ADVERTISEMENT

Karnataka Politics: ಕೈ–ಕಮಲ ಆಂತರಿಕ ತುಮುಲ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 0:00 IST
Last Updated 9 ಜುಲೈ 2025, 0:00 IST
<div class="paragraphs"><p>ಕಾಂಗ್ರೆಸ್ ಮತ್ತು ಬಿಜೆಪಿ&nbsp;</p></div>

ಕಾಂಗ್ರೆಸ್ ಮತ್ತು ಬಿಜೆಪಿ 

   

ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿಯಲ್ಲಿ ಆಂತರಿಕ ಕಲಹದ ಹೊಗೆ ಮತ್ತೆ ಎದ್ದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವರ ಬಗ್ಗೆ ಆ ಪಕ್ಷದ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಯಲ್ಲಿ ತಮ್ಮ ಹಿಡಿತ ಇಟ್ಟುಕೊಂಡಿರುವ ಆ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ‘ಸಮಾನ ಮನಸ್ಕರ ಗುಂಪು’ ಕಿಡಿಕಾರಿದೆ

ಕೆಲವು ವಿಷಯಗಳನ್ನು ಹೇಳಿಕೊಳ್ಳಲು ಶಾಸಕರು ಒಂದಷ್ಟು ಇರುಸುಮುರುಸು ಅನುಭವಿಸುತ್ತಿದ್ದಾರೆ. ಇದನ್ನು ಲಿಖಿತ ರೂಪದಲ್ಲಿ ಕೊಡುವಂತೆ ಹೇಳಿದ್ದೇನೆ
ರಣದೀಪ್‌ ಸಿಂಗ್‌ ಸುರ್ಜೇವಾಲಾ ಕಾಂಗ್ರೆಸ್ ಉಸ್ತುವಾರಿ

ದೂರು– ದುಮ್ಮಾನ ಲಿಖಿತವಾಗಿ ಕೊಡಿ – ‘ಉಸ್ತುವಾರಿ’ ಸಲಹೆ

ಸಚಿವರ ನಡೆಗೆ ‘ಕೈ’ ಶಾಸಕರ ಕಿಡಿ

ADVERTISEMENT

ಬೆಂಗಳೂರು: ಸರ್ಕಾರದ ಕಾರ್ಯವೈಖರಿ ಸಚಿವರ ನಡೆಗೆ ಬೇಸತ್ತಿರುವ ಕೆಲವು ಶಾಸಕರು ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಎದುರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷ ಸಂಘಟನೆ ಕ್ಷೇತ್ರದ ಅಭಿವೃದ್ಧಿ ಅನುದಾನ ಲಭ್ಯತೆಯ ಕುರಿತು ಅಭಿಪ್ರಾಯ ಪಡೆಯುವ ವೇಳೆ ವ್ಯಕ್ತವಾದ ಶಾಸಕರ ಅಸಮಾಧಾನ ಸುರ್ಜೇವಾಲಾ ಅವರನ್ನು ಗಲಿಬಿಲಿಗೊಳಿಸಿದೆ.

ಸಚಿವರ ಕಾರ್ಯವೈಖರಿ ಬಗ್ಗೆ ಆಕ್ಷೇಪ ಎತ್ತಿದ ಶಾಸಕರಿಗೆ ದೂರು– ದುಮ್ಮಾನಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸುರ್ಜೇವಾಲಾ ಸೂಚನೆ ನೀಡಿದ್ದಾರೆ.  ಸುರ್ಜೇವಾಲಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಬಹುತೇಕ ಶಾಸಕರು ತಮ್ಮ ಅಹವಾಲು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದ ಸಚಿವರ ವರ್ತನೆಯ ಬಗ್ಗೆ ದೂರು ನೀಡಿದ್ದಾರೆ.

ಕೆಲವರು ಸಚಿವರ ಹೆಸರು ಉಲ್ಲೇಖಿಸಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸುರ್ಜೇವಾಲಾ ‘ಕೆಲವು ಶಾಸಕರು ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ್ದೇನೆ. ಮುಖ್ಯಮಂತ್ರಿ ಬದಲಾವಣೆ ಮಾಡುವುದು ಹೈಕಮಾಂಡ್. ಶಾಸಕರಿಗೆ ಕೆಲವು ಆಸೆಗಳು ಇರಬಹುದು. ಆದರೆ ಈ ವಿಚಾರ ಈಗ ಪ್ರಸ್ತುತ ಅಲ್ಲ’ ಎಂದರು.

ಶಾಸಕರಾದ ಎಚ್‌.ಆರ್‌. ಗವಿಯಪ್ಪ ಹಂಪನಗೌಡ ಬಾದರ್ಲಿ ಶ್ರೀನಿವಾಸ್ ಸಹ ಸದಸ್ಯ  ಲತಾ ಮಲ್ಲಿಕಾರ್ಜುನ್ ಮತ್ತಿತರರು ಸುರ್ಜೇವಾಲಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದರು.

ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಶಾಸಕ ಆರ್‌.ವಿ. ದೇಶಪಾಂಡೆ ‘ಮುಖ್ಯಮಂತ್ರಿ ಬದಲಾವಣೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಚರ್ಚೆ ಪಕ್ಷದಲ್ಲಿ ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ. ಈ ರೀತಿ ಚರ್ಚೆ ಮಾಡುವುದು ಸರಿಯಲ್ಲ. ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದು ಮನವಿ ಮಾಡಿದ್ದಾರೆಂದು ಗೊತ್ತಾಗಿದೆ .

‘ಕೆಲವು ಸಮಸ್ಯೆ ಇರುವುದು ನಿಜ. ನಾನೂ ಸುದೀರ್ಘ ಅವಧಿ ಸಚಿವನಾದವನು. ಶಾಸಕರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವನು. ಶಾಸಕರಿಂದ ವೈಯುಕ್ತಿಕವಾಗಿ ಅಭಿಪ್ರಾಯ ಕೇಳುವುದರಿಂದ ಪಕ್ಷ ಮತ್ತು ಸರ್ಕಾರದಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ’ ಎಂದು ಅವರು ಸಲಹೆ ನೀಡಿದ್ದಾರೆ.

‘ಪಕ್ಷ ತೊರೆದ ಬಿಎಸ್‌ವೈ ಮತ್ತೇಕೆ ಮರಳಿದರೋ’

ದಾವಣಗೆರೆ: ‘ಬಿ.ಎಸ್‌.ಯಡಿಯೂರಪ್ಪ ಹಿಂದೆ ಬಿಜೆಪಿ ತೊರೆದು ಪಕ್ಷ ಕಟ್ಟಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರ ಮನೆ ಬಾಗಿಲು ಬಡಿದಿದ್ದರು. ಮತ್ತೇಕೆ ಬಿಜೆಪಿಗೆ ಮರಳಿದರೋ ಗೊತ್ತಿಲ್ಲ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಮಂಗಳವಾರ ಇಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನದ ನಿಮಿತ್ತ ನಡೆದ ‘ನಮ್ಮಭಿಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಡಿಸಿಎಂ, ಸಿ.ಎಂ ಹುದ್ದೆಗೆ ಏರಲು ಜಿ.ಎಂ. ಸಿದ್ದೇಶ್ವರ ಪರಿಶ್ರಮವಿದೆ. ‘ಪಕ್ಷದಲ್ಲಿ ಸಮಸ್ಯೆ ಸೃಷ್ಟಿಸುವವವರ ಮಟ್ಟಹಾಕಬೇಕಿದೆ. ಸಿದ್ದೇಶ್ವರರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

‘ಇದು ರಾಜಕೀಯ ಸಭೆಯಲ್ಲ’ ಎಂದು ಕಾರ್ಯಕ್ರಮದಲ್ಲಿ ಹೇಳಿದ ಬಹುತೇಕರು ಬಿ.ಎಸ್‌.ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

‘ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಹೊರಹಾಕಬೇಕು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೆಸರು ಉಲ್ಲೇಖಿಸದೇ ಒತ್ತಾಯಿಸಿದರು.

‘ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಬೆನ್ನಿಗೆ ಚೂರಿ ಹಾಕಿದವರಿಗೆ ತಕ್ಕ ಉತ್ತರ ನೀಡಲೇಬೇಕಿದೆ’. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ’ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಹೇಳಿದರು.

‘ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಭದ್ರಾ ಜಲಾಶಯದ ಬಲದಂಡೆ ನಾಲೆ ವಿಚಾರವಾಗಿ ಚರ್ಚಿಸಲು ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದೆನೇ ವಿನಾ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವುದಕ್ಕಲ್ಲ’ ಎಂದು ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದರು.

ಜಿ.ಎಂ.ಸಿದ್ದೇಶ್ವರ ಅವರ ಜೊತೆಗೆ ನಾವಿದ್ದೇವೆ. ಒಗ್ಗಟ್ಟಿನಲ್ಲಿ ಬಲವಿದೆ ಯಶಸ್ಸು ಕೂಡಾ ಇದೆ. ಪಕ್ಷವನ್ನು ಕಟ್ಟಿ ಬೆಳೆಸುವ ಸಂಕಲ್ಪ ಮಾಡಿದ್ದೇವೆ
ಪ್ರತಾಪ್ ಸಿಂಹ. ಮಾಜಿ ಸಂಸದ

ಬಿಜೆಪಿ ಭಿನ್ನಮತಿಯರ ಸಭೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ಭಿನ್ನಮತಿಯ ನಾಯಕರು ಸಿದ್ದೇಶ್ವರ ಅವರ ಜನ್ಮದಿನದ ಆಚರಣೆ ನೆಪದಲ್ಲಿ ನಗರದಲ್ಲಿ ಗೋಪ್ಯ ಸಭೆ ನಡೆಸಿದರು. ಸೋಮವಾರ ರಾತ್ರಿಯೇ ದಾವಣಗೆರೆಗೆ ಆಗಮಿಸಿದ್ದ ನಾಯಕರು ಜಿ.ಎಂ. ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಬಹುಹೊತ್ತು ಚರ್ಚೆ ನಡೆಸಿದರು. ಮುಖಂಡರಾದ ಕುಮಾರ್‌ ಬಂಗಾರಪ್ಪ ಬಿ.ಪಿ.ಹರೀಶ್‌ ಅರವಿಂದ ಲಿಂಬಾವಳಿ ಪ್ರತಾಪಸಿಂಹ ಮತ್ತಿತರರು ಇದ್ದರು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.