ADVERTISEMENT

ನಾನು, ಸಿಎಂ ಕದ್ದು ಮುಚ್ಚಿ ಮಾತನಾಡಿಲ್ಲ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 16:06 IST
Last Updated 10 ಫೆಬ್ರುವರಿ 2026, 16:06 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ‘ನಾನು ಮತ್ತು ಸಿದ್ದರಾಮಯ್ಯ ಅವರು ಕದ್ದು ಮುಚ್ಚಿ ಮಾತನಾಡಿಲ್ಲ. ನಮ್ಮ ಪಕ್ಷದ ವರಿಷ್ಠರು  ಸೇರಿಕೊಂಡೇ ಮಾತನಾಡಿದ್ದೆವು‘ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು. 

ಅಧಿಕಾರ ಹಂಚಿಕೆಯ ಗೊಂದಲವನ್ನು ಹೈಕಮಾಂಡ್ ಬೇಗ ಇತ್ಯರ್ಥ ಮಾಡಬೇಕು ಎಂದು ಕೆಲವು ಸಚಿವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಯಾವ ಗೊಂದಲವೂ ಇಲ್ಲ. ಗೊಂದಲ ಬೇರೆಯವರಿಗೆ ಇರಬಹುದು. ನಾನು ಹಾಗೂ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದೇವೆ ಎಂಬುದು ನಮಗೆ ಗೊತ್ತು. ಬೇರೆಯವರೆಲ್ಲ ಇದಕ್ಕೆ ಟೆನ್ಶನ್‌ ತೆಗೆದುಕೊಳ್ಳುವುದು, ಹೇಳಿಕೆ ನೀಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ‌’ ಎಂದರು.

‘ದೆಹಲಿಗೆ ಹೋದ ಮೇಲೆ ಯಾರು ಸಿಗುತ್ತಾರೋ ಆ ನಾಯಕರನ್ನು ಭೇಟಿ ಮಾಡಲಾಗುವುದು. ಜನರ ಕಷ್ಟಗಳನ್ನು ಬಗೆಹರಿಸಲು ಹಲವು ಕಷ್ಟ ಕಾರ್ಪಣ್ಯಗಳು, ಅಡಚಣೆಗಳು, ತೊಡಕುಗಳು ಇದ್ದೇ ಇರುತ್ತವೆ. ಟೀಕೆಗಳು ಬರುತ್ತಲೇ ಇರುತ್ತವೆ. ನಮ್ಮ ಕೆಲಸವನ್ನು ಮುಂದುವರಿಸಬೇಕು’ ಎಂದರು. 

ADVERTISEMENT

‘ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಅದನ್ನು ಎಲ್ಲರೂ ಪಾಲನೆ ಮಾಡಬೇಕು. ನನ್ನ ಪರ, ವಿರುದ್ಧ ಸಚಿವರು, ಶಾಸಕರು ನೀಡುತ್ತಿರುವ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುತ್ತವೆಯೇ ಹೊರತು, ಒಳ್ಳೆಯದನ್ನು ಮಾಡುವುದಿಲ್ಲ’ ಎಂದು ಹೇಳಿದರು.

‘ನಾವು ಮಾತನಾಡಿದರೆ ನೋಟಿಸ್‌ ನೀಡುತ್ತಾರೆ. ಯತೀಂದ್ರ ಮಾತನಾಡಿದರೆ ಏಕೆ ನೀಡುವುದಿಲ್ಲ’ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಅವರ ಮಾತಿಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಈ ಬಗ್ಗೆ ಹೈಕಮಾಂಡ್‌ ನಾಯಕರನ್ನೇ ಕೇಳೋಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.