘ಹಲವು ಯೋಜನೆಗಳಿಗೆ ಈಗ ಚಾಲನೆ ನೀಡಲಾಗಿದೆ. ಇಲ್ಲಿನ ಹಿಂದಿನ ಸಂಸದರಾಗಿದ್ದ ದಿವಂಗತ ಸುರೇಶ ಅಂಗಡಿ ಅವರು ಹೆದ್ದಾರಿ ಅಭಿವೃದ್ಧಿ ಬಗ್ಗೆ ಹಲವು ಬಾರಿ ನನ್ನೊಂದಿಗೆ ‌ಚರ್ಚಿಸಿದ್ದರು. ಆದರೆ, ಚಾಲನೆ ಕೊಡುವಾಗ ಅವರು ನಮ್ಮೊಂದಿಗಿಲ್ಲ’ ಎಂದು ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.