ADVERTISEMENT

ಪ್ರತಿ ಲೀಟರ್‌ ಹಾಲಿಗೆ ₹50 ನಿಗದಿ ಪಡಿಸಿ: ಕರ್ನಾಟಕ ಹಾಲು ಉತ್ಪಾದಕರ ವೇದಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 19:45 IST
Last Updated 13 ಜೂನ್ 2022, 19:45 IST
   

ಬೆಂಗಳೂರು: ಪ್ರತಿ ಲೀಟರ್‌ ಹಾಲಿಗೆ ₹50 ದರ ನಿಗದಿಪಡಿಸುವಂತೆ ಆಗ್ರಹಿಸಿ ಇದೇ 15ರಂದು ಫ್ರೀಡಂ ಪಾರ್ಕ್‌ನಲ್ಲಿ ಹಾಲಿನ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ಹಾಲು ಉತ್ಪಾದಕರ ವೇದಿಕೆ ತಿಳಿಸಿದೆ.

ಹಾಲು ಉತ್ಪಾದನೆ ವೆಚ್ಚ ದುಬಾರಿಯಾಗಿದ್ದು, ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ₹26ರಿಂದ ₹28 ನೀಡುತ್ತಿದೆ. ಒಕ್ಕೂಟದವರು ₹40ರಿಂದ ₹45ಕ್ಕೆ ಹಾಲು ಮಾರಾಟ ಮಾಡುತ್ತಿದ್ದಾರೆ ಎಂದು ಕರ್ನಾಟಕ ಹಾಲು ಉತ್ಪಾದಕರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಂ.ಆರ್. ನಾರಾಯಣಗೌಡ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯದಲ್ಲಿ ಹಾಲಿನ ವೈಜ್ಞಾನಿಕ ಬೆಲೆ ಏರಿಸುವಂತೆ ಒತ್ತಾಯಿಸಿ ‘ನಮ್ಮ ಹಾಲು ನಮ್ಮ ಹಕ್ಕು’ ಎಂಬ ಘೋಷವಾಕ್ಯದ ಅಡಿಯಲ್ಲಿ ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದೆ. ರಾಜ್ಯದಾದ್ಯಂತ 3 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವರು ಎಂದರು.

ADVERTISEMENT

ಪಂಜಾಬ್‌, ಹರಿಯಾಣ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲಿಗೆ ₹36ರಿಂದ ₹45 ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕಡಿಮೆ ಬೆಲೆ ನೀಡುತ್ತಿರುವುದು ಖಂಡನೀಯ. ಹೈನುಗಾರಿಕೆ ಮಾಡುವ ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೆ ಹೋರಾಟ ಕೈಬಿಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ವೈಜ್ಞಾನಿಕ ಬೆಲೆ ₹ 50 ನೀಡಬೇಕೆಂದು ಒಂದೂವರೆ ವರ್ಷದಿಂದ ಅನೇಕ ಸಂಘಟನೆಯವರು ಹೋರಾಟ ಮಾಡಿದ್ದರು. ಆದರೆ, ಒಕ್ಕೂಟವು ಕೇವಲ ₹3 ಸಹಾಯಧನ ಹೆಚ್ಚಿಸಿ, ಸುಳ್ಳು ಭರವಸೆ ನೀಡಿ ಹೋರಾಟವನ್ನು ಹತ್ತಿಕ್ಕಿದ್ದರು ಎಂದು ಅವರು
ಹೇಳಿದರು.

ಒಕ್ಕೂಟದಲ್ಲಿರುವ ಭ್ರಷ್ಟಾಚಾರ, ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಹೈನುಗಾರಿಕೆ ಮಾಡುವ ರೈತರಿಗೆ ಗೋಹತ್ಯೆ ನಿಷೇಧ ಕಾಯ್ದೆ ಮಾರಕವಾಗಿದೆ. ಗಂಡು ಕರು ಜನಿಸಿದರೆ ಹಸುವಿಗಿಂತ ಎರಡು ಪಟ್ಟು ಹೆಚ್ಚು ವೆಚ್ಚವಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.