ADVERTISEMENT

Karnataka Monsoon Session | ವಿಧಾನ ಮಂಡಲ ಅಧಿವೇಶನ: ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 0:42 IST
Last Updated 13 ಆಗಸ್ಟ್ 2025, 0:42 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ವಿಧಾನಸಭೆಯಲ್ಲಿ ಪ್ರಶ್ನೋತ್ತರ

ಬಳ್ಳಾರಿ ಜಿಲ್ಲೆಯಲ್ಲಿ ನೆರೆಯ ಆಂಧ್ರಪ್ರದೇಶದಿಂದ ತಂದ ಕ್ಲೋರಲ್ ಹೈಡ್ರೇಟ್ ಎಂಬ ಅಪಾಯಕಾರಿ ರಾಸಾಯನಿಕ ಮಿಶ್ರಿತ ಸೇಂದಿಯನ್ನು ಮಾರಾಟ ಮಾಡುತ್ತಿರುವವರ ವಿರುದ್ಧ ಗೂಂಡಾ ಕಾಯ್ದೆ ಬಳಕೆ ಮಾಡಲಾಗುವುದು. ಕಳೆದ ಮೂರು ವರ್ಷಗಳಲ್ಲಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಸೇಂದಿ ಕಳ್ಳಸಾಗಣಿಕೆಗೆ ಸಂಬಂಧಿಸಿದಂತೆ 140 ಪ್ರಕರಣಗಳನ್ನು ದಾಖಲಿಸಿ, 160 ಆರೋಪಿಗಳನ್ನು ಬಂಧಿಸಲಾಗಿದೆ. 1,691 ಲೀಟರ್‌ ಸೇಂದಿ ಮತ್ತು 120 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರ್.ಬಿ. ತಿಮ್ಮಾಪುರ, ಅಬಕಾರಿ ಸಚಿವ (ಪ್ರಶ್ನೆ: ಕಾಂಗ್ರೆಸ್‌ನ ಅನ್ನಪೂರ್ಣ ಈ.)
ಮಾಹಿತಿ ಹಕ್ಕು ಕಾಯ್ದೆ ದುರುಪಯೋಗ ತಡೆಯಲು ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅವಕಾಶಗಳಿವೆ. ಮಾಹಿತಿ ಹಕ್ಕು ದುರುಪಯೋಗಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಈವರೆಗೆ 26 ಮಂದಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿ ಬಿದ್ದಿರುವ ಮಾಹಿತಿ ಆಯುಕ್ತ ರವೀಂದ್ರ ಗುರುನಾಥ್ ಡಾಕಪ್ಪನವರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಮಾಹಿತಿ ನೀಡುವ ದರಗಳನ್ನು ಪರಿಷ್ಕರಿಸುವ ಬಗ್ಗೆ ಪರಿಶೀಲಿಸಲಾಗುವುದು.
ಎಚ್‌.ಕೆ. ಪಾಟೀಲ, ಕಾನೂನು ಸಚಿವ (ಮುಖ್ಯಮಂತ್ರಿ ಪರವಾಗಿ) (ಪ್ರಶ್ನೆ: ಕಾಂಗ್ರೆಸ್‌ನ ಕೌಜಲಗಿ ಮಹಾಂತೇಶ)

