ಬಿ.ವೈ.ವಿಜಯೇಂದ್ರ
ಉಡುಪಿ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿದ್ದು, ಪಕ್ಷದಲ್ಲಿ ಯಾರಿಗೂ ಸಂತೋಷ ತರುವ ವಿಚಾರವಲ್ಲ. ಅದರಿಂದ ಪಕ್ಷಕ್ಕೆ ಲಾಭವಾಗಿದೆ ಎನ್ನುವ ಮೂರ್ಖನೂ ನಾನಲ್ಲ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯತ್ನಾಳ ಕೇಂದ್ರದಲ್ಲಿ ಸಚಿವರಾಗಿದ್ದವರು. ಒಬ್ಬ ಸಾಮಾನ್ಯ ಕಾರ್ಯಕರ್ತ ಬಿಜೆಪಿಯಿಂದ ಹೊರ ಹೋದರೂ ಪಕ್ಷಕ್ಕೆ ಹಾನಿಯಾಗುತ್ತದೆ’ ಎಂದರು.
‘ಯತ್ನಾಳ ಅವರು ಈಚೆಗೆ ಇತಿ– ಮಿತಿ ದಾಟಿದರು. ನಾಲಗೆ ಮೇಲೆ ಹಿಡಿತ ಇಟ್ಟುಕೊಳ್ಳುವಲ್ಲಿ ಅವರು ವಿಫಲರಾದರು. ತಮ್ಮ ಬುದ್ಧಿಯನ್ನು ಮತ್ತೊಬ್ಬರ ಕೈಗೆ ಕೊಟ್ಟ ಪರಿಣಾಮ ಇಂದು ಈ ಪರಿಸ್ಥಿತಿ ಎದುರಿಸುತ್ತಿದ್ದಾರೆ’ ಎಂದರು.
ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ತ್ರಿವಳಿ ತಲಾಖ್ ನಿಷೇಧ ಜಾರಿಗೆ ತಂದಿದ್ದು ನಾವು, ಆದರೆ ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದವರನ್ನು, ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಮುತ್ತಿಕ್ಕಿದವನನ್ನು ವಿರೋಧಿಸುತ್ತೇವೆ’ ಎಂದರು.
ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಬಳಿಕ ಮರೆತಿದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಶಕ್ತಿ ಯೋಜನೆ ಬಗ್ಗೆ ಬಹಳ ಚರ್ಚೆಯಾಯಿತು. ಮಹಿಳೆಯರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು. ಮತ್ತೊಂದು ಕಡೆ, ಗ್ರಾಮೀಣ ಭಾಗದಲ್ಲಿ ಸಾವಿರಾರು ಬಸ್‌ಗಳು ಓಡಾಟ ನಿಲ್ಲಿಸಿವೆ’ ಎಂದರು.
‘ವಿದ್ಯುತ್ ಉಚಿತವಾಗಿ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಆದರೆ, ವಿದ್ಯುತ್ ವ್ಯತ್ಯಯದಿಂದ ರೈತರಿಗೆ ಬೆಳೆಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.