ADVERTISEMENT

ಶಾಸಕರಿಗೆ ತಲಾ ₹50 ಲಕ್ಷ; ಕ್ರಿಯಾ ಯೋಜನೆ ಸಲ್ಲಿಸಲು ‘ಪ್ರಭಾವಿ’ಗಳ ನಿರಾಸಕ್ತಿ

ರಾಜೇಶ್ ರೈ ಚಟ್ಲ
Published 6 ಜನವರಿ 2021, 19:31 IST
Last Updated 6 ಜನವರಿ 2021, 19:31 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ    

ಬೆಂಗಳೂರು: ಕ್ಷೇತ್ರಾಭಿವೃದ್ಧಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಬಿಜೆಪಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಆಕ್ರೋಶಗೊಂಡ ಬೆನ್ನಲ್ಲೆ, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಾಗಿ ತಕ್ಷಣ ತಲಾ ₹ 50 ಲಕ್ಷದಂತೆ (ಒಟ್ಟು ₹ 150 ಕೋಟಿ) ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಈ ಕುರಿತು ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅದರನ್ವಯ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವಂತೆ ಆರ್ಥಿಕ ಇಲಾಖೆಯು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

ಪ್ರದೇಶಾಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಶಾಸಕರು, ಈ ಯೋಜನೆಯಡಿ
ಕಾಮಗಾರಿಗಳನ್ನು ಕೈಗೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವುದು ಬಹಿರಂಗಗೊಂಡಿದೆ.

ADVERTISEMENT

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ವಾರ್ಷಿಕ ₹ 2 ಕೋಟಿ ನಿಗದಿಪಡಿಸಲಾಗಿದೆ. ಅದರಂತೆ, 2019–20ನೇ ಸಾಲಿನಲ್ಲಿ ತಲಾ ₹ 2 ಕೋಟಿಗೆ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, 52 ಶಾಸಕರು ಮತ್ತು ವಿಧಾನ ಪರಿಷತ್‌ ಏಳು ಸದಸ್ಯರು ಮಾತ್ರ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ. ಕ್ರಿಯಾ ಯೋಜನೆ ಸಲ್ಲಿಸದವರ ಪೈಕಿ ಸಚಿವರು, ಆಡಳಿತ ಹಾಗೂ ವಿರೋಧ ಪಕ್ಷದ ಪ್ರಭಾವಿ ಶಾಸಕರೂ ಇದ್ದಾರೆ ಎಂದು ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕೊರೊನಾ ಕಾರಣದಿಂದ ಪ್ರಸಕ್ತ ಸಾಲಿನಲ್ಲಿ (2020–21) ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ತಲಾ ₹ 1 ಕೋಟಿ ಮಾತ್ರ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ, ಈ ಸಾಲಿನಲ್ಲಿ ಎಲ್ಲ ಶಾಸಕರಿಗೆ ಸೇರಿ (ವಿಧಾನ ಪರಿಷತ್ ಸದಸ್ಯರೂ ಸೇರಿ) ಒಟ್ಟು ₹ 300 ಕೋಟಿಯಲ್ಲಿ ಹೊಸ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಈ ಹಿಂದೆಯೇ ಸೂಚನೆ ನೀಡಿತ್ತು. ಆದರೆ, ಇದೀಗ ಶಾಸಕರ ಒತ್ತಡದ ಕಾರಣಕ್ಕೆ ಮತ್ತೆ ತಲಾ ₹ 50 ಲಕ್ಷದಂತೆ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2018–19ರಲ್ಲಿ ಪ್ರತಿ ಶಾಸಕರಿಗೆ ತಲಾ ₹ 1.50 ಕೋಟಿ, 2019–20ರಲ್ಲಿ ತಲಾ ₹ 1 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ತಲಾ ₹ 50 ಲಕ್ಷದಂತೆ ಮೊದಲ ಕಂತಿನ ಅನುದಾನ
₹ 142.47 ಕೋಟಿಯನ್ನು ಸೆ. 18ರಂದು ಮತ್ತು ಎರಡನೇ ಕಂತಿನ ಅನುದಾನ ₹ 154.80 ಕೋಟಿಯನ್ನು ನ. 9ರಂದು ಬಿಡುಗಡೆ ಮಾಡಲಾಗಿದೆ. ಮೂರನೇ ಕಂತು ಕೂಡಾ ತಕ್ಷಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

2019–20ನೇ ಸಾಲಿನ ಕಾಮಗಾರಿಗಳನ್ನು ₹ 2 ಕೋಟಿವರೆಗೆ ಮುಂದುವರಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ, ಈಗಾಗಲೇ ಆರಂಭಿಸಿರುವ ಮತ್ತು ಮುಂದುವರಿಸಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳ ಮತ್ತು ಉಪ ವಿಭಾಗಾಧಿಕಾರಿ
ಗಳ ಪಿಡಿ (ವೈಯಕ್ತಿಕ ಠೇವಣಿ) ಖಾತೆಯಲ್ಲಿರುವ ಅನುದಾನದಿಂದ ವೆಚ್ಚ ಮಾಡುವಂತೆ ಸೂಚಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ಶಾಸಕರಿಗೆ ತಲಾ ₹ 1 ಕೋಟಿಗೆ ರೂಪಿಸಿರುವ ಕ್ರಿಯಾ ಯೋಜನೆಗಳ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲೇ ಅನುಷ್ಠಾನಗೊಳಿಸಲು ಈ ಹಿಂದೆ ಸರ್ಕಾರ ನಿರ್ದೇಶನ ನೀಡಿತ್ತು ಎಂದೂ ಮೂಲಗಳು ತಿಳಿಸಿವೆ.

ಕಾಮಗಾರಿ ಚುರುಕುಗೊಳಿಸಲು ಬಿಎಸ್‌ವೈ ಪತ್ರ

ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಪತ್ರ ಬರೆಯಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.

‘ಪ್ರಸಕ್ತ ಸಾಲಿನಲ್ಲಿ ಪ್ರತಿ ಶಾಸಕರಿಗೆ ಈಗಾಗಲೇ ತಲಾ ₹ 1 ಕೋಟಿಯಂತೆ ಬಿಡುಗಡೆ ಮಾಡಲಾಗಿದೆ. ಇದೀಗ, ಮತ್ತೆ ತಲಾ ₹ 50 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಿದ್ದೇನೆ. 2019–20ನೇ ಸಾಲಿನಲ್ಲಿ ಕೇವಲ 52 ಶಾಸಕರು ಮತ್ತು 7 ವಿಧಾನ ಪರಿಷತ್‌ ಸದಸ್ಯರು ಮಾತ್ರ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ. ಲಭ್ಯ ಅನುದಾನ ವಿನಿಯೋಗ ಆಗಬೇಕು. ಹೀಗಾಗಿ, ಕ್ರಿಯಾ ಯೋಜನೆಯಂತೆ ತಕ್ಷಣ ಕಾಮಗಾರಿಗಳನ್ನು ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಮುಖ್ಯಮಂತ್ರಿ ಸಲಹೆ ನೀಡಲಿದ್ದಾರೆ. ಪತ್ರದ ಪ್ರತಿಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೂ ಕಳುಹಿಸಲಾಗುವುದು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.