
ಪೊಲೀಸ್
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಾನ್‌ಸ್ಟೆಬಲ್‌ಗಳಿಂದ ಎಸ್.ಪಿ ದರ್ಜೆಯ (ನಾನ್ ಐಪಿಎಸ್) ಅಧಿಕಾರಿಗಳಿಗೆ ‘ಪತ್ರಾಂಕಿತ ರಜೆ’ (ಗೆಜೆಟೆಡ್ ಲೀವ್) ಸೌಲಭ್ಯ ಮಂಜೂರು ಮಾಡಲು ಪೊಲೀಸ್ ಮಹಾನಿರ್ದೇಶಕರು ಮುಂದಾಗಿದ್ದು, ಇದಕ್ಕಾಗಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಕೋರಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಹಬ್ಬಗಳ ಸಂದರ್ಭದಲ್ಲೂ ರಜೆ ಸಿಗದೇ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಗೆ ಶೀಘ್ರದಲ್ಲೇ ವಾರ್ಷಿಕವಾಗಿ 13 ತಿಂಗಳು ವೇತನ ದೊರೆಯುವ ಸಾಧ್ಯತೆಯಿದೆ.
ಇಲಾಖೆಯ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿ ಆರ್ಥಿಕ ನೆರವು ಒದಗಿಸಿದರೆ, ಪೊಲೀಸ್ ಇನ್‌ಸ್ಪೆಕ್ಟರ್, ಆರ್‌ಪಿಐ, ಡಿವೈಎಸ್‌ಪಿ (ಸಿವಿಲ್ ಹಾಗೂ ಸಶಸ್ತ್ರ), ಎಸ್.ಪಿ (ಸಿವಿಲ್ ಹಾಗೂ ಸಶಸ್ತ್ರ –ನಾನ್ ಐಪಿಎಸ್), ಹುದ್ದೆಯವರಿಗೆ 30 ದಿನ ಹೆಚ್ಚುವರಿ ವೇತನ ಸೌಲಭ್ಯ ದೊರೆಯಲಿದೆ.
ಸರ್ಕಾರಿ ರಜಾ ದಿನಗಳಂದು ಕೆಲಸ ಮಾಡುವ ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಮಾತ್ರ 30 ದಿನ ರಜೆ ಸೌಲಭ್ಯವಿದೆ. ಎಎಸ್‌ಐ, ಪಿಎಸ್‌ಐ ಹುದ್ದೆಗೆ 15 ದಿನ ಪತ್ರಾಂಕಿತ ರಜೆ ನೀಡಲಾಗುತ್ತಿದೆ. ಎಎಸ್‌ಐ– ಪಿಎಸ್‌ಐಗಳಿಗೆ ಕೊಡುತ್ತಿರುವ ಹೆಚ್ಚುವರಿ ಅರ್ಧ ತಿಂಗಳ ವೇತನವನ್ನು 30 ದಿನಕ್ಕೆ ವಿಸ್ತರಿಸಲು ಹಾಗೂ ಹೊಸದಾಗಿ ಇನ್‌ಸ್ಪೆಕ್ಟರ್ ಹುದ್ದೆಯಿಂದ ಎಸ್.ಪಿ ಹುದ್ದೆವರೆಗೆ 30 ದಿನ ರಜಾ ಸೌಲಭ್ಯ ಕಲ್ಪಿಸಲು ಉನ್ನತಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಭೆಯ ವರದಿಯನ್ನು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ.
ಎಎಸ್‌ಐ ಮತ್ತು ಪಿಎಸ್‌ಐಗಳಿಗೆ ನೀಡುತ್ತಿರುವ 15 ದಿನಗಳ ರಜಾ ವೇತನವನ್ನು 30 ದಿನಗಳಿಗೆ ಹೆಚ್ಚಿಸಲು ₹60.76 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ ಪಿ.ಐಯಿಂದ ಎಸ್.ಪಿ ಹುದ್ದೆವರೆಗೆ 30 ದಿನಗಳ ಪತ್ರಾಂಕಿತ ರಜಾ ಸೌಲಭ್ಯಕ್ಕೆ ಅಂದಾಜು ₹28.55 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
‘ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಹಬ್ಬದ ಸಂದರ್ಭಗಳಲ್ಲಿ ರಜೆ ದೊರೆಯುತ್ತಿದೆ. ಆದರೆ, ಪೊಲೀಸರು ಹಬ್ಬದ ಸಂದರ್ಭದಲ್ಲೂ ರಜೆ ಸಿಗದೇ ಕೆಲಸ ಮಾಡುತ್ತಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೆಚ್ಚುವರಿ ವೇತನ ನೀಡುವುದರಿಂದ ಸಿಬ್ಬಂದಿಗೆ ಅನುಕೂಲ ಆಗಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.