ವಿಧಾನ ಪರಿಷತ್ ಪ್ರಶ್ನೋತ್ತರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,200 ಚದರ ಅಡಿ ವಿಸ್ತೀರ್ಣದವರೆಗಿನ ನಿವೇಶನದಲ್ಲಿ ನೆಲ ಮಹಡಿ ಮತ್ತು ಎರಡು ಅಂತಸ್ತು ಇರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ.
ರಹೀಂ ಖಾನ್‌, ಪೌರಾಡಳಿತ ಸಚಿವ (ಪ್ರಶ್ನೆ: ಕಾಂಗ್ರೆಸ್‌ನ ಉಮಾಶ್ರೀ)
ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ 2,025 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ತೆಗೆದುಕೊಳ್ಳುತ್ತೇವೆ.
ಎಸ್‌.ಎಸ್‌.ಮಲ್ಲಿಕಾರ್ಜುನ, ತೋಟಗಾರಿಕಾ ಸಚಿವ (ಪ್ರಶ್ನೆ: ಬಿಜೆಪಿಯ ಹಣಮಂತ ನಿರಾಣಿ)
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಗೌರವಧನ ಹೆಚ್ಚಿಸುವ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಅನುಮತಿ ನೀಡಿಲ್ಲ. ಈಗ ಮತ್ತೆ ಪ್ರಸ್ತಾವ ಸಲ್ಲಿಸಿ, ಅನುಮತಿ ಪಡೆದು ಗೌರವಧನವನ್ನು ಶೀಘ್ರವೇ ಹೆಚ್ಚಿಸುತ್ತೇವೆ.
ರಹೀಂ ಖಾನ್, ಪೌರಾಡಳಿತ ಸಚಿವ (ಪ್ರಶ್ನೆ: ಕಾಂಗ್ರೆಸ್‌ನ ಸುನೀಲ್‌ಗೌಡ ಪಾಟೀಲ್)
ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ ಮತ್ತು ಕರ್ನಾಟಕ ಪುರಸಭೆಗಳ ಕಾಯ್ದೆಗಳ ಅನ್ವಯ ವ್ಯಾಪಾರಿಗಳು ಟ್ರೇಡ್‌ ಲೈಸನ್ಸ್‌ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಸಾಲಿನಲ್ಲಿ ಲೈಸನ್ಸ್‌ ಶುಲ್ಕದಿಂದ ₹50 ಕೋಟಿಯಿಂದ ₹60 ಕೋಟಿ ಸಂಗ್ರಹಿಸುವ ನಿರೀಕ್ಷೆ ಇದೆ. ಈ ಪದ್ಧತಿಯನ್ನು ರದ್ದುಪಡಿಸುವ ಮತ್ತು ರಾಜ್ಯದಾದ್ಯಂತ ಏಕೀಕೃತ ಶುಲ್ಕ ಜಾರಿಗೆ ತರುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ.
ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ (ಪ್ರಶ್ನೆ: ಬಿಜೆಪಿಯ ಡಿ.ಎಸ್‌.ಅರುಣ್)
1961 ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 109ನೇ ಕಲಂ ಅಡಿ ಸ್ವಾಧೀನಕ್ಕೆ ಪಡೆಯಲಾದ ಭೂಮಿಗಳಿಗೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ. ರೈತರು ಮತ್ತು ಕಂಪನಿಗಳ ನಡುವೆ ದೀರ್ಘ ಮಾತುಕತೆಯ ನಂತರ ಒ‍ಪ್ಪಂದ ಮಾಡಿಕೊಡಲು ಈ ಕಾನೂನು ಅವಕಾಶ ಮಾಡಿಕೊಟ್ಟಿತ್ತು. ಅದರಂತೆ ಈಗಾಗಲೇ ಪರಿಹಾರ ನೀಡಿದ್ದು, ಮತ್ತೆ ಹೆಚ್ಚುವರಿ ಪರಿಹಾರಕ್ಕೆ ಬೇಡಿಕೆ ಇರಿಸಿದರೆ ಅದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ.
ಎಂ.ಬಿ.ಪಾಟೀಲ, ಬೃಹತ್ ಕೈಗಾರಿಕಾ ಸಚಿವ (ಪ್ರಶ್ನೆ: ಬಿಜೆಪಿಯ ತಳವಾರ್ ಸಾಬಣ್ಣ)

₹19.99 ಕೋಟಿ ವಸೂಲಿ

ಧಾರವಾಡದ ಕೆಲಗೇರಿ, ಮಮ್ಮಿಗಟ್ಟಿ, ಕೋಟೂರು, ಬೇಲೂರು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಎರಡು ಬಾರಿ ಪರಿಹಾರ ನೀಡಿದ ಪ್ರಕರಣದಲ್ಲಿ ₹19.99 ಕೋಟಿ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ.

ಎಂ.ಬಿ.ಪಾಟೀಲ, ಕೈಗಾರಿಕಾ ಸಚಿವ (ಪ್ರಶ್ನೆ: ಎಸ್‌.ಎಲ್‌. ಭೋಜೇಗೌಡ, ಜೆಡಿಎಸ್‌ ಸದಸ್ಯ) 

ADVERTISEMENT

ಸ್ಪರ್ಧಾಪರೀಕ್ಷೆಗೆ ಪೂರಕ ಪಠ್ಯ 

ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿ ಶಿಫಾರಸುಗಳನ್ನು 2024–25ನೇ ಸಾಲಿನಿಂದಲೇ ಜಾರಿಗೊಳಿಸಲಾಗಿದೆ. ಯುಪಿಎಸ್‌ಸಿ, ಎಸ್‌ಎಸ್‌ಸಿ ನಡೆಸುವ ಪರೀಕ್ಷೆಗಳಿಗೆ ರಾಜ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ, ಉದ್ಯೋಗ ಆಧಾರಿತ ಕೌಶಲ ಕಲಿಸುವ ಪಠ್ಯಕ್ರಮ, ಕೋರ್ಸ್‌ಗಳನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಅಳವಡಿಸಲಾಗುತ್ತಿದೆ

ಡಾ.ಎಂ.ಸಿ. ಸುಧಾಕರ್‌, ಉನ್ನತ ಶಿಕ್ಷಣ ಸಚಿವ (ಪ್ರಶ್ನೆ: ಡಾ.ಧನಂಜಯ ಸರ್ಜಿ, ಬಿಜೆಪಿ ಸದಸ್ಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.