ADVERTISEMENT

ವಿಧಾನ ಪರಿಷತ್ ಚುನಾವಣೆ: ಪ್ರಭಾಕರ ಕೋರೆ ಜತೆ ಚರ್ಚೆ ನಡೆಸಿದ ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 6:34 IST
Last Updated 11 ಜೂನ್ 2022, 6:34 IST
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)   

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಬೆಳಿಗ್ಗೆ ಇಲ್ಲಿನ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದರು.

ಹುಬ್ಬಳ್ಳಿಯಿಂದ ರಸ್ತೆ ಮೂಲಕ ನಗರಕ್ಕೆ ಬಂದ ಮುಖ್ಯಮಂತ್ರಿ, ನೇರವಾಗಿ ಇಲ್ಲಿನ ಕ್ಯಾಂಪ್ ಪ್ರದೇಶದಲ್ಲಿರುವ ಕೋರೆ ಅವರ ಮನೆಗೆ ಹೋಗಿ ಉಪಾಹಾರ ಸೇವಿಸಿದರು.

ವಿಧಾನ ಪರಿಷತ್ ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆ ವಿಚಾರವಾಗಿ ಮಾತುಕತೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಪ್ರಸಕ್ತ ಚುನಾವಣೆಯ ಪ್ರಚಾರದಲ್ಲಿ ಕೋರೆ ಅವರು ಅಂತರ ಕಾಯ್ದುಕೊಂಡ ಕಾರಣಕ್ಕಾಗಿ ಈ ಭೇಟಿ ಮಹತ್ವ ಪಡೆದಿದೆ.

ಮತಕ್ಷೇತ್ರದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿ ಕೆಎಲ್ಇ ಶಿಕ್ಷಣ ಸಂಸ್ಥೆಯಲ್ಲಿಯೇ 3,000ಕ್ಕೂ ಹೆಚ್ಚು ಮತದಾರರು ಇದ್ದಾರೆ. ಯಾವುದೇ ಅಭ್ಯರ್ಥಿ ಗೆಲುವಿಗೂ ಸಂಸ್ಥೆಯ ಮತಗಳು ಮಹತ್ವದ ಪಾತ್ರ ವಹಿಸಲಿವೆ.

ಆದರೆ, ಪ್ರಭಾಕರ ಕೋರೆ ಅವರು ಈವರೆಗೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ, ಅವರ ಮನವೊಲಿಸಲು ಬಸವರಾಜ ಬೊಮ್ಮಾಯಿ ಕೊನೆಯ ಯತ್ನ ನಡೆಸಿದರು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಹರಿದಾಡುತ್ತಿವೆ.

‘ಕೋರೆ ಅವರು ಕಳೆದ 15 ದಿನಗಳಿಂದ ಅಮೆರಿಕ ಪ್ರವಾಸದಲ್ಲಿದ್ದರು. ಹೀಗಾಗಿ ಪ್ರಚಾರಕ್ಕೆ ಬಂದಿಲ್ಲ. ಚುನಾವಣೆ ವಿಚಾರದಲ್ಲಿ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿಲ್ಲ. ಶನಿವಾರದ ಸಭೆಗಳಲ್ಲಿ ಭಾಗವಹಿಸಲಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯರೂ ಆದ ಚುನಾವಣೆಯ ಬಿಜೆಪಿ ಪ್ರಭಾರಿ ಎನ್.ರವಿಕುಮಾರ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.