ADVERTISEMENT

ಎದುರಿಗೆ ಕೊರೊನಾ ಬಿಟ್ಟು ಹಿಂದಿನಿಂದ ಬೆಲೆ ಏರಿಕೆ ಮಾಡುತ್ತಿರುವ ಮೋದಿ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 23 ಮೇ 2021, 8:26 IST
Last Updated 23 ಮೇ 2021, 8:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಎದುರಿಗೆ ಕೊರೊನಾ ವೈರಸ್ ಬಿಟ್ಟು ಹಿಂದಿನಿಂದ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಚೂರಿ ಹಾಕುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ತೈಲ ಬೆಲೆ ಏರಿಕೆ ಖಂಡಿಸಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಕೊರೊನಾ ಒಂದೇ ದೇಶವನ್ನು ಕಾಡುತ್ತಿಲ್ಲ. ಬಿಜೆಪಿಯ ತೆರಿಗೆ ಭಯೋತ್ಪಾದನೆಯೂ ಸಂಕಷ್ಟದಲ್ಲಿರುವ ಜನತೆಯನ್ನು ಮತ್ತಷ್ಟು ಕಾಡುತ್ತಿದೆ. ಆರ್ಥಿಕತೆ ನೆಲಕಚ್ಚಿರುವಾಗ ಇಂಧನ ಬೆಲೆ ಏರಿಕೆ ಆರ್ಥಿಕ ಚಟುವಟಿಕೆಗಳಿಗೆ ಬಹುದೊಡ್ಡ ಪೆಟ್ಟು ಕೊಡಲಿದೆ’ ಎಂದು ಕಿಡಿಕಾರಿದೆ.

‘ಸೇನಾಧಿಕಾರಿಯೊಬ್ಬರು ವೈದ್ಯಕೀಯ ಸವಲತ್ತುಗಳಿಗಾಗಿ ಚಿತ್ರನಟನ ಸಹಾಯ ಕೇಳುತ್ತಾರೆ ಎಂದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವೈಫಲ್ಯ ಎಷ್ಟಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ದೇಶದ ಜನತೆ ಸರ್ಕಾರದ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಂಡು ಜಗತ್ತಿನೆದುರು ಬೆತ್ತಲಾಗಿರುವಾಗ ಸುಳ್ಳಿನ ‘ಟೂಲ್‌ಕಿಟ್‌’ ರಾಜಕಾರಣಕ್ಕಿಳಿದಿದ್ದು ಹಾಸ್ಯಾಸ್ಪದ’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್‌ ಮಾಡಿದೆ.

ADVERTISEMENT

‘ಮನುವಾದಿ ಸಿದ್ಧಾಂತದ ಬಿಜೆಪಿ ದಲಿತ, ಹಿಂದುಳಿದ ವರ್ಗಗಳನ್ನು ಮತ್ತೊಮ್ಮೆ ಶೋಷಣೆಯ ವಾತಾವರಣಕ್ಕೆ ಕೊಂಡೊಯ್ಯುತ್ತಿದೆ. ಬಿಜೆಪಿ ಶಾಸಕನಿಂದ ಹಲ್ಲೆಗೊಳಪಟ್ಟ ದಲಿತ ಮಹಿಳೆ ಚಾಂದಿನಿ ನಾಯಕ್ ಅವರಿಗೆ ನ್ಯಾಯ ಸಿಗಲಿಲ್ಲ. ಶಾಸಕನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಇದು ಬಿಜೆಪಿಯ ದಲಿತ ಹಾಗೂ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.