ವೈದ್ಯಕೀಯ
ಬೆಂಗಳೂರು: ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ನಿಯೋಜನೆಯಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇವೆಯನ್ನು ಆರೋಗ್ಯ ಇಲಾಖೆ ಹಿಂದಕ್ಕೆ ಪಡೆದಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಗೆ ‘ಸಿಬ್ಬಂದಿ’ ಕೊರತೆ ಎದುರಾಗಿದೆ.
ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಿರ್ವಹಣೆ, ಶಿಕ್ಷಣ ನೀತಿಗಳ ರಚನೆ, ಸಂಶೋಧನೆ, ವೈದ್ಯಕೀಯ ಕಾಲೇಜುಗಳ ಸಂಯೋಜನೆ ಮತ್ತು ಶಿಕ್ಷಣದ ಗುಣಮಟ್ಟದ ಸುಧಾರಣೆಗೆ ಹೆಚ್ಚಿನ ಗಮನಹರಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ರಚಿಸಲಾಗಿತ್ತು. ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಣಾ ಅಧಿಕಾರಿಗಳು ಸೇರಿದಂತೆ ಹಲವು ಸಿಬ್ಬಂದಿ ಮೂರು ದಶಕಗಳಿಂದಲೂ ನಿಯೋಜನೆಯ ಮೇಲೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾಲೇಜುಗಳು ಹಾಗೂ ಬೋಧನಾ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು.
ಐದು ವರ್ಷಕ್ಕಿಂತ ಅಧಿಕ ಅವಧಿ ನಿಯೋಜನೆ ಮೇಲೆ ಇರುವ ಎಲ್ಲ ವೈದ್ಯರು, ಶುಶ್ರೂಷಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ವಾಪಸ್ ಕರೆಸಿಕೊಳ್ಳಲು ಇದೇ ವರ್ಷದ ಮೇನಲ್ಲಿ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. 750ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ 30ರಿಂದ 34 ವರ್ಷ ನಿಯೋಜನೆಯಲ್ಲೇ ಕಳೆದಿದ್ದರು. ನಂತರ ಎಲ್ಲರನ್ನೂ ಕೌನ್ಸೆಲಿಂಗ್ ಮೂಲಕ ಹಂತಹಂತವಾಗಿ ಆರೋಗ್ಯ ಇಲಾಖೆಯ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗಿದೆ.
16,000 ಹುದ್ದೆ ಖಾಲಿ
ವೈದ್ಯಕೀಯ ಶಿಕ್ಷಣ ಇಲಾಖೆಯ ಕಾಲೇಜುಗಳು ಹಾಗೂ ಬೋಧನಾ ಆಸ್ಪತ್ರೆಗಳಿಗೆ ಮಂಜೂರಾಗಿರುವ 27,444 ಹುದ್ದೆಗಳಲ್ಲಿ 16,003 ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ಬೋಧನೆ ಮತ್ತು ಚಿಕಿತ್ಸೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಒಳ ಮೀಸಲಾತಿ ನಿರ್ಧಾರ ಆಗುವವರೆಗೂ ಯಾವುದೇ ಹೊಸನೇಮಕಾತಿ ಪ್ರಕ್ರಿಯೆ ಆರಂಭಿಸಬಾರದು ಎನ್ನುವ ಸರ್ಕಾರ ಸೂಚನೆ ನೀಡಿರುವುದು ಹುದ್ದೆಗಳ ಭರ್ತಿಗೆ ಅಡ್ಡಿಯಾಗಿದೆ.
‘ಹುದ್ದೆಗಳು ಖಾಲಿ ಇದ್ದರೂ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ, ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಸಮಸ್ಯೆಯಾಗದಂತೆ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಯಾದಗಿರಿ, ರಾಯಚೂರು, ಕಲಬುರಗಿ ಮತ್ತಿತರ ಕೆಲವು ವೈದ್ಯಕೀಯ ಕಾಲೇಜುಗಳಲ್ಲಿ ಈಗಾಗಲೇ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಒಳಮೀಸಲಾತಿ ಕುರಿತು ರಾಜ್ಯಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಂಡ ನಂತರ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು’ ಎನ್ನುತ್ತಾರೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.