ADVERTISEMENT

ಅತ್ಯಂತ ಹಳೆಯ ಪಕ್ಷ ಈಗ ತುಕ್ಕು ಹಿಡಿದಿದೆ: ಕಾಂಗ್ರೆಸ್‌–ಬಿಜೆಪಿ ಟ್ವೀಟ್‌ ಸಮರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 12:27 IST
Last Updated 26 ಮಾರ್ಚ್ 2021, 12:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಉಪ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಶುಕ್ರವಾರ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಟ್ವೀಟ್‌ ವಾರ್‌ ಜೋರಾಗಿದೆ.

‘ಹೌದು, ಅತ್ಯಂತ ಹಳೆಯ ಪಕ್ಷಕ್ಕೆ ಈಗ ತುಕ್ಕು ಹಿಡಿಯುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕಾಗಿ ಸೋನಿಯಾ ಗಾಂಧಿ ಕುಟುಂಬ ಮತ್ತು ಹಿರಿಯ ನಾಯಕರ ನಡುವೆ ಹೋರಾಟ ನಡೆಯುತ್ತಿದೆ. ಇತ್ತ ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ಕಾರುಬಾರು ಜೋರಾಗುತ್ತಿದೆ ಎಂದು ಹಿರಿಯ ನಾಯಕರು ದೂರುತ್ತಿದ್ದಾರೆ’ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಟ್ವೀಟ್‌ ಮಾಡಿದೆ.

ಇದಕ್ಕೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್‌, ‘ಬಿಜೆಪಿಯವರೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ. ತುಕ್ಕು ಹಿಡಿದಿದ್ದು ಯಾರಿಗೆ ಎನ್ನುವುದು ಜನರಿಂದಲೇ ಸಾಬೀತಾಗಲಿ. ಸುಮ್ಮನೇ ಏಕೆ ಈ ಲಂಚ, ಮಂಚದ ಸಿ.ಡಿ. ಸರ್ಕಾರವನ್ನು ಲಜ್ಜೆಬಿಟ್ಟು ಮುಂದುವರೆಸುತ್ತೀರಿ? ಅಂದಹಾಗೆ ಕೋರ್ ಕಮಿಟಿ ಪುನರ್‌ರಚನೆಯ ಮೂಲಕ ತಮ್ಮ ಯಡಿಯೂರಪ್ಪ ಮುಕ್ತ ಬಿಜೆಪಿ ಅಭಿಯಾನ ಬಲು ಜೋರಾಗಿದೆಯಲ್ಲ, ಅಭಿಯಾನದ ಅಂತ್ಯ ಎಂದು?’ ಎಂದು ತಿರುಗೇಟು ನೀಡಿದೆ.

ADVERTISEMENT

ಮತ್ತೊಂದು ಟ್ವೀಟ್‌ ಮಾಡಿರುವ ಬಿಜೆಪಿ, ‘ಘೋಷಣೆಗೊಂಡಿರುವ ಉಪಚುನಾವಣೆಯಲ್ಲಿ ನಿಮ್ಮ ತಾಕತ್ತು ಮೊದಲು ತೋರಿಸಿ. ಆಮೇಲೆ ವಿಧಾನಸಭೆ ವಿಸರ್ಜಿಸುವ ಬಗ್ಗೆ ಚಿಂತೆ ಮಾಡುವಿರಂತೆ. ಜೈಲಿನಿಂದ ಬಿಡುಗಡೆಗೊಂಡ ಭ್ರಷ್ಟಾಚಾರದ ಆರೋಪಿ ಅಧ್ಯಕ್ಷರಿಗೆ ಒಂದೇ ಒಂದು ಚುನಾವಣೆ ಗೆಲ್ಲಲಾಗಲಿಲ್ಲ. ಈ ಉಪಚುನಾವಣೆಯಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದೆ.

‘ಬಸವರಾಜ ಬೊಮ್ಮಯಿ, ಯಡಿಯೂರಪ್ಪ, ಪೊಲೀಸ್‌ ಕಮಿಷನರ್‌ ಅವರೇ ದೂರು ಬರುವವರೆಗೂ ದೂರು ಬರಲಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದೀರಿ, ಈಗ ದೂರು ಬಂದಿದೆ ಇನ್ನೂ ಏಕೆ ತಡಮಾಡುತ್ತಿದ್ದೀರಿ? ಯುವತಿಯ ದೂರಿನ ಪ್ರಕಾರ ಕ್ರಮ ಕೈಗೊಂಡು, ಅತ್ಯಾಚಾರದ ಪ್ರಕರಣ ದಾಖಲಿಸಿ, ಆರೋಪಿ ರಮೇಶ್ ಜಾರಕಿಹೊಳಿಯವರನ್ನು ಕೂಡಲೇ ಬಂಧಿಸಿ’ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್‌ ಮಾಡಿದೆ.

‘ಅಂತಹ ಸರ್ಕಾರವನ್ನೇ ಬೀಳಿಸಿದ್ದೇನೆ ಇದ್ಯಾವ ಲೆಕ್ಕ, ನಾಳೆಯಿಂದ ನನ್ನ ಆಟ ಶುರು ಮಾಡುತ್ತೇನೆ. ಇದು ರಮೇಶ್ ಜಾರಕಿಹೊಳಿಯವರ ಇವತ್ತಿನ ಹೇಳಿಕೆಗಳು ಪ್ರಕರಣದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಬಲ್ಲರು, ದಿಕ್ಕುತಪ್ಪಿಸಲು ಏನನ್ನೂ ಮಾಡಬಲ್ಲರು ಎನ್ನುವುದಕ್ಕೆ ಈ ಹೇಳಿಕೆಗಳು ಸಾಕ್ಷಿ. ಬಸವರಾಜ ಬೊಮ್ಮಯಿ ಅವರೇ ಇದಕ್ಕೆ ಅವಕಾಶ ನೀಡದಂತೆ ಕೂಡಲೇ ಬಂಧಿಸಿ’ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

‘ರಮೇಶ್ ಜಾರಕಿಹೊಳಿ ಪ್ರಭಾವ ಬೀರುವ ಎಲ್ಲಾ ಸಾಧ್ಯತೆಗಳು ಅವರ ಮಾತಿನಿಂದಲೇ ತಿಳಿಯುತ್ತಿದೆ. ಈ ಪ್ರಕರಣ ದೇಶದ ಗಮನ ಸೆಳೆದಿದ್ದು, ರಾಜ್ಯದ ಘನತೆಗೆ, ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದಿದ್ದಾಗಿದೆ. ಸರ್ಕಾರ ಆರೋಪಿಯ ರಕ್ಷಣೆಗೆ ನಿಂತು ಮತ್ತಷ್ಟು ರಾಜ್ಯದ ಮರ್ಯಾದೆ ಕಳೆಯದೆ, ಕೂಡಲೇ ಬಂಧಿಸುವ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.