ADVERTISEMENT

‘ಕೈ’ ಐದು ಗ್ಯಾರಂಟಿ; ಸಚಿವರಲ್ಲೇ ಭಿನ್ನರಾಗ

ಪರಿಷ್ಕರಣೆ ಅಗತ್ಯ–ಸತೀಶ * ಬದಲಿಸುವ, ಕತ್ತರಿಸುವ ಉದ್ದೇಶವಿಲ್ಲ– ಡಿಕೆಶಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 0:37 IST
Last Updated 15 ಆಗಸ್ಟ್ 2024, 0:37 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ, ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ವಿಚಾರದಲ್ಲಿ ಸಚಿವರು ಭಿನ್ನರಾಗ ತೆಗೆದಿದ್ದಾರೆ.

ಸದ್ಯ ಜಾರಿಯಲ್ಲಿರುವ ಸ್ವರೂಪದಲ್ಲಿಯೇ ಯೋಜನೆಗಳನ್ನು ಮುಂದುವರಿಸಬೇಕೆಂದು ಬಹುತೇಕ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಯೋಜನೆಗಳನ್ನು ಪರಿಷ್ಕರಿಸುವ ಅಗತ್ಯವಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಗ್ಯಾರಂಟಿ ಯೋಜನೆಗಳನ್ನು ಬದಲಿಸುವ ಅಥವಾ ಕತ್ತರಿ ಹಾಕುವ ಉದ್ದೇಶವಿಲ್ಲವೆಂದು ಮುಖ್ಯಮಂತ್ರಿ ಮತ್ತು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಆದರೆ, ಆದಾಯ ತೆರಿಗೆ ಪಾವತಿದಾರರು ಕೂಡ ಈ ಯೋಜನೆಗಳ ಲಾಭ ಪಡೆಯುತ್ತಿರುವ ಪ್ರಕರಣಗಳನ್ನು ಪರಿಶೀಲಿಸುತ್ತೇವೆ. ಗ್ಯಾರಂಟಿ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸಲು ಚಿಂತನೆ ನಡೆಸುತ್ತಿದ್ದೇವೆ’ ಎಂದಿದ್ದಾರೆ. 

ADVERTISEMENT

ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಎಲ್ಲ ಯೋಜನೆಗಳು ಮುಂದುವರಿಸಬೇಕೆಂದು ‘ಬಹಿರಂಗ’ವಾಗಿ ಹೇಳಿಕೆ ನೀಡುವ ಬಹುತೇಕ ಸಚಿವರು, ಶಾಸಕರು, ಆಂತರಿಕವಾಗಿ ಈ ಯೋಜನೆಯ ಸ್ವರೂಪ ಬದಲಿಸಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂಬ ಚರ್ಚೆ ಪಕ್ಷದೊಳಗೆ ಇದೆ. ಹೀಗಾಗಿ ‘ಗ್ಯಾರಂಟಿ’ಗಳ ಅನುಷ್ಠಾನಕ್ಕೆ ಕೆಲವು ಮಿತಿಗಳನ್ನು ಹಾಕುವ ಕುರಿತು ಸರ್ಕಾರದ ಹಂತದಲ್ಲಿ ಗಂಭೀರವಾದ ಚಿಂತನೆ ನಡೆಯುತ್ತಿದೆ.      

ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿದ್ದ ಸತೀಶ ಜಾರಕಿಹೊಳಿ, ಗ್ಯಾರಂಟಿ ಯೋಜನೆಗಳ ಸಾಧಕ– ಬಾಧಕ, ಲೋಪದೋಷಗಳ ಕುರಿತು ಮಾಹಿತಿ ನೀಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಸುರ್ಜೇವಾಲಾ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆ ಬೆನ್ನಲ್ಲೆ, ‘ಗ್ಯಾರಂಟಿ’ ಚರ್ಚೆ ಮುನ್ನೆಲೆಗೆ ಬಂದಿದೆ.

‘ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಿಲ್ಲ’

‘ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಕುರಿತು ಚರ್ಚೆ ಆಗುತ್ತಿರುವುದು ನಿಜ. ಶಾಸಕರು, ಕಾರ್ಯಕರ್ತರು ಸಾರ್ವಜನಿಕವಾಗಿ ಅಲ್ಲಲ್ಲಿ ಮಾತನಾಡಿರಬಹುದು. ಆದರೆ, ಪಕ್ಷದ ವೇದಿಕೆಯಲ್ಲಿ, ಸರ್ಕಾರದ ಹಂತದಲ್ಲಿ ಚರ್ಚೆ ಆಗಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

‘ಈಗಾಗಲೇ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹56 ಸಾವಿರ ಕೋಟಿ ಮೀಸಲಿಡಲಾಗಿದೆ. ಹೀಗಾಗಿ, ಯೋಜನೆಗಳನ್ನು ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ 13ರಷ್ಟು ಹೆಚ್ಚು ಮತ ಬಂದಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಹೆಚ್ಚು ಮತಗಳು ಬಂದಿವೆ ಎಂದು ಯಾಕೆ ವಿಶ್ಲೇಷಿಸಬಾರದು’ ಎಂದ ಅವರು, ‘ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸಬೇಕೆಂಬ ವಿಚಾರದಲ್ಲಿ ನನ್ನ ಅಭಿಪ್ರಾಯವೊಂದೇ ಮುಖ್ಯ ಆಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಹೋದರೆ ಗೊಂದಲ ಉಂಟಾಗುತ್ತದೆ’ ಎಂದರು.

‘ಹಾಲಿ ಸ್ವರೂಪದಲ್ಲೇ ಮುಂದುವರಿಕೆ’

‘ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದ್ದು, ಐದೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದರಿಂದಾಗಿ 1 ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ಹೀಗಾಗಿ, ಈ ಯೋಜನೆಗಳು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯಲಿವೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

‘ಈ ಯೋಜನೆಗಳಿಂದಾಗಿ ಹಣದ ಹರಿವು ನಿರಂತರವಾಗಿದ್ದು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಇದು ರಾಜ್ಯದ ಪ್ರಗತಿಗೂ ಪರೋಕ್ಷವಾಗಿ ಪ್ರಯೋಜನವಾಗುತ್ತಿದೆ. ನಾವು ಎಲ್ಲ ಸಮಾಜಮುಖಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಆರ್ಥಿಕ ಲಾಭ ನಷ್ಟದಿಂದ ನೋಡಬಾರದು’ ಎಂದು ಅಭಿಪ್ರಾಯಪಟ್ಟರು.

‘ಗ್ಯಾರಂಟಿ ದುರ್ಬಳಕೆ ತಪ್ಪಿಸಬೇಕಿದೆ’

‘ಗ್ಯಾರಂಟಿಗಳ ದುರ್ಬಳಕೆ ಆಗುವುದನ್ನು ತಪ್ಪಿಸಬೇಕಿದೆ. ಕೆಲವು ಅನರ್ಹರು ಕೂಡಾ ಈ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

‘ಈ ಯೋಜನೆಗಳನ್ನು ನಿಲ್ಲಿಸಲು ಆಗುವುದಿಲ್ಲ. ಮುಂದೆಯೂ ನಿಲ್ಲುವುದಿಲ್ಲ. ಪರಿಷ್ಕರಿಸಬೇಕೊ, ಬೇಡವೊ ಎನ್ನುವುದನ್ನು ಸರ್ಕಾರ ಮಾತ್ರ ನಿರ್ಧರಿಸಲು ಸಾಧ್ಯ. ಈ ಯೋಜನೆಗಳ ಬಗೆಗಿನ ಸಚಿವರ ಅಭಿಪ್ರಾಯಗಳು ವೈಯಕ್ತಿಕ’ ಎಂದರು.

‘ಯೋಜನೆಗಳು ಮುಂದುವರಿಯಬೇಕು’

‘ಗ್ಯಾರಂಟಿ ಯೋಜನೆಗಳು ಮುಂದುವರಿಯಬೇಕು. ಯಾವ ಸಚಿವರೂ ಇದರ ವಿರುದ್ಧ ಇಲ್ಲ. ಈ ಯೋಜನೆಗಳಿಂದ ಬಡವರಿಗೆ, ಗ್ರಾಮೀಣ ಜನರಿಗೆ ಬಹಳ ಅನುಕೂಲ ಆಗುತ್ತಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

‘ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಈ ಯೋಜನೆಗಳಿಗೆ ಹಣ ಮೀಸಲಿಟ್ಟ ಕಾರಣಕ್ಕೆ ಯಾವುದಾದರೂ ರಸ್ತೆಯ ಕೆಲಸ ನಿಂತಿದೆಯೇ, ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆಯೇ’ ಎಂದೂ ಪ್ರಶ್ನಿಸಿದರು.

ಸತೀಶ ಜಾರಕಿಹೊಳಿ
ಜಿ.ಪರಮೇಶ್ವರ
ಆರ್. ಅಶೋಕ
‘ಫಲಾನುಭವಿಗಳಿಗೆ ಗುರುತಿನ ಚೀಟಿ’ ‌‘
ಹೆಚ್ಚು ಆದಾಯ ಇರುವವರು ತೆರಿಗೆ ಪಾವತಿದಾರರು ಕೂಡ ಗ್ಯಾರಂಟಿ ಯೋಜನೆಗಳನ್ನು ಪಡೆಯುತ್ತಿದ್ದಾರೆಂದು ಕೆಲವರು ದೂರಿದ್ದಾರೆ. ಅಂತಹ ಪ್ರಕರಣಗಳನ್ನು ಪರಿಶೀಲಿಸಲಾಗುವುದು. ಈ ಯೋಜನೆಗಳ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸಲು ಆಲೋಚಿಸುತ್ತಿದ್ದೇವೆ. ಈ ವಿಚಾರವಾಗಿ ಗ್ಯಾರಂಟಿ ಸಮಿತಿ ಪರಿಶೀಲನೆ ಮಾಡಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ‘ಗ್ಯಾರಂಟಿ ಯೋಜನೆಗಳಿಂ‌ದಾಗಿ ಶಾಸಕರಿಗೆ ನೀಡುವ ಅನುದಾನ ಕೊರತೆಯಾಗಿದೆ ಎಂದು ಸಚಿವರು ಅಸಮಾಧಾನಗೊಂಡಿದ್ದಾರೆ’ ಎಂದು ಹೇಳಿದಾಗ ‘ಅದೆಲ್ಲ‌ ಸುಳ್ಳು ನಮ್ಮ ಸರ್ಕಾರ ಇಂತಹ ದೊಡ್ಡ ಯೋಜನೆ ಜಾರಿ ಮಾಡಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದವರು ಅಸೂಯೆಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲವೆಂದು ಯಾವ ಸಚಿವರೂ ಹೇಳಿಲ್ಲ’ ಎಂದರು. ‘ಬಿಜೆಪಿಯವರು ನೂರು ಜನ್ಮ ಎತ್ತಿಬಂದರೂ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದೂ ಹೇಳಿದರು.
‘ಮಿತಿ ಹಾಕಿದರೆ ₹10 ಸಾವಿರ ಕೋಟಿ ಉಳಿತಾಯ’
‘ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ನಾನು ಹೈಕಮಾಂಡ್‌ಗೆ ಹೇಳಿಲ್ಲ. ಬದಲಾಗಿ ಕೆಲವು ಮಿತಿಗಳನ್ನು ಹೇರಬೇಕೆಂದು ಸಲಹೆ ನೀಡಿದ್ದೇನೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು ‘ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮಾತ್ರ ಯೋಜನೆ ನೀಡಿ ಶ್ರೀಮಂತರನ್ನು ಹೊರಗಿಡಬೇಕು. ಇದರಿಂದ ವಾರ್ಷಿಕ ₹10 ಸಾವಿರ ಕೋಟಿ ಉಳಿತಾಯ ಆಗಲಿದೆ. ಸದ್ಯ ಅಮೆರಿಕ ಮೂಲದ ವೈದ್ಯರು ಕೂಡಾ ಯೋಜನೆಯ ಲಾಭ ಪಡೆಯುತ್ತಿದ್ದಾರೆ’ ಎಂದರು. ‘ಗ್ಯಾರಂಟಿ’ಗಳು ಬಡವರಿಗೆ ತಲುಪಬೇಕು ಶ್ರೀಮಂತರಿಗೆ ಬೇಡ ಎಂದು ಜನರು ಹೇಳುತ್ತಿದ್ದಾರೆ. ಜನರ ಅಭಿಪ್ರಾಯವನ್ನು ಹೈಕಮಾಂಡ್‌ಗೆ ವಿವರವಾಗಿ ತಿಳಿಸಿದ್ದೇನೆ. ಯೋಜನೆಗಳ ಪರಿಷ್ಕರಣೆಯಿಂದ ಸರ್ಕಾರದ ಜನಪ್ರಿಯತೆ ಹೆಚ್ಚಲಿದೆ’ ಎಂದರು. ‘ರಾಜ್ಯದಲ್ಲಿ ಶೇ 82ರಷ್ಟು ಬಿಪಿಎಲ್ ಕುಟುಂಬಗಳಿವೆ. ಆ ಕುಟುಂಬಗಳು ಗ್ಯಾರಂಟಿಗಳ ಪ್ರಯೋಜನ ಪಡೆಯಬೇಕೆಂಬುದು ಗುರಿ. ಹೀಗಾಗಿ ಈ ಯೋಜನೆಗಳ ಬಗ್ಗೆ ಸಮಗ್ರ ಪರಾಮರ್ಶೆಯ ಅಗತ್ಯವಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.
ಸಂಪನ್ಮೂಲವೇ ಇಲ್ಲದೆ ಗ್ಯಾರಂಟಿ ಜಾರಿ: ಅಶೋಕ್ ವ್ಯಂಗ್ಯ
ಕಾಂಗ್ರೆಸ್ ಸರ್ಕಾರ ‘ಸಂಪನ್ಮೂಲ’ದ ಗ್ಯಾರಂಟಿಯೇ ಇಲ್ಲದೇ ಜನರಿಗೆ ಟೋಪಿ ಹಾಕಲು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಈಗ ಕಾಂಗ್ರೆಸ್‌ ಪಕ್ಷದ ಶಾಸಕರೇ ಸರ್ಕಾರಕ್ಕೆ ಧಿಕ್ಕಾರ ಹಾಕುವ ಸ್ಥಿತಿಗೆ ಬಂದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಯಾವುದೇ ಪಕ್ಷದ ಸರ್ಕಾರ ಬಂದರೂ ಸಾಲ ಮಾಡಲೇಬೇಕು. ಆದರೆ ಈಗಿನ ಸ್ಥಿತಿಯಲ್ಲಿ ಸರ್ಕಾರ ಬಳಿ ಹಣವೇ ಇಲ್ಲ. ಆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ’ ಎಂದರು. ಹಣಕಾಸು ಸ್ಥಿತಿಯನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬೆಸ್ಕಾಂ ಹಾಗೂ ವಿವಿಧ ಇಲಾಖೆಗಳು ನಷ್ಟದಲ್ಲಿವೆ ಎಂದು ಅವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.