ADVERTISEMENT

ಭಾಷಾ ಮಾಧ್ಯಮ: ಪೋಷಕರ ವಿವೇಚನೆಗೆ

‘ಕರ್ನಾಟಕ ಮುನ್ನಡೆ’– ಪರಿಣತರೊಂದಿಗೆ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಸಂವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 19:15 IST
Last Updated 4 ಮಾರ್ಚ್ 2019, 19:15 IST
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಿಂತನಾ ಲಹರಿ– ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಿಂತನಾ ಲಹರಿ– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ವಿವೇಚನೆ ಪೋಷಕರಿಗೆ ಬಿಟ್ಟಿದ್ದು. ರಾಜ್ಯ ಸರ್ಕಾರ ಈ ವಿಷಯದಲ್ಲಿ ಒತ್ತಡ ಹೇರುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸೋಮವಾರ ನಡೆದ ‘ಕರ್ನಾಟಕ ಮುನ್ನಡೆ’ ಪರಿಣಿತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಬೋಧನೆ ಮಾಡುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಜತೆಗೆ ಕನ್ನಡ ಮಾಧ್ಯಮದಲ್ಲೂ ಪಾಠ ಮಾಡಲಾಗುತ್ತದೆ’ ಎಂದರು.

ADVERTISEMENT

‘ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಈ ವರ್ಷ ₹1,200 ಕೋಟಿ ಅನುದಾನ ಮೀಸಲು ಇಡಲಾಗಿದೆ. ಸರ್ಕಾರಿ ಶಾಲೆಗಳ ಬಲಪಡಿಸಲು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ (ಸಿಎಸ್‌ಆರ್‌) ನೆರವು ಪಡೆಯಲಾಗುತ್ತದೆ. ಬಿಬಿಎಂಪಿಯ ‘ರೋಶನಿ’ ಯೋಜನೆ ಮೂಲಕ ಈ ದಿಸೆಯಲ್ಲಿ ಹೆಜ್ಜೆ ಇಡಲಾಗಿದೆ. ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಗುರಿ’ ಎಂದು ಅವರು ಹೇಳಿದರು.

‘ಮೈತ್ರಿ ಸರ್ಕಾರದ ಆಡಳಿತದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕ ಎಂಬ ತಾರತಮ್ಯ ಮಾಡುವುದಿಲ್ಲ. ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಸಂಕಲ್ಪ. ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಜನರು ನೇರವಾಗಿ ನನ್ನನ್ನು ಭೇಟಿ ಮಾಡಿ ಚರ್ಚೆ ಮಾಡಬಹುದು’ ಎಂದರು.

ಬಸ್‌ ಪ್ರಯಾಣ ದರ ಏರಿಕೆ ಇಲ್ಲ: ‘ಪೆಟ್ರೋಲ್‌ ಹಾಗೂ ಡೀಸೆಲ್‌ ದರ ₹3 ಹೆಚ್ಚಾಗಿದೆ. ಆದರೂ, ಸಾರಿಗೆ ನಿಗಮಗಳ ದರ ಏರಿಕೆ ಮಾಡುವುದಿಲ್ಲ. ನಿಗಮಗಳ ನ್ಯೂನತೆಗಳನ್ನು ಸರಿಪಡಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು. ಸಾರಿಗೆ ನಿಗಮಗಳನ್ನು ಉಳಿಸಲು ಪ್ರಯಾಣದರ ಏರಿಕೆ ಮಾಡಬೇಕು ಎಂಬ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಸಲಹೆಗೆ ಪ್ರತಿಕ್ರಿಯಿಸಿದ ಅವರು, ‘ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಕೆಎಸ್‌ಆರ್‌ಟಿಸಿ ₹1 ಸಾವಿರ ಕೋಟಿ ಠೇವಣಿ ಇಟ್ಟಿತ್ತು. ಈ ಹಣವನ್ನು ಅಭಿವೃದ್ಧಿ ಯೋಜನೆಗೆ ಬಳಸಿಕೊಳ್ಳಲು ನೀಡಿ ಎಂದು ಮನವಿ ಮಾಡಿದ್ದೆ. ಈಗ ಸಾರಿಗೆ ನಿಗಮಗಳು ಸಾಲದಲ್ಲಿವೆ’ ಎಂದರು.

ಮಹದಾಯಿ– ಅಧಿಸೂಚನೆ ಹೊರಡಿಸದ ಸರ್ಕಾರ: ‘ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ನೀರು ಹಂಚಿಕೆ ಮಾಡಿದೆ. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕಿದೆ. ಕೇಂದ್ರ ಸರ್ಕಾರ ಈವರೆಗೆ ಅಧಿಸೂಚನೆ ಹೊರಡಿಸಿಲ್ಲ. ಪ್ರಧಾನಿ ಮೋದಿ ಹಾಗೂ ಜಲ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ವಿದ್ಯುತ್‌ ಸೋರಿಕೆ ತಡೆಗಟ್ಟಿ: ‘ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ನೀಡಲು ವರ್ಷಕ್ಕೆ ₹11,250 ಕೋಟಿ ವೆಚ್ಚ ಮಾಡುತ್ತಿದೆ. ರೈತರ ಹೆಸರಿನಲ್ಲಿ ಈ ಹಣ ಸೋರಿಕೆ ಆಗುತ್ತಿದೆ. ಈ ಸೋರಿಕೆಗೆ ಕಡಿವಾಣ ಹಾಕಬೇಕು’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಮನವಿ ಮಾಡಿದರು. ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ‘ರೈತರಿಗೆ ಸಬ್ಸಿಡಿ ನೀಡಲು 2008ರಲ್ಲಿ ₹3,500 ಕೋಟಿ ಮೀಸಲಿಡಲಾಗಿತ್ತು. ಈಗ ಅದು ₹11 ಸಾವಿರ ಕೋಟಿಗೆ ಏರಿದೆ. ವಿದ್ಯುತ್‌ ಸರಬರಾಜು ಕಂಪನಿಗಳು ₹16 ಸಾವಿರ ಕೋಟಿ ಸಾಲದಲ್ಲಿವೆ. ವಿದ್ಯುತ್‌ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಶೀಘ್ರ ತಜ್ಞರ ಸಭೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

'ಮಂತ್ರಿಗಳು ತಾಲ್ಲೂಕಿಗೆ ಸೀಮಿತ!’

*ಈಗಿನ ಮಂತ್ರಿಗಳು ಅನೇಕರು ತಾಲ್ಲೂಕು ಮಂತ್ರಿಗಳಾಗಿದ್ದಾರೆ. ಅವರು ತಮ್ಮ ತಾಲ್ಲೂಕಿಗೆ ಅಷ್ಟೇ ಸೀಮಿತ ಆಗಿದ್ದಾರೆ. ಈ ಮಾತು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ.

*ಹಿಂದಿನ ಚುನಾವಣೆಗಳಲ್ಲಿ ಅಬಕಾರಿ, ಶಿಕ್ಷಣ, ಗಣಿ... ಈ ಕ್ಷೇತ್ರದವರುಗೆದ್ದು ಬರುತ್ತಿದ್ದರು. ಈಗ ಬಿಲ್ಡರ್‌ಗಳು (ಲ್ಯಾಂಡ್‌ ಡೆವಲಪರ್‌ಗಳು) ನೀರಿನಂತೆ ಹಣ ಚೆಲ್ಲಿ ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದಾರೆ. ರಾಜಕೀಯದಲ್ಲಿ ಮೌಲ್ಯ ಕುಸಿಯುತ್ತಿದೆ. ಬದಲಾವಣೆ ಬೇಕಿದೆ.

*ವಿಧಾನಸಭಾ ಚುನಾವಣೆಯಲ್ಲಿ ಜನರು ನನ್ನ ಪಕ್ಷಕ್ಕೆ 37 ಸ್ಥಾನಗಳನ್ನು ನೀಡಿದಾಗ ರಾಜಕೀಯ ನಿವೃತ್ತಿಗೆ ಚಿಂತನೆ ನಡೆಸಿದ್ದೆ. ನನ್ನನ್ನು ಜನರು ನಂಬಲಿಲ್ಲ. ಅಷ್ಟು ಹೊತ್ತಿಗೆ ಕರೆಯೊಂದು ಬಂತು.

*ರಾಜ್ಯ ಸರ್ಕಾರ ಪಶು ಭಾಗ್ಯ ಯೋಜನೆಯಡಿ ತಾಲ್ಲೂಕಿನಲ್ಲಿ 6–7 ಜನರಿಗೆ ತಲಾ ₹2 ಲಕ್ಷ ಸಾಲ ವಿತರಿಸಲಾಗುತ್ತಿದೆ. ₹20 ಸಾವಿರ ಸಬ್ಸಿಡಿ ನೀಡಲಾಗುತ್ತಿದೆ. ಮಂಡ್ಯದ ಕಾರ್ಯಕ್ರಮವೊಂದರಲ್ಲಿ 65 ವರ್ಷದ ಮಹಿಳೆಯೊಬ್ಬರು ಹಸು ಹಾಲು ಕೊಡುವುದಿಲ್ಲ ಎಂದು ಅಳಲು ತೋಡಿಕೊಂಡರು. ಇನ್ನೂ ₹65 ಸಾವಿರ ಸಾಲ ಇದ್ದು, ಅದನ್ನು ತೀರಿಸಲು ನೆರವು ಕೊಡಿ ಎಂದು ಕೋರಿಕೊಂಡರು.

*ನಗರ ಪ್ರದೇಶಗಳಲ್ಲಿ ಯೋಜನೆಗಳಿಗೆ ಭೂಮಿ ಕೊಟ್ಟವರು ಕಂಪನಿಗಳ ಗೇಟು ಕಾಯುತ್ತಿದ್ದಾರೆ. ಅರ್ಕಾವತಿ ಬಡಾವಣೆಗೆ ಭೂಮಿ ಬಿಟ್ಟುಕೊಟ್ಟವರು ಮನೆಗಳಲ್ಲಿ ಪಾತ್ರೆ ತೊಳೆಯುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಾವು ಈ ರೀತಿ ಮಾಡಿದ್ದೇವೆ.

*ಪರಿಸರಕ್ಕೆ ಹಾನಿ ಮಾಡಿ ಬೆಂಗಳೂರಿನಲ್ಲಿ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡುತ್ತಿಲ್ಲ. ಈ ಬಗ್ಗೆ ಪರಿಸರವಾದಿಗಳಿಗೆ ಅನುಮಾನ ಇದ್ದರೆ ನನ್ನನ್ನು ನೇರವಾಗಿ ಚರ್ಚೆ ಮಾಡಬಹುದು.

*ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂಪರಿವರ್ತನೆಗೆ ಅವಕಾಶ ನೀಡದಂತೆ ಆದೇಶ ಹೊರಡಿಸಲಾಗಿದೆ. ಅಲ್ಲಿ ಹೋಟೆಲ್‌ ಹಾಗೂ ರೆಸಾರ್ಟ್‌ಗಳ ನಿರ್ಮಾಣಕ್ಕೆ ಅವಕಾಶ ಇಲ್ಲ. ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಮರ ನಾಶ ಮಾಡುವುದಕ್ಕೂ ನನ್ನ ಒಪ್ಪಿಗೆ ಇಲ್ಲ.

ಸಂವಾದದಲ್ಲಿ ಹಾಜರಿದ್ದ ತಜ್ಞರ ಸಲಹೆಗಳು...

* ನಾನು ಒಂದೂವರೆ ವರ್ಷಗಳಿಂದ ಕುವೆಂಪು ಭಾಷಾ ಭಾರತಿಯ ಅಧ್ಯಕ್ಷನಾಗಿದ್ದೇನೆ. ಈ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮೂವರು ಮಂತ್ರಿಗಳು ಬಂದರು. ಎಂಟು ಮಂದಿ ಪ್ರಧಾನ ಕಾರ್ಯದರ್ಶಿಗಳು ಬದಲಾದರು. ನಾಲ್ಕು ನಿರ್ದೇಶಕರನ್ನು ಕಂಡಿದ್ದೇನೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆಡಳಿತ ಸ್ಥಿರತೆ ಕಡೆಗೆ ಗಮನ ಹರಿಸಬೇಕು.

ಕೆ.ಮರುಳಸಿದ್ಧಪ್ಪ,ಕುವೆಂಪು ಭಾಷಾ ಭಾರತಿ ಅಧ್ಯಕ್ಷ

* ನಾಗತಿಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ 200 ಮಕ್ಕಳು ಇದ್ದರು. ಈಗ ಮಕ್ಕಳ ಸಂಖ್ಯೆ 14ಕ್ಕೆ ಇಳಿದಿದೆ. ಈ ವರ್ಷ ಏಳು ಮಕ್ಕಳು ಪಾಸಾಗಿ ಎಂಟನೇ ತರಗತಿಗೆ ಹೋದರೆ ಶಾಲೆಯನ್ನು ಮುಚ್ಚಬೇಕಾದ ಸ್ಥಿತಿ ಇದೆ. ಈ ಶಾಲೆಯಲ್ಲೂ ಇಂಗ್ಲಿಷ್‌ ಕಲಿಸಿ ಎಂದು ಹಳ್ಳಿಯ ಜನರು ದುಂಬಾಲು ಬೀಳುತ್ತಿದ್ದಾರೆ. ನಾವು ಸಂದಿಗ್ಧ ಸ್ಥಿತಿಯಲ್ಲಿದ್ದೇವೆ.

ನಾಗತಿಹಳ್ಳಿ ಚಂದ್ರಶೇಖರ್‌,ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ

* ರಾಜ್ಯದಲ್ಲಿ 2018ರಲ್ಲಿ 11 ಬಂದ್‌ಗಳು ನಡೆದವು. ಈ ವರ್ಷ ಇಲ್ಲಿಯವರೆಗೆ ಎರಡು ಬಂದ್‌ಗಳು ಆಗಿವೆ. ಅನವಶ್ಯಕ ಬಂದ್‌ಗಳಿಗೆ ಕಡಿವಾಣ ಹಾಕಬೇಕು. ಬಂದ್‌ಗೆ ಕರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಪಿ.ಸಿ.ರಾವ್‌,ಎಫ್‌ಕೆಸಿಸಿಐ

* ಪ್ರತಿದಿನ ನನ್ನ ಬಳಿಗೆ ಬಂದು ಸಮಸ್ಯೆ ಹೇಳಿಕೊಳ್ಳುತ್ತಿರುವ ರಾಜ್ಯದ ಜನರೇ ನನಗೆ ಆದರ್ಶ

ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.