ADVERTISEMENT

ಬಿಜೆಪಿಯಿಂದ ರೌಡಿ ಮೋರ್ಚಾ ಆರಂಭ: ಎಂ. ಲಕ್ಷ್ಮಣ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 15:50 IST
Last Updated 6 ಡಿಸೆಂಬರ್ 2022, 15:50 IST

ಬೆಂಗಳೂರು: ‘ಬಿಜೆಪಿ ರೌಡಿ ಮೋರ್ಚಾ ಆರಂಭಿಸಿದ್ದು, 150 ರೌಡಿಗಳನ್ನು ಸೇರಿಸಿಕೊಳ್ಳಲು ಪಟ್ಟಿ ಮಾಡಿದೆ. 60 ರೌಡಿಗಳು ಆ ಮೋರ್ಚಾ ಸೇರಲು ಮುಂದಾಗಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಆರೋಪಿಸಿದರು.

ಪಕ್ಷದ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ 36 ರೌಡಿಶೀಟರ್‌ಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ. 24 ರೌಡಿಗಳ ಸೇರ್ಪಡೆ ಬಾಕಿ ಇದೆ’ ಎಂದರು.

‘2018ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯ ನಂತರ ಪೊಲೀಸ್ ಇಲಾಖೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 23 ಸಾವಿರ ರೌಡಿಗಳಿದ್ದರು. 2022 ಜೂನ್ ವೇಳೆಗೆ ಹಾಲಿ ರೌಡಿಗಳ ಸಂಖ್ಯೆ 33 ಸಾವಿರ ಆಗಿದೆ. 2018ರಲ್ಲಿ ಬೆಂಗಳೂರಿನಲ್ಲಿ 3 ಸಾವಿರ ರೌಡಿಗಳಿದ್ದರು. ಈಗ ಬೆಂಗಳೂರಿನ ಒಟ್ಟು 188 ಠಾಣೆಗಳಲ್ಲಿ 6,620 ರೌಡಿಗಳಿದ್ದಾರೆ. ಇನ್ನು ಸಕ್ರಿಯ ರೌಡಿಗಳ ಸಂಖ್ಯೆ ಬೆಂಗಳೂರಿನಲ್ಲಿ 1 ಸಾವಿರ, ರಾಜ್ಯದಲ್ಲಿ 8 ಸಾವಿರವಿದೆ’ ಎಂದರು.

ADVERTISEMENT

‘ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ನಳಿನ್‌ಕುಮಾರ್ ಕಟೀಲ್, ಸಿ.ಟಿ. ರವಿ, ಆರ್‌. ಅಶೋಕ ಹೇಳಿರುವುದು, ಈ ವಿಷಯದಲ್ಲಿ ಉಂಟಾಗಿರುವ ವಿವಾದವನ್ನು ತಣ್ಣಗಾಗಿಸುವ ಯತ್ನವಷ್ಟೆ. ಈ ರೌಡಿಗಳ ಪೈಕಿ 10 ಮಂದಿಗೆ ವಿಧಾನಸಭೆ ಚುನಾವಣೆ ಟಿಕೆಟ್, 26 ಜನರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ರೌಡಿಗಳಿಂದ ರೌಡಿಗಳಿಗಾಗಿ, ರೌಡಿಗಳಿಗೋಸ್ಕರ ಇದು ಬಿಜೆಪಿ ರೌಡಿ ಮೋರ್ಚಾದ ಘೋಷವಾಕ್ಯವಾಗಿದೆ’ ಎಂದೂ ದೂರಿದರು.

‘ಡಿ.ಕೆ. ಶಿವಕುಮಾರ್ ಉದ್ಯಮಿ. ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಅವರು ತಮ್ಮ ಆದಾಯ ಮಾಹಿತಿಯನ್ನು ಐಟಿಗೆ ಸಲ್ಲಿಸಿದ್ದಾರೆ. ಆದರೆ, ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುವ ಸಿ.ಟಿ. ರವಿಯವರೇ, ನಿಮ್ಮ ಆದಾಯದ ಮೂಲವೇನು’ ಎಂದು ಪ್ರಶ್ನಿಸಿದರು.

‘ಸಿ.ಟಿ. ರವಿ ಅವರು ಬೇನಾಮಿ ಹೆಸರಲ್ಲಿ ₹3 ಸಾವಿರ ಕೋಟಿ ಮೌಲ್ಯದ ಆಸ್ತಿ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ದಾಖಲೆ ಕಲೆಹಾಕುತ್ತಿದ್ದೇವೆ. ಬಳಿ ₹ 800 ಕೋಟಿಯಷ್ಟು ಮೌಲ್ಯದ ಬೇನಾಮಿ ಆಸ್ತಿಯ ದಾಖಲೆ ನಮ್ಮ ಬಳಿ ಇದೆ. ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.