ADVERTISEMENT

ಬಂಡೀಪುರ: ಕಾಳ್ಗಿಚ್ಚು ತಡೆಗೆ ವಾಯುಸೇನೆ ಹೆಲಿಕಾಪ್ಟರ್‌ ಕಾರ್ಯಾಚರಣೆ

ಇದೇ ಮೊದಲ ಬಾರಿ ವೈಮಾನಿಕ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 18:39 IST
Last Updated 25 ಫೆಬ್ರುವರಿ 2019, 18:39 IST
   

ಬೆಂಗಳೂರು:ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಾಲ್ಕು ದಿನಗಳಿಂದ ಅರಣ್ಯ ಪ್ರದೇಶ ವನ್ನು ಆಹುತಿ ತೆಗೆದುಕೊಳ್ಳುತ್ತಿರುವ ಕಾಳ್ಗಿಚ್ಚು ನಿಯಂತ್ರಿಸಲು, ಅರಣ್ಯ ಇಲಾಖೆ ಸೋಮವಾರ ಸೇನಾ ಹೆಲಿಕಾಪ್ಟರ್‌ಗಳ ಮೊರೆ ಹೋಯಿತು.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್‌ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಎರಡು ಹೆಲಿಕಾಪ್ಟರ್‌ಗಳು ಸೋಮವಾರ ಸಂಜೆ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿದ್ದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಕ್ಕೆ ನೀರು ಚಿಮುಕಿಸಿದವು.

‘ಬೆಳಿಗ್ಗೆ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಅವರು ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಿದ ನಂತರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದರು. ಬಳಿಕ ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಯಿತು. ನಾಲ್ಕು ಹೆಲಿಕಾಪ್ಟರ್‌ ಕೇಳಿದ್ದು, ಎರಡು ಕಾರ್ಯಾಚರಣೆ ನಡೆ ಸುತ್ತಿವೆ. ಅಗತ್ಯ ಬಿದ್ದರೆ ಮಂಗಳವಾರವೂ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಅಂಬಾಡಿ ಮಾಧವ್‌ ತಿಳಿಸಿದರು.

ADVERTISEMENT

10 ಸಾವಿರ ಎಕರೆ ನಾಶ: ಫೆ. 21ರಂದು ರಾಷ್ಟ್ರೀಯ ಉದ್ಯಾನದ ಕುಂದುಕೆರೆವಲಯದ ಲೊಕ್ಕೆರೆಯಲ್ಲಿ ಕಂಡುಬಂದ ಕಾಳ್ಗಿಚ್ಚು ಮರುದಿನ ಗೋಪಾಲಸ್ವಾಮಿಬೆಟ್ಟ ವಲಯದ ಕಬ್ಬೇಪುರ– ಚೌಡಹಳ್ಳಿ ಅರಣ್ಯ ಪ್ರದೇಶ ಆಹುತಿ ಪಡೆದಿತ್ತು. ನಾಲ್ಕು ದಿನಗಳಲ್ಲಿ ಅಂದಾಜು 10,000ಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.

ಗೋಪಾಲಸ್ವಾಮಿ ಬೆಟ್ಟ ವಲಯದ ಶೇ 90ರಷ್ಟು, ಕುಂದಕೆರೆವಲಯದ ಶೇ 40ರಷ್ಟು ಪ್ರದೇಶ ಕಾಳ್ಗಿಚ್ಚಿಗೆ ತುತ್ತಾಗಿದೆ. ಈ ಭಾಗದ ಬಹುತೇಕ ಎಲ್ಲ ಬೆಟ್ಟಗಳಲ್ಲಿರುವ ಹಸಿರು ಬೂದಿಯಾಗಿ ಹೋಗಿದೆ. ಗೋಪಾಲಸ್ವಾಮಿ ಬೆಟ್ಟದಲ್ಲಿ ಒಟ್ಟು 9 ಬೀಟ್‌ಗಳಿದ್ದು, ಈ ಪೈಕಿ ಮೂರು ಬೀಟ್‌ಗಳು ಹೆಚ್ಚು ಹಾನಿಗೀಡಾಗಿವೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟವು ಬೆಂಕಿಯ ಆಘಾತಕ್ಕೆ ನಲುಗಿಹೋಗಿದೆ.

ಗಡಿಯಲ್ಲೂ ಬೆಂಕಿ: ತಮಿಳುನಾಡಿನ ಮುದುಮಲೈ ಸಂರ ಕ್ಷಿತ ಪ್ರದೇಶವಾದ ಮಸಿನಗುಡಿ, ತಮಿಳುನಾಡಿನ ಬೋಳುಗುಡ್ಡದಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಅತ್ತ ಕೇರಳದ ವಯನಾಡು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮೂಲೆಹೊಳೆ ವಲಯಕ್ಕೂ ಬೆಂಕಿ ವಿಸ್ತರಿಸಿದೆ.

ಸಫಾರಿ ವಾರ ಬಂದ್‌

ಕಾಳ್ಗಿಚ್ಚಿನ ಕಾರಣಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ವಾರ ಸಫಾರಿ ಸ್ಥಗಿತಗೊಳಿಸಲಾಗಿದೆ.

‘ಸದ್ಯ ಬೆಂಕಿ ನಿಯಂತ್ರಣಕ್ಕೆ ಬರುವವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸಫಾರಿಗೆ ನಿರ್ಬಂಧ ವಿಧಿಸಲಾಗಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೇಗಿತ್ತು ಹೆಲಿಕಾಪ್ಟರ್‌ ಕಾರ್ಯಾಚರಣೆ?

ಕೊಯಮತ್ತೂರು ಬಳಿಯ ಸೂಲೂರು ವಾಯುನೆಲೆಯಿಂದ ಹೊರಟ ಭಾರತೀಯ ವಾಯು ಪಡೆಯ ಮಿಗ್–17 ಮತ್ತು ವಿ–5 ಹೆಲಿಕಾಪ್ಟರ್‌ಗಳು ಸಂಜೆ 4.30 ಸುಮಾರಿಗೆ ಗುಂಡ್ಲುಪೇಟೆಯತ್ತ ಧಾವಿಸಿದವು.

ಒಂದು ಹೆಲಿಕಾಪ್ಟರ್‌ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಬಳಿಯಲ್ಲಿರುವ, ತೀವ್ರ ಕಾಳ್ಗಿಚ್ಚಿಗೆ ತುತ್ತಾಗಿದ್ದ ಕರಡಿಕಲ್ಲು ಬೆಟ್ಟದ ಮೇಲೆ ನೀರು ಚಿಮುಕಿಸಿತು. ಮತ್ತೊಂದು, ಚಮ್ಮನಹಳ್ಳ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು. ಆ ನಂತರ ಬೋಳುಗುಡ್ಡ, ಕಣಿವೆ ದೇವಾಲಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಸಮೀಪದಲ್ಲಿರುವ ಬೇರಂಬಾಡಿ ಕೆರೆಯ ನೀರನ್ನು ಕಾರ್ಯಾಚರಣೆಗೆ ಬಳಸಲಾಯಿತು.

ಸೋಮವಾರ ಸಂಜೆ ಎರಡು ಹೆಲಿಕಾಪ್ಟರ್‌ಗಳು ಒಟ್ಟು ಹತ್ತು ಬಾರಿ ಬೆಂಕಿ ಹೊತ್ತಿಕೊಂಡ ಪ್ರದೇಶಕ್ಕೆ ನೀರು ಹಾಕಿದ್ದು, ಅಂದಾಜು 30 ಸಾವಿರ ಲೀಟರ್‌ ನೀರನ್ನು ಬಳಸಲಾಗಿದೆ. ಮಂಗಳವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.