ಸಿದ್ದರಾಮಯ್ಯ, ಡಿಕೆಶಿ
ಸಾಂದರ್ಭಿಕ ಚಿತ್ರ
ನವದೆಹಲಿ: ಹೈಕಮಾಂಡ್ ಹೆಣೆದಿರುವ ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ, ನವೆಂಬರ್ ವೇಳೆಗೆ ಮುಖ್ಯಮಂತ್ರಿ ಸ್ಥಾನ ದಕ್ಕಲಿದೆ ಎಂಬ ನಿರೀಕ್ಷೆಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಭವನದಲ್ಲಿರುವ ಮುಖ್ಯಮಂತ್ರಿ ಅವರಿಗೆ ಮೀಸಲಿಟ್ಟಿರುವ ಸ್ವೀಟ್ ರೂಮಿನಲ್ಲಿ ಈಗಾಗಲೇ 'ದರ್ಬಾರ್' ಆರಂಭಿಸಿದ್ದಾರೆ.
ಚಾಣಕ್ಯಪುರಿಯಲ್ಲಿ ನೂತನ ಕರ್ನಾಟಕ ಭವನ ಏಪ್ರಿಲ್‌ನಲ್ಲಿ ಉದ್ಘಾಟನೆಯಾಗಿದೆ. ಇದರಲ್ಲಿ ಎರಡು ವಿವಿಐಪಿ ಸ್ವೀಟ್ ರೂಮ್‌ಗಳಿವೆ. ಇದರಲ್ಲಿ ಒಂದು ಸ್ವೀಟ್ ಮುಖ್ಯಮಂತ್ರಿ ಅವರಿಗೆ ಮೀಸಲಾಗಿದೆ. ಭವನದ ಉದ್ಘಾಟನೆಯ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೊಠಡಿಯಲ್ಲಿ ತಂಗಿದ್ದರು. ಶೌಚಾಲಯ ಕಿರಿದಾಗಿರುವ ಕಾರಣ ಹಾಗೂ ಸರಿಯಾಗಿ ನಿದ್ದೆ ಬಾರದ ಕಾರಣ ಅಲ್ಲಿ ತಂಗುವುದನ್ನು ನಿಲ್ಲಿಸಿದ್ದರು. ಆ ಬಳಿಕ ನಾಲ್ಕೈದು ಸಲ ಬಂದಾಗಲೂ ಅವರು ತಂಗಿದ್ದು ಹಳೆಯ ಕರ್ನಾಟಕ ಭವನದಲ್ಲೇ.
ಈ ವಿಷಯ ತಿಳಿದ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಲ್ಲಿ ಪ್ರಶ್ನಿಸಿದ್ದಾರೆ. ‘ನಂಗೆ ಆ ಕೊಠಡಿ ಹೊಂದಾಣಿಕೆ ಆಗುತ್ತಿಲ್ಲಪ್ಪ. ಹಾಗಾಗಿ, ಹಳೆಯ ಭವನದಲ್ಲೇ ಉಳಿಯುತ್ತೇನೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ‘ನಾನು ಹೊಸ ಸ್ವೀಟ್ ರೂಮ್ ಬಳಸಲೇ’ ಎಂದು ಶಿವಕುಮಾರ್ ಕೇಳಿದ್ದಾರೆ. ಅದಕ್ಕೆ ಸಿದ್ದರಾಮಯ್ಯ, ‘ಧಾರಾಳವಾಗಿ’ ಎಂದಿದ್ದಾರೆ. ಕೇಂದ್ರ ಸಚಿವರನ್ನು ಭೇಟಿ ಮಾಡಲು ನವದೆಹಲಿಗೆ ಮಂಗಳವಾರ ಬಂದ ಶಿವಕುಮಾರ್ ಅವರು ಈ ಸ್ವೀಟ್ ರೂಮಿನಲ್ಲೇ ಉಳಿದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.