
ಸಚಿವ ಎಚ್.ಕೆ.ಪಾಟೀಲ
ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ನಿಗಮಗಳಿಂದ ಜಾರಿ ಆಗುತ್ತಿರುವ ವಿವಿಧ ಯೋಜನೆಗಳಿಗೆ ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿಗಳು ಫಲಾನುಭವಿಗಳನ್ನು ಆಯ್ಕೆ ಮಾಡದಿದ್ದರೆ ಇಲಾಖಾ ಸಚಿವರೇ ಫಲಾನುಭವಿಗಳನ್ನು ಆಯ್ಕೆ ಮಾಡಲಿದ್ದಾರೆ.
ಈ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಿಗೆ ಅಧಿಕಾರ ನೀಡಲು ಸರ್ಕಾರ ತೀರ್ಮಾನಿಸಿದೆ. ವಿವಿಧ ನಿಗಮಗಳ ಅಡಿ ಸ್ವಯಂ ಉದ್ಯೋಗ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲು ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗಳು ಆಯಾ ವರ್ಷದ ಡಿಸೆಂಬರ್ ಕೊನೆಯೊಳಗೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.
ಆದರೆ, 2025–26 ನೇ ಸಾಲಿನಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸಾಕಷ್ಟು ವಿಧಾನಸಭಾ ಕ್ಷೇತ್ರಗಳ ಆಯ್ಕೆ ಸಮಿತಿಗಳು ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಇದರಿಂದ ಸರ್ಕಾರವು ಆಯವ್ಯಯದಲ್ಲಿ ನಿಗಮಗಳಿಗೆ ಒದಗಿಸಿರುವ ಅನುದಾನವನ್ನು ಆರ್ಥಿಕ ವರ್ಷದ ಅಂತ್ಯದೊಳಗೆ ವೆಚ್ಚ ಮಾಡುವುದು ಹಾಗೂ ನಿಗದಿತ ಅವಧಿಯಲ್ಲಿ ಗುರಿ ಸಾಧಿಸುವುದು ಕಷ್ಟವಾಗಿದೆ. ಆದ್ದರಿಂದ ಆಯ್ಕೆ ಮಾಡದೇ ಇರುವ ವಿಧಾನಸಭಾ ಕ್ಷೇತ್ರಗಳಲ್ಲಿ ಫಲಾನುಭವಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೇ ಆಯ್ಕೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿಯನ್ನು ಜನವರಿ ಕೊನೆಯೊಳಗೆ ಸಂಬಂಧಿಸಿದ ನಿಗಮಗಳಿಗೆ ಒದಗಿಸಬೇಕು. 2025–26 ನೇ ಸಾಲಿಗೆ ಸಂಬಂಧಿಸಿದಂತೆ 15 ದಿನಗಳ ಒಳಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅವರಿಗೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.