ADVERTISEMENT

ಬೆನ್ನಿಗೆ ಚೂರಿ ಹಾಕಿದ ಲಖನ್: ಸೋದರರ ವಿರುದ್ಧ ರಮೇಶ ಜಾರಕಿಹೊಳಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:29 IST
Last Updated 1 ಡಿಸೆಂಬರ್ 2019, 11:29 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಸತೀಶ ಜಾರಕಿಹೊಳಿ ತನ್ನ ಪಕ್ಷ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾನೆ. ಅದು ಅವನ ಜವಾಬ್ದಾರಿ. ಆದರೆ, ಲಖನ್ ಜಾರಕಿಹೊಳಿ ದೊಡ್ಡ ದ್ರೋಹಿ. ಬೆನ್ನಿಗೆ ಚೂರಿ ಹಾಕಿದ’ ಎಂದು ಅನರ್ಹ ಶಾಸಕ, ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಸೋದರನ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಡಿ. 5ರವರೆಗೂ ಲಖನ್ ನನ್ನ ತಮ್ಮನಲ್ಲ. ಅವನು ವಿರೋಧಿ. ಚುನಾವಣೆ ನಂತರವಷ್ಟೇ ತಮ್ಮ. ಮುಂದೆ ಸ್ಪರ್ಧಿಸು ಈ ಬಾರಿ ಬೇಡ ಎಂದು ಕೋರಿದರೂ ಹಿಂದೆ ಸರಿದಿಲ್ಲ. 2008ರ ಚುನಾವಣೆಯಲ್ಲಿ ಸೋದರನೊಬ್ಬ (ಭೀಮಶಿ) ಸೋತಿದ್ದು ಗೊತ್ತಿದ್ದೂ ಬಾವಿಯಲ್ಲಿ ಬೀಳುತ್ತಿರುವುದಕ್ಕೆ ಕೆಟ್ಟದೆನಿಸುತ್ತಿದೆ’ ಎಂದು ಹೇಳಿದರು.

‘ಒಂದು ಮತವೋ, ಲಕ್ಷದ ಅಂತರವೋ ಗೆದ್ದೇ ಗೆಲ್ಲುತ್ತೇನೆ. ನನಗೆ ಮೋಸ ಮಾಡಿದ ಲಖನ್‌ಗೆ ದೇವರು ಬುದ್ಧಿ ಕೊಡಲಿ’ ಎಂದರು.

ADVERTISEMENT

ಒಂದೇ ವಿಮಾನದಲ್ಲಿ ಬಂದರೂ ಸತೀಶ ಜೊತೆ ಮಾತನಾಡಲಿಲ್ಲ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘40 ವರ್ಷಗಳಿಂದಲೂ ಸತೀಶನೊಂದಿಗೆ ಮಾತಾಡಿಲ್ಲ. ಮುಂದೆಯೂ ಮಾತನಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಸಿಲುಕಿಸಲು ಯತ್ನಿಸಿದ್ದರು:‌‘ವಿರೋಧಿಗಳು, ಕುತಂತ್ರಿಗಳು ಕಾನೂನು ವ್ಯಾಪ್ತಿಯಲ್ಲಿ ನನ್ನನ್ನು ಸಿಲುಕಿಸಲು ಪ್ರಯತ್ನಿಸಿದ್ದರು. ಹೀಗಾಗಿ, ನಾನು ಬಹಳ ಮಾತನಾಡಿರಲಿಲ್ಲ. ನಿಮ್ಮೊಂದಿಗೂ (ಪತ್ರಕರ್ತರೊಂದಿಗೆ) ಸಿಟ್ಟಾಗಿದ್ದೆ. ಕ್ಷಮಿಸಿ’ ಎಂದು ಕೋರಿದರು.

‘ದೇವರು ಹಾಗೂ ಜನರ ಆಶೀರ್ವಾದ ಇರುವುದರಿಂದ ನನ್ನನ್ನು ಸೋಲಿಸಲಾಗದು. ಕುತಂತ್ರದಿಂದ ಸೋಲಿಸಬೇಕಷ್ಟೆ. ಎಲ್ಲವನ್ನೂ ಜನರ ತೀರ್ಮಾನಕ್ಕೆ ಬಿಡುತ್ತೇನೆ. ವಿರೋಧಿಗಳು ಭ್ರಷ್ಟಾಚಾರದ ಬಗ್ಗೆ ಏನು ಮಾತನಾಡುತ್ತಾರೋ ನೋಡೋಣ’ ಎಂದು ಸವಾಲು ಹಾಕಿದರು.

‘ಚುನಾವಣೆ ಸಿದ್ಧತೆ ಬಗ್ಗೆ ನನಗೆ ಗೊತ್ತಿಲ್ಲ. ಕಾರ್ಯಕರ್ತರು ಮಾಡಬೇಕು. ವಿರೋಧಿ ಸಣ್ಣವನೋ, ದೊಡ್ಡವನೋ? ವಿರೋಧಿಗಳಿಗಿಂತಲೂ ಪ್ರಬಲವಿದ್ದೇನೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ನಾಯಕ. ನನ್ನ ಪರ ಕೆಲಸ ಮಾಡುವುದು ಅವರ ಜವಾಬ್ದಾರಿ’ ಎಂದು ಪ್ರತಿಕ್ರಿಯಿಸಿದರು.

ಶಂಕರ್‌ ಮಂತ್ರಿ ಮಾಡುವುದು ನನ್ನ ಜವಾಬ್ದಾರಿ:‘ಅನರ್ಹ ಶಾಸಕ ಆರ್. ಶಂಕರ್‌ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎದುರು ಎರಡು ರೀತಿ ಮಾತನಾಡಿದ್ದರು. ಹೀಗಾಗಿ, ಟಿಕೆಟ್‌ ತಪ್ಪಿದೆ. ಅವರನ್ನು ಮಂತ್ರಿ ಮಾಡಿಸುವುದು ನನ್ನ ಜವಾಬ್ದಾರಿ’ ಎಂದು ತಿಳಿಸಿದರು.

‘ಮಹೇಶ ಕುಮಠಳ್ಳಿ ಪರ ಪ್ರಚಾರಕ್ಕೆಂದು ಅಥಣಿಗೆ ಹೋಗುವ ಅಗತ್ಯವಿಲ್ಲ. ಅಲ್ಲಿ ಬಹಳಷ್ಟು ಕಾರ್ಯಕರ್ತರಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಮೈತ್ರಿ ಸರ್ಕಾರ ಪತನದ ರಹಸ್ಯ
ಮೈಸೂರು/ಬೆಳಗಾವಿ:
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪತನಕ್ಕೆ ನೈಜ ಕಾರಣಗಳನ್ನು ಅನರ್ಹ ಗೊಂಡಿರುವ ಶಾಸಕರು ಬಹಿರಂಗಪಡಿಸಲಾರಂಭಿದ್ದಾರೆ. ಮೈಸೂರಿನಲ್ಲಿ ಅಡಗೂರು ಎಚ್‌.ವಿಶ್ವನಾಥ್‌ ಮತ್ತು ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಮತ್ತಷ್ಟು ವಿವರ ಬಹಿರಂಗಪಡಿಸಿದ್ದಾರೆ.

ಮೈಸೂರಿನಲ್ಲಿ ವಿಶ್ವನಾಥ್‌ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲು 17 ಶಾಸಕರ ರಾಜೀನಾಮೆ ಕಾರಣ ಎನ್ನುವುದಕ್ಕಿಂತಲೂ ಹೆಚ್ಚಾಗಿ, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರೇ ಸರ್ಕಾರ ಬೀಳಲು ಕಾರಣೀಭೂತರು’ ಎಂದಿದ್ದಾರೆ.

‘ಮೂವರು ಬರ್ತಾರೆ, ಹೋಗ್ತಾರೆ. ಇದರಿಂದ ಯಾವುದೇ ಸಾಧನೆ ಆಗದು. ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೀವೇ ಮುಂದೆ ನಿಲ್ಲಿ’ ಎಂದು ಪ್ರಸಾದ್‌ ಕೇಳಿಕೊಂಡಿದ್ದರಿಂದ ರಾಜೀನಾಮೆ ನೀಡಿದ್ದಾಗಿ ಅವರು ತಿಳಿಸಿದರು.

‘ಕಾಂಗ್ರೆಸ್‌ ಧುರೀಣರ ಸೊಕ್ಕಿನ ಮನೋಭಾವ, ದುರಹಂಕಾರದಿಂದ ಸಮ್ಮಿಶ್ರ ಸರ್ಕಾರ ಪತನವಾಗಿದೆಯೇ ಹೊರತು ಬಿಜೆಪಿಯವರ ಅಧಿಕಾರ ದಾಹದಿಂದಲ್ಲ. ಸಿದ್ದರಾಮಯ್ಯ ಅವರ ದರ್ಪದ ಮಾತುಗಳು, ಕೊಬ್ಬು ಮತ್ತು ಡಿ.ಕೆ.ಶಿವಕುಮಾರ್‌ ಭ್ರಷ್ಟಾಚಾರದಿಂದ ಸರ್ಕಾರ ಬಿದ್ದಿದೆ’ ಎಂದು ರಮೇಶ ಜಾರಕಿಹೊಳಿ ಗೋಕಾಕದಲ್ಲಿ ತಿಳಿಸಿದರು.

‘2018ರಲ್ಲಿ ಗೆದ್ದ ಬಳಿಕ ಜಿಲ್ಲೆಯ ಕಾಂಗ್ರೆಸ್ ಶಾಸಕರು ನನ್ನ ವಿರುದ್ಧ ಕುತಂತ್ರ ಮಾಡಿದರು. ಡಿ.ಕೆ.ಶಿವಕುಮಾರ್‌ ಕೈಯಲ್ಲೇ ಕಾಂಗ್ರೆಸ್‌ ಇತ್ತು. ಬಿಡದಿಯ ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದಾಗಲೇ ಸರ್ಕಾರ ಕೆಡವಬೇಕೆಂದು ನಿರ್ಧರಿಸಿದ್ದೆ’ ಎಂದರು.

ಸಿದ್ದರಾಮಯ್ಯ ನನ್ನ ಜೂನಿಯರ್‌
‘ರಮೇಶ ನನ್ನ ಶಿಷ್ಯನಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ರಾಜಕೀಯ ಗುರು ಆಗಿರಲೇ ಇಲ್ಲ. ನನ್ನ ಗುರು ಎಚ್. ವಿಶ್ವನಾಥ್. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ನನಗಿಂತಲೂ ಜೂನಿಯರ್‌. ನಾನೇ ಅವರಿಗೆ ಸೀನಿಯರ್‌. ಆದರೆ, ಬ್ರಿಟಿಷರ ರೀತಿ ಕುತಂತ್ರ ನಡೆಸಿ ಪಕ್ಷದಿಂದ ಹೊರ ಹೋಗುವಂತೆ ಮಾಡಿದರು’ ಎಂದು ವಾಗ್ದಾಳಿ ನಡೆಸಿದರು.

‌‌‘ರಮೇಶ ಅವಕಾಶವಾದಿ ರಾಜಕಾರಣಿ’
ಬೆಳಗಾವಿ:
‘ರಮೇಶ ಜಾರಕಿಹೊಳಿ ಅವಕಾಶವಾದಿ ರಾಜಕಾರಣಿ’ ಎಂದು ಅವರ ಸಹೋದರ, ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಮೇಶ ಈವರೆಗೆ ಹಲವರು ನನ್ನ ಗುರುಗಳು ಎಂದು ಹೇಳಿದ್ದಾರೆ. ಹಿಂದೊಮ್ಮೆ ಎಸ್.ಎಂ. ಕೃಷ್ಣ ಗುರು ಎಂದಿದ್ದರು. ಈಗ ಎಚ್.ವಿಶ್ವನಾಥ್ ಗುರು ಎನ್ನುತ್ತಿದ್ದಾರೆ. ಯುದ್ಧ ಘೋಷಣೆಯಾಗಿದೆ. ಇನ್ನೇನಿದ್ದರೂ ಚುನಾವಣಾ ಕಣದಲ್ಲೇ ಉತ್ತರ ಕೊಡುತ್ತೇವೆ’ ಎಂದರು.

‘ಗೋಕಾಕದಲ್ಲಿ ಅವರನ್ನು ಸೋಲಿಸುವುದೇ ನಮ್ಮ ಗುರಿ. ಇದಕ್ಕಾಗಿ ಹಲವು ತಿಂಗಳುಗಳಿಂದಲೂ ಪ್ರಚಾರ ಮಾಡುತ್ತಿದ್ದೇವೆ. ಲಖನ್‌ಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ. ನ. 18ರಂದು ನಾಮಪತ್ರ ಸಲ್ಲಿಸಲಾಗುವುದು’ ಎಂದರು.

‘ಗೋಕಾಕದಲ್ಲಿ ನಮ್ಮದೇ ಆದ ವೋಟ್‌ ಬ್ಯಾಂಕ್‌ ಇದೆ. ಹಣ ಹಾಗೂ ಮಂತ್ರಿಗಿರಿ ಆಸೆಯಿಂದ ಜೆಡಿಎಸ್– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಕೆಡವಿದ ಅನರ್ಹ ಶಾಸಕರನ್ನು ಜನರು ತಿರಸ್ಕರಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.