ADVERTISEMENT

ನನ್ನ ಸ್ಪರ್ಧೆ ನಿರ್ಧರಿಸುವವರು ಕ್ಷೇತ್ರದ ಜನ: ಡಿಕೆಶಿ ಭೇಟಿ ಬಳಿಕ ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 20:19 IST
Last Updated 7 ಅಕ್ಟೋಬರ್ 2020, 20:19 IST
ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ   

ಬೆಂಗಳೂರು: ‘ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆಯನ್ನು ನಿರ್ಧರಿಸುವವವರು ಚಾಮುಂಡೇಶ್ವರಿ ಕ್ಷೇತ್ರದ ಜನರು’ ಎಂದು ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ‘ನಾನು ಉಪ ಮುಖ್ಯಮಂತ್ರಿ ಆಗುವುದಿದ್ದರೆ ಬಿಜೆಪಿಯಿಂದಲೇ ಆಗಬಹುದಿತ್ತು. ಬಿಜೆಪಿ ನನಗೆ ಆಫರ್ ನೀಡಿತ್ತು’ ಎಂದರು.

‘ನಾವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಐದು ವರ್ಷ ಅವರೇ ಇರಬೇಕು ಎಂದೂ ಬಯಸಿದ್ದೆವು. ನಾವೇ ಮುಖ್ಯಮಂತ್ರಿ ಮಾಡಿ ನಾವೇ ಇಳಿಸಲು ಪ್ರಯತ್ನ ಮಾಡುತ್ತಿದ್ದೆವಾ‘ ಎಂದೂ ಅವರು ಪ್ರಶ್ನಿಸಿದರು.

ADVERTISEMENT

ದಾಳಿ ತಪ್ಪು: ‘ಉಪ ಚುನಾವಣೆ ಸಮಯದಲ್ಲಿ ಡಿ.ಕೆ. ಶಿವಕುಮಾರ್ ಮನೆಗೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು ತಪ್ಪು. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದ ಅವರು, ‘ನಾನು ಮತ್ತು ಶಿವಕುಮಾರ್ ಸ್ನೇಹಿತರು. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ದೆವು. ಜೆಡಿಎಸ್‌–ಕಾಂಗ್ರೆಸ್‌ನಿಂದ ದೂರ ಸರಿದಿದ್ದ ಶಾಸಕರ ಮನ‌ವೊಲಿಸಲು ಮುಂಬೈಗೂ ಹೋಗಿದ್ದೆವು. ಶಿವಕುಮಾರ್ ಪತ್ನಿ ಮೈಸೂರಿನವರು. ಭೇಟಿ ಮಾಡಿ ಧೈರ್ಯ ಹೇಳಲು ಬಂದೆ’ ಎಂದರು.

‘ಕಷ್ಟ ಕಾಲದಲ್ಲಿ ಇಂಥವರೆಲ್ಲಾ (ಜಿ.ಟಿ. ದೇವೇಗೌಡ) ಜತೆ ನಿಂತಿರುವುದು ನನ್ನ ಭಾಗ್ಯ. ರಾಜಕಾರಣ ಬೇರೆ, ಸ್ನೇಹ- ವಿಶ್ವಾಸ ಬೇರೆ. ನಾನು ನೋವಿನಲ್ಲಿದ್ದೇನೆ ಎಂಬುದನ್ನು ಅರಿತು ಅವರು ಸಮಾಧಾನ ಹೇಳಲು ಬಂದಿದ್ದಾರೆ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಪ್ರಚಾರಕ್ಕೆ ಸಿಬಿಐ ದಾಳಿ ಬಳಸಿಕೊಳ್ಳಲ್ಲ: ಡಿಕೆಶಿ

‘ನಮ್ಮ ಮನೆ ಮೇಲೆ ಸಿಬಿಐ ದಾಳಿ ನಡೆದಿರುವುದನ್ನೇ ಮುಂದಿಟ್ಟು ಚುನಾವಣೆಗೆ ಹೋಗುವುದಿಲ್ಲ. ರಾಜ್ಯದ ಮತದಾರರು ಎಲ್ಲವನ್ನೂ ನೋಡುತ್ತಿದ್ದಾರೆ. ಸರ್ಕಾರಕ್ಕೆ ಯಾವ ಸಂದೇಶ ಹೋಗಬೇಕೊ ಅದನ್ನು ಜನರೇ ಕೊಡುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆರ್.ಆರ್. ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆಗೆ ಕೆಪಿಸಿಸಿ ಶಿಫಾರಸು ಮಾಡಿದ್ದ ಅಭ್ಯರ್ಥಿಗಳನ್ನು ಒಪ್ಪಿ, ಹೈಕಮಾಂಡ್ ಅಧಿಕೃತವಾಗಿ ಪ್ರಕಟಿಸಿದೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ‘ಡಿ.ಕೆ. ಶಿವಕುಮಾರ್ ಮೇಲೆ ನಡೆದ ಸಿಬಿಐ ದಾಳಿಯನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನೂ ಜನರಿಗೆ ತಿಳಿಸುತ್ತೇವೆ. ಎರಡೂ ಕ್ಷೇತ್ರಗಳಲ್ಲೂ ‌ಗೆದ್ದು ಬರುತ್ತೇವೆಂಬ ವಿಶ್ವಾಸವಿದೆ’ ಎಂದರು.

ಸಿ.ಎಂ- ಮುನಿರತ್ನ ಭೇಟಿ

ಆರ್‌.ಆರ್‌.ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಮುನಿರತ್ನ ಅವರು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಟಿಕೆಟ್‌ ಕುರಿತು ಚರ್ಚಿಸಿದರು. ಮುನಿರತ್ನ ಪರವಾಗಿ ಜಾರಕಿಹೊಳಿ ಮಾತುಕತೆ ನಡೆಸಿ, ವರಿಷ್ಠರ ಜತೆ ಟಿಕೆಟ್‌ಗಾಗಿ ಮಾತನಾಡುವಂತೆ ಒತ್ತಾಯಿಸಿದರು.

ಮುನಿರತ್ನ ಅವರಿಗೆ ಟಿಕೆಟ್‌ ಸಿಗುವುದರಲ್ಲಿ ಸಂಶಯಬೇಡ. ವರಿಷ್ಠರ ಜತೆಗೂ ಮಾತನಾಡಿದ್ದೇನೆ ಎಂಬುದಾಗಿ ಯಡಿಯೂರಪ್ಪ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ತಾರಾ ಪ್ರಚಾರಕರ ಸಂಖ್ಯೆ ಕಡಿತ

ಕೋವಿಡ್‌–19 ಕಾರಣ ವಿಧಾನಸಭಾ ಉಪಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಚುನಾವಣಾ ತಾರಾ ಪ್ರಚಾರಕರ ಸಂಖ್ಯೆಯನ್ನು 40 ರಿಂದ 30 ಕ್ಕೆ ಇಳಿಸಲು ಚುನಾವಣಾ ಆಯೋಗ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಪಕ್ಷಗಳಲ್ಲದ ಸಣ್ಣ ಪಕ್ಷಗಳು 15 ಜನ ಪ್ರಚಾರಕರನ್ನು ಮಾತ್ರ ಬಳಸಬೇಕು. ತಾರಾ ಪ್ರಚಾರಕರು ಯಾರು ಎಂಬುದನ್ನು ಅಧಿಸೂಚನೆ ಹೊರಡಿಸಿದ 10 ದಿನಗಳಲ್ಲಿ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಬೇಕು. ಈಗಾಗಲೇ ಪಟ್ಟಿ ಸಲ್ಲಿಸಿದ್ದರೆ, ಮತ್ತೊಮ್ಮೆ ಸಲ್ಲಿಸಬೇಕು.

ಅಲ್ಲದೆ, ಪ್ರಚಾರಕ್ಕೆ ತೆರಳುವುದಕ್ಕೆ 48 ಗಂಟೆಗಳ ಮೊದಲು ಆಯೋಗದಿಂದ ಅನುಮತಿ ಪಡೆಯಬೇಕು ಎಂದೂ ಸೂಚಿಸಿದೆ. ಕೋವಿಡ್‌ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಲು ಚುನಾವಣಾ ಪ್ರಚಾರ ಮತ್ತು ಸಾರ್ವಜನಿಕ ಭಾಷಣ ನಡೆಸುವ ಸ್ಥಳಗಳನ್ನು ಗುರುತಿಸಲು ಜಿಲ್ಲಾ ಆಡಳಿತಗಳಿಗೆ ಸೂಚಿಸಿದ್ದು, ಸ್ಥಳಗಳನ್ನು ಗುರುತಿಸಿವೆ ಎಂದೂ ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.