ADVERTISEMENT

ಕಾಲಭೈರವನ ಬೆಟ್ಟ ಏಸು ಬೆಟ್ಟ ಮಾಡಲು ಹೊರಟಿದ್ದೇಕೆ: ಡಿಕೆಶಿಗೆ ಸಚಿವ ಅಶೋಕ ಪ್ರಶ್ನೆ

ಕಪಾಲ ಬೆಟ್ಟ ವಿವಾದ ಮುನ್ನಲೆಗೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 10:22 IST
Last Updated 28 ಅಕ್ಟೋಬರ್ 2020, 10:22 IST
ಆರ್‌.ಅಶೋಕ
ಆರ್‌.ಅಶೋಕ    

ಬೆಂಗಳೂರು: ಆರ್‌.ಆರ್‌.ನಗರ ಕ್ಷೇತ್ರದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಚುನಾವಣಾ ಕಣ ಬಿಸಿಯೇರಿದ್ದು, ಬಿಜೆಪಿ ‘ಕಪಾಲಬೆಟ್ಟ’ದ ವಿವಾದವನ್ನು ಮುನ್ನಲೆಗೆ ತಂದಿದೆ.

‘ಕಪಾಲ ಬೆಟ್ಟವು ಕಾಲಭೈರವನ ಬೆಟ್ಟವೊ ಅಥವಾ ಏಸುವಿನ ಬೆಟ್ಟವೋ’ ಎಂಬುದನ್ನು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಲಿ ಎಂದು ಕಂದಾಯ ಸಚಿವ ಆರ್‌.ಅಶೋಕ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಸವಾಲು ಹಾಕಿದರು.

‘ಒಕ್ಕಲಿಗರ ಹೆಸರಲ್ಲಿ ಜಾತಿ ರಾಜಕಾರಣ ಮಾಡುತ್ತಿರುವ ಶಿವಕುಮಾರ್‌ ಅವರು ಕಪಾಲ ಬೆಟ್ಟವು ಒಕ್ಕಲಿಗರ ಆರಾಧದೈವವಾಗಿರುವ ಕಾಲಭೈರವ ಬೆಟ್ಟ ಹೌದೋ ಅಲ್ಲವೊ ಎನ್ನುವುದನ್ನು ತಿಳಿಸಲಿ. ಶಿವಕುಮಾರ್‌ ಈ ಕುರುಕ್ಷೇತ್ರದಲ್ಲಿ ಜಾತಿ ಕಾರ್ಡ್‌ ಬಳಸಿದ್ದಾರೆ. ನಮ್ಮ ತಂದೆ ಒಕ್ಕಲಿಗ, ನಾನು ಒಕ್ಕಲಿಗ, ನಾನು ಬಂಡೆ ಅಂತ ಹೇಳಿಕೊಳ್ಳುತ್ತಾರೆ. ಒಕ್ಕಲಿಗ ಎಂದು ಹೇಳಿಕೊಳ್ಳುವ ಇವರು ಕಾಲಭೈರವನ ಬೆಟ್ಟವನ್ನು ಒಡೆದು ಏಸು ಪ್ರತಿಮೆ ಸ್ಥಾಪನೆ ಮಾಡಲು ಹೊರಟಿದ್ದು ಏಕೆ? ಆಗ ಒಕ್ಕಲಿಗರು ನೆನಪಾಗಲಿಲ್ಲವೆ’ ಎಂದು ಪ್ರಶ್ನಿಸಿದರು.

‘ಇವರು ವ್ಯಾಟಿಕನ್‌ಗೆ ಹೋಗಿ ಅಲ್ಲಿ ನೂರು ಅಡಿ ಎತ್ತರದ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆ ಸ್ಥಾಪಿಸಲಿ ನೋಡೋಣ. ಆಗ ಇವರ ಸಾಹಸವನ್ನು ಒಪ್ಪಬಹುದು. ಅತಿ ಪುರಾತನವಾದ ಕಪಾಲ ಬೆಟ್ಟವನ್ನು ಏಸು ಬೆಟ್ಟವಾಗಿ ಪರಿವರ್ತಿಸಲು ಗೋಮಾಳ ಜಮೀನು ಕೊಟ್ಟವರು ಯಾರು? ಬಿಜೆಪಿಯವರಾ, ನೀವಾ ಎಂಬುದನ್ನು ಹೇಳಿ ಡಿ.ಕೆ.ಅಣ್ಣನವರೇ’ ಎಂದು ಅಶೋಕ ವ್ಯಂಗ್ಯವಾಗಿ ನುಡಿದರು.

‘ನಮ್ಮ ಪಕ್ಷದಲ್ಲಿ ರಾಜಾಹುಲಿ ಇದ್ದಾರೆ. ನಿಮ್ಮಲ್ಲಿ ಹುಲಿ ಯಾರು? ರಾಜಾ ಯಾರು? ಹೇಳಿ. ಅಲ್ಲಿ ನೂರಾರು ಹುಲಿಗಳಿವೆ. ವಿಧಾನಸೌಧಕ್ಕೆ ಚಪ್ಪಡಿ ಕಲ್ಲು ಹಾಕಿಸುತ್ತೇನೆ ಎಂದು ಶಿವಕುಮಾರ್‌ ಹೇಳಿಕೊಂಡು ಓಡಾಡುತ್ತಿದ್ದಾರೆ. ಮುಂದೆ ಇಂತಹ ವ್ಯಕ್ತಿ ಬರ್ತಾರೆ ಎಂಬ ಕಾರಣಕ್ಕೆ ಕೆಂಗಲ್ ಹನುಮಂತಯ್ಯ ಅವರು ಅಂದೇ ಚಪ್ಪಡಿ ಕಲ್ಲು ಹಾಕಿಸಿದ್ದಾರೆ, ನಾಲ್ಕು ಕಡೆಗಳಲ್ಲೂ ಬಾಗಿಲನ್ನೂ ಇರಿಸಿದ್ದಾರೆ ಎಂದರು.

ಕಾಂಗ್ರೆಸ್‌ಗೆ ಸೋಲಿನ ಭೀತಿ: ‘ಆರ್‌.ಆರ್‌.ನಗರದಲ್ಲಿ ಕಾಂಗ್ರೆಸ್‌ ಪ್ರತಿಭಟನಾ ರಾಜಕಾರಣಕ್ಕೆ ಇಳಿದಿದೆ. ಇದಕ್ಕೆ ಸೋಲಿನ ಭೀತಿಯೇ ಕಾರಣ. ಸೋಲಿನ ಸುಳಿವು ಅರಿತ ಡಿ.ಕೆ.ಶಿವಕುಮಾರ್‌ ಯುದ್ಧರಂಗದಿಂದ ಪಲಾಯನ ಮಾಡಿದ್ದಾರೆ. ಸಿದ್ದರಾಮಯ್ಯ ಸವಾಲು ಹಾಕುವುದಕ್ಕಷ್ಟೇ ಸೀಮಿತವಾಗಿದ್ದಾರೆ. ನಿಮಗೆ ಧಮ್ ಇದೆಯಾ ಎಂದು ಕೇಳುತ್ತಿದ್ದಾರೆ. ನಮಗೆ ಧಮ್ ಇದ್ದ ಕಾರಣಕ್ಕೇ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದು ಅಶೋಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಚಿವರಾದ ಎಸ್‌.ಟಿ.ಸೋಮಶೇಖರ್, ಗೋಪಾಲಯ್ಯ ಮತ್ತು ನಾರಾಯಣಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.