ADVERTISEMENT

ಪರಿಷತ್ ಫಲಿತಾಂಶ: ಯಾರ ವಿರುದ್ಧವೂ ಅವಸರದ ಕ್ರಮ ಇಲ್ಲ ಎಂದ ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 16:16 IST
Last Updated 14 ಡಿಸೆಂಬರ್ 2021, 16:16 IST
ಬಸವರಾಜ ಬೊಮ್ಮಾಯಿ – ಪ್ರಜಾವಾಣಿ ಚಿತ್ರ
ಬಸವರಾಜ ಬೊಮ್ಮಾಯಿ – ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಬೆಳಗಾವಿ, ಮೈಸೂರು ಸೇರಿದಂತೆ ವಿವಿಧ ಕಡೆಗಳ ಫಲಿತಾಂಶದ ಬಗ್ಗೆ ಪಕ್ಷ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಯಾರ ವಿರುದ್ಧವೂ ಅವಸರದ ಕ್ರಮ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಾರಣಾಸಿಯಿಂದ ಮಂಗಳವಾರ ಸಂಜೆ ಮರಳಿದ ಅವರು ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ಬೆಳಗಾವಿಯಲ್ಲಿ 13 ಶಾಸಕರಿದ್ದರೂ ಬಿಜೆಪಿಅಭ್ಯರ್ಥಿ ಸೋತ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ಮತಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದೆ. ಈ ಬಗ್ಗೆ ಕೂಡಾ ಪಕ್ಷದ ಸಭೆಯಲ್ಲಿ ಕೂಲಂಕಶವಾಗಿ ಚರ್ಚೆ ನಡೆಸುತ್ತೇವೆ’ ಎಂದರು.

ADVERTISEMENT

ರಮೇಶ ಜಾರಕಿಹೊಳಿ ಮೇಲೆ ಕ್ರಮ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ‘ಈಗಷ್ಟೆ ವಾರಣಾಸಿಯಿಂದ ಮರಳಿದ್ದೇನೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ. ಹಾಗೆಂದು ಯಾರ ವಿರುದ್ಧವೂ ಅವಸರದ ಕ್ರಮ ಇಲ್ಲ. ಪಕ್ಷದ ವರಿಷ್ಠರಿದ್ದಾರೆ. ಅವರು ನೋಡಿಕೊಳ್ಳುತ್ತಾರೆ’ ಎಂದರು.

‘ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಕಳೆದ ಬಾರಿ 6 ಕ್ಷೇತ್ರಗಳನ್ನು ಗೆದ್ದಿದ್ದೆವು. ಈ ಬಾರಿ 5 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದಿದ್ದೇವೆ. ಹೆಚ್ಚು ಗೆದ್ದಿರುವುದು ತೃಪ್ತಿ ತರಲೇಬೇಕಲ್ಲವೇ? ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಂಡಿರುವುದರ ಸಂಕೇತವಿದು.’ ಎಂದರು.

‘ಬಿಜೆಪಿ ಧಮ್ ಇಲ್ಲದ ಪಕ್ಷ’ ಎಂದು ಸಿದ್ದರಾರಾಯ್ಯ ಟೀಕಿಸಿದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಅವರ ಧಮ್‌ ಎಷ್ಟಿದೆ ಎನ್ನುವುದು ಗೊತ್ತು. ಅವರ ಕ್ಷೇತ್ರವನ್ನೇ ಉಳಿಸಿಕೊಳ್ಳಲು ಅವರಿಗೆ ಸಾಧ್ಯ ಆಗಿಲ್ಲ. ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರವನ್ನೇ ಕಳೆದುಕೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